ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಾಮೂಲಿ ಕೊಡಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಕೌಶಿಕ ಗಡಿಯಲ್ಲಿರುವ ನಂದಿನಿ ಬೂತ್‌ನ ಮಾಲೀಕನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಹಿಡಿಯಲು ಹೋದ ಪೊಲೀಸರ ಮೇಲೆಯೇ ಆರೋಪಿ ಕಾರು ಹತ್ತಿಸಿ ಲಾಂಗ್ ಬೀಸಲು ಯತ್ನಿಸಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕೌಶಿಕ ಗಡಿಯಲ್ಲಿರುವ ನಂದಿನಿ ಬೂತ್‌ನ ಮಾಲೀಕ ಸತೀಶ್ ಎಂಬಾತನನ್ನು ಸೋಮವಾರ ಬೆಳಗ್ಗೆ ಲಾಂಗ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಕುರಿತಂತೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಮಾಧ್ಯಮಗಳೊಂದಿಗೆ ಮಾತನಾಡಿ, ಹತ್ಯೆಗೀಡಾದ ಸತೀಶ್ ತಂದೆ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಕೌಶಿಕ ಗ್ರಾಮದ ರಾಜ ಹಾಗೂ ಆತನ ಗ್ಯಾಂಗ್ ಹತ್ಯೆಗೀಡಾದ ಸತೀಶ್‌ನೊಂದಿಗೆ ಹಣಕಾಸಿನ ವಿಚಾರದಲ್ಲಿ ಆಗಾಗ ಜಗಳ ನಡೆಯುತ್ತಿದ್ದದ್ದಾಗಿ ತಿಳಿಯಿತು. ಇದೇ ರಾಜ ಮತ್ತವನ ಸಂಗಡಿಗರು ಸತೀಶ್ ಕ್ಯಾಂಟೀನಲ್ಲಿ ಟೀ ಸಿಗರೇಟ್ ಪಡೆದು ಹಣ ನೀಡದೆ ಜಗಳ ತೆಗೆಯುತ್ತಿದ್ದರು. ಇದರಿಂದ ಬೇಸತ್ತಿದ್ದ ಸತೀಶ್ ತನ್ನ ಕಡೆಯವರನ್ನು ಸೇರಿಸಿ ರಾಜ ಮತ್ತವನ ಸ್ನೇಹಿತರಿಗೆ ಚೆನ್ನಾಗಿ ಬಿಸಿ ಮುಟ್ಟಿಸಿದ್ದರು. ಇದರಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ರಾಜನ ಪರ ವಹಿಸಿಕೊಂಡು ಬಂದ ಅಶೋಕ ಎಂಬಾತ ಸತೀಶನಿಂದ ರಾಜನಿಗೆ ಆಸ್ಪತ್ರೆ ಖರ್ಚು ಕೊಡಿಸಿದ್ದ. ಅದಲ್ಲದೆ ರಾಜನಿಗೆ ವ್ಯಾಪಾರ ವಹಿವಾಟು ಮಾಡಲು ೮ ಲಕ್ಷ ಹಣ ಕೊಡಬೇಕೆಂದು ಸತೀಶ್‌ಗೆ ಹೆದರಿಸಿದ್ದನು. ಹಣ ಕೊಡದಿದ್ದರೆ ದಾಸರಕೊಪ್ಪಲಿನ ಪ್ರವೀಣನ ಕೊಲೆ ಮಾಡಿಸಿದ ರೀತಿ ನಿನ್ನನ್ನೂ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎಂದು ವಿವರಿಸಿದರು.
ನಂತರದ ದಿನಗಳಲ್ಲೂ ರಾಜ ಮತ್ತು ಆತನ ಸಹಚರರು ನಂದಿನಿ ಬೂತ್ ಹತ್ತಿರ ಹೋಗಿ ಸಿಗರೇಟ್, ಟೀ ಕುಡಿದು ಹಣ ಕೊಡದೆ ಜಗಳ ಮಾಡಿ ಬರುತ್ತಿದ್ದರು. ಜುಲೈ ೨೯ರ ಮುಂಜಾವಿನಲ್ಲಿ ರಾಜ ಮತ್ತು ಆತನ ಸಹಚರರು ಅಶೋಕನ ಕುಮ್ಮಕ್ಕಿನಿಂದ ನಂದಿನಿ ಮಿಲ್ಕ್ ಸೆಂಟರ್ ಹತ್ತಿರ ಕಾರಿನಲ್ಲಿ ಹೋಗಿ ಸಿಗರೇಟ್ ಹಾಗೂ ಟೀ ಪಡೆದುಕೊಂಡು ಜಗಳ ತೆಗೆದು ಅಂಗಡಿಯೊಳಗೆ ನುಗ್ಗಿ ಕೈನಲ್ಲಿದ್ದ ಲಾಂಗ್ ಮತ್ತು ಚಾಕುವಿನಿಂದ ಸತೀಶನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಸತೀಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿಗಳ ಬೆನ್ನುಹತ್ತಿ ಗಸ್ತಿನಲ್ಲಿದ್ದಾಗ ಸಂಜೆ ೭ ಗಂಟೆ ಸುಮಾರಿಗೆ ಪ್ರಮುಖ ಆರೋಪಿ ರಾಜ ತನ್ನ ಕಾರಿನಲ್ಲಿ ಹನುಮಂತಪುರ ಬಳಿ ಹೋಗುತ್ತಿದ್ದಾಗ ಬೆನ್ನುಹತ್ತಿದ ಪೊಲೀಸರು ಆತನಿಗೆ ಕಾರು ನಿಲ್ಲಿಸುವಂತೆ ಹೇಳಿದರೂ ನಿಲ್ಲಿಸದೆ ಹನುಮಂತಪುರದಿಂದ ಮುಂದೆ ಇರುವ ಕುಂತಿ ಬೆಟ್ಟದತ್ತ ಕಾರು ಚಲಾಯಿಸಿದ್ದಾನೆ. ನಂತರ ಕಾರನ್ನು ಬೆನ್ನಟ್ಟಿ ಜೀಪನ್ನು ಅಡ್ಡ ನಿಲ್ಲಿಸಿದ್ದಾರೆ. ಈ ವೇಳೆ ಕಾನ್ಸ್‌ಟೇಬಲ್ ಒಬ್ಬರ ಕಾಲಿನ ಮೇಲೆ ಕಾರು ಹತ್ತಿಸಿದ್ದಾನೆ. ನಂತರ ಕೈಲಿ ಲಾಂಗ್ ಹಿಡಿದು ಕೆಳಗಿಳಿದ ಆರೋಪಿ ರಾಜ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಎಚ್ಚರಿಕೆ ಕೊಟ್ಟ ನಂತರ ಆರೋಪಿ ಕಾಲಿಗೆ ಇಲಾಖೆಯ ರಿವಾಲ್ವಾರ್‌ನಿಂದ ಗುಂಡು ಹಾರಿಸಿ ರಾಜನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನುಳಿದ ಆರೋಪಿಗಳಾದ ಸಮುದ್ರವಳ್ಳಿ ಗ್ರಾಮದ ನಿವಾಸಿ ಅಶೋಕ್ ೩೨ ವರ್ಷ, ಹಾಸನ ತಾಲೂಕಿನ ಕೌಶಿಕ ಗ್ರಾಮದ ನಾಗೇಶ್‌ನನ್ನು ಸದ್ಯದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.ಬಾಕ್ಸ್‌ನ್ಯೂಸ್.........ರೌಡಿಸಂ ನಿಯಂತ್ರಣಕ್ಕೆ ಕ್ರಮ: ಎಸ್‌ಪಿ
ಹಾಸನದಲ್ಲಿ ರೌಡಿಸಂ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಸಂಜೆ ೭ರಿಂದ ರಾತ್ರಿ ೯ರವರೆಗೂ ನಗರದ ಬಾರ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಯಾರಾದರೂ ಗುಂಪು ಗುಂಪಾಗಿ ಜನರು ನಿಂತಿದ್ದರೆ ವಿಚಾರಣೆ ಮಾಡಲಾಗುತ್ತದೆ. ಕೆಐಡಿಬಿಐ ಸೇರಿದಂತೆ ಇತರೆ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಈಗಾಗಲೇ ಮನವಿ ಮಾಡಲಾಗಿದೆ. ಜೊತೆಗೆ ಮುಖ್ಯ ಸ್ಥಳಗಳಲ್ಲಿ ಪೊಲೀಸ್ ಗಸ್ತು ಬಿಡಲಾಗಿದೆ ಎಂದು ಎಸ್ಪಿ ಸುಜೀತಾ ತಿಳಿಸಿದರು.