ಸಾರಾಂಶ
ಹೊಸಪೇಟೆಯಲ್ಲಿ ಪೊಲೀಸ್ ಧ್ವಜ ದಿನಾಚರಣೆ, ಧ್ವಜ ಬಿಡುಗಡೆ । ಆಕರ್ಷಕ ಪಥ ಸಂಚಲನಕನ್ನಡಪ್ರಭ ವಾರ್ತೆ ಹೊಸಪೇಟೆ
ದೇಶದಲ್ಲಿ ಶಾಂತಿ, ನೆಮ್ಮದಿ ಇದ್ದರೆ ಅದು ಪೊಲೀಸರಿಂದ ಮಾತ್ರ ಸಾಧ್ಯ. ಪೊಲೀಸರ ಸೇವೆ, ಶೌರ್ಯ ಹಾಗೂ ಅರ್ಪಣಾ ಮನೋಭಾವದ ಸಂಕೇತವಾಗಿದ್ದಾರೆ ಎಂದು ವಿಜಯನಗರ ಎಸ್ಪಿ ಡಾ.ಬಿ.ಎಲ್. ಶ್ರೀಹರಿಬಾಬು ಹೇಳಿದರು.ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ಬುಧವಾರ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿದರು.
ಪೊಲೀಸ್ ಧ್ವಜ ದಿನಾಚರಣೆ ಇಲಾಖೆಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಪೊಲೀಸ್ ಅಧಿಕಾರಿಗಳ ಮತ್ತು ಪೊಲೀಸ್ ಸಿಬ್ಬಂದಿಯವರ ಸೇವೆ, ತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವ ದಿನವಾಗಿದೆ ಎಂದರು.ಪೊಲೀಸ್ ಕಲ್ಯಾಣ ನಿಧಿ:
2024-25ನೇ ಸಾಲಿನ ಪೊಲೀಸ್ ಕಲ್ಯಾಣ ನಿಧಿಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಧನ ಸಹಾಯದಲ್ಲಿ ಪೊಲೀಸ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 3,48,000 ರು. ಹಾಗೂ ಅವರ ಕುಟುಂಬದವರ ಕನ್ನಡಕ ಖರೀದಿಗೆ 33,200 ರು., ಮರಣೋತ್ತರ ಸಹಾಯ ಧನ 45,000 ರು.ಗಳು, ನಿವೃತ್ತ ಹೊಂದಿದ 26 ವಿವಿಧ ದರ್ಜೆಯ ಪೊಲೀಸ್ ಅಧಿಕಾರಿಗಳ ಸನ್ಮಾನಕ್ಕಾಗಿ 1,30,000 ರು.ಗಳು ಸೇರಿದಂತೆ ಒಟ್ಟು 5,56,200 ರು.ಗಳಷ್ಟು ಧನ ಸಹಾಯ ಮಾಡಲಾಗಿದೆ. ಪೊಲೀಸ್ ಕಲ್ಯಾಣ ನಿಧಿಯಲ್ಲಿ ಲಭ್ಯವಿರುವ ಹಣ ನಿಶ್ಚಿತ ಠೇವಣಿ. 30,00,000 ರು.ಗಳು, ಉಳಿತಾಯ ಖಾತೆ 3,50,796 ರು. ಸೇರಿದಂತೆ ಒಟ್ಟು ಮೊತ್ತ 33,50,796 ರು. ಕಲ್ಯಾಣ ನಿಧಿಯಲ್ಲಿ ಲಭ್ಯವಿದೆ. ಇಲ್ಲಿಯವರೆಗೆ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ 35 ಜನ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು ಅವರ ಕುಟುಂಬದವರು ಚಿಕಿತ್ಸೆ ಪಡೆದಿದ್ದಾರೆ ಎಂದರು.ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಿಂದ 2,59,352 ರು. ಸಹಾಯಧನ ನೀಡಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಯಲ್ಲಿ ನಿಶ್ಚಿತ ಠೇವಣಿ 14,00,000 ರು. ಹಾಗೂ ಉಳಿತಾಯ ಖಾತೆ 10,86,858 ಸೇರಿದಂತೆ ಒಟ್ಟು ಮೊತ್ತ 24,86,858 ಲಭ್ಯವಿದೆ ಎಂದರು.
ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಪ್ರಧಾನ ಕಚೇರಿಯಿಂದ ಹಂಚಿಕೆಯಾದ ಧ್ವಜಗಳನ್ನು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ನೀಡಲಾಗಿದ್ದು, ಪೊಲೀಸ್ ಧ್ವಜ ಮಾರಾಟದಿಂದ 24,48,700 ರು. ನಿಧಿಯನ್ನು ಸಂಗ್ರಹಿಸಲಾಗಿದೆ ಎಂದರು.ನಿವೃತ್ತ ಪಿಎಸ್‌ಐ ಎಂ.ಮುನಿರತ್ನಂ ಮಾತನಾಡಿ, ಪೊಲೀಸರು ತಮ್ಮ ಕುಟುಂಬವನ್ನು ಮರೆತು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸಮಾಜದ ಆಸ್ತಿ, ಪಾಸ್ತಿ, ಪ್ರಾಣ ರಕ್ಷಣೆ ಮಾಡುತ್ತಾರೆ. ಮೊದಲು ಸಮಾಜ ಪೊಲೀಸರಿಗೆ ಗೌರವ ನೀಡಿದಾಗ ಮಾತ್ರ ಸಮಾಜ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದಂತಾಗಲಿದೆ. ಜಿಲ್ಲೆಯ ಪೊಲೀಸರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಕಾರ್ಯನಿರ್ವಹಿಸಬೇಕು. ನಿವೃತ್ತ ಪೊಲೀಸರಿಗೆ ಜಿಲ್ಲೆಯಲ್ಲಿ ಉಪಾಹಾರ ಕೇಂದ್ರವನ್ನು ತೆರೆಯಬೇಕು ಎಂದರು.
ನಿವೃತ್ತ ಪಿಎಸ್‌ಐ ಕೆ.ಮಲಿಕ್ ಸಾಹೇಬ್ ಮಾತನಾಡಿ, ಪೊಲೀಸ್ ಸಿಬ್ಬಂದಿ ದುಶ್ಚಟಗಳಿಂದ ದೂರವಿರಿ ಹಾಗೂ ಮಹಿಳೆಯರಿಗೆ ಗೌರವಿಸುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದರು.ಧ್ವಜ ವಂದನೆ ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು. ನಿವೃತ್ತ ಪಿಎಸ್‌ಐ ಯು.ರವಿಕುಮಾರ್, ಎಎಸ್ಪಿ ಸಲೀಂ ಪಾಷಾ ಸೇರಿದಂತೆ ನಿವೃತ್ತ ಮಾಜಿ ಸೈನಿಕರು ಇದ್ದರು.