ಸಾರಾಂಶ
ಧಾರವಾಡ: ಪೊಲೀಸ್ ವ್ಯವಸ್ಥೆಗೆ ಸೇರುವ ಪ್ರತಿ ಸಿಬ್ಬಂದಿ ಸಾರ್ವಜನಿಕ ಸೇವಕನಾಗಬೇಕೆ ಹೊರತು ಪೀಡಕರಾಗಬಾರದು. ಸಾರ್ವಜನಿಕರಿಗೆ ಜನಸ್ನೇಹಿಯಾಗಿ, ಜನಪರವಾಗಿ ತಮ್ಮ ವೃತ್ತಿ ನಿರ್ವಹಿಸಿ, ಯಶಸ್ವಿಯಾಗಬೇಕು ಎಂದು ರಾಜ್ಯ ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಹೇಳಿದರು.
ಇಲ್ಲಿಯ ಕಲಘಟಗಿ ರಸ್ತೆಯ ಗಿರಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಮಂಗಳವಾರ ಜರುಗಿದ 2ನೇ ತಂಡದ ಸಶಸ್ತ್ರ ಪೊಲೀಸ್ ಕಾನಸ್ಟೇಬಲ್‌ಗಳ ನಿರ್ಗಮನ ಪಥಸಂಚಲನದಲ್ಲಿ ಅವರು ಮಾತನಾಡಿದರು.ಅಧಿಕಾರಿ ಹಂತದ ಪೊಲೀಸರಿಗೆ ಇಲಾಖೆಯ ತರಬೇತಿಗಳು ಕೇಂದ್ರಿಕೃತವಾಗಿವೆ. ಪೊಲೀಸ್ ಪೇದೆಗಳಿಗೆ ಉತ್ತಮವಾದ ತರಬೇತಿ ನೀಡಿದರೆ, ಪೊಲೀಸ್ ವ್ಯವಸ್ಥೆ ಬಲವಾಗುತ್ತದೆ. ತರಬೇತಿಯಲ್ಲಿ ಪಠ್ಯಕ್ರಮ, ಪ್ರಾಯೋಗಿಕ ತರಬೇತಿ, ದೈಹಿಕ ತರಬೇತಿ ಅಳವಡಿಸಲಾಗಿದೆ. ಈಗ ತರಬೇತಿಯಲ್ಲಿ ಆಮೂಲಾಗ್ರ ಪರಿವರ್ತನೆ ತರಲಾಗಿದೆ ಎಂದರು.
ಪೊಲೀಸ್ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು. ಯಾವುದೇ ಅಕ್ರಮಗಳಲ್ಲಿ, ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿ ಆಗಬಾರದು. ಕಾನೂನು ಪಾಲನೆ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದ ಅವರು, ಮುಂದಿನ ಐದು ವರ್ಷಗಳಲ್ಲಿ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿ ಆಗುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿಯೂ ತಪ್ಪಿದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಪೊಲೀಸ್ ವ್ಯವಸ್ಥೆಯಿಂದ ಸಮಾಜಕ್ಕೆ, ಸಾರ್ವಜನಿಕರಿಗೆ ರಕ್ಷಣೆಯ ಬಲವಾದ ಭರವಸೆ ಇದೆ. ಪೊಲೀಸ್ ಇರುವುದು ಸಾರ್ವಜನಿಕರ ರಕ್ಷಣೆಗಾಗಿ, ಸಾರ್ವಜನಿಕ ಆಸ್ತಿಪಾಸ್ತಿ, ಜೀವ ರಕ್ಷಣೆಗಾಗಿ ನಮ್ಮ ಕರ್ತವ್ಯವಿರಬೇಕು. ಬಡವರ, ಮಹಿಳೆಯರ, ಅಸಹಾಯಕರ, ಮಕ್ಕಳ ರಕ್ಷಣೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಬಂದೋಬಸ್ತ್ ಸ್ಥಳದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯ ಬಲ ಪ್ರಯೋಗ ಮಾಡಬಾರದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಅಲೋಕ್ ಕುಮಾರ ಹೇಳಿದರು.
ಧಾರವಾಡ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ, ಎಂ.ಎಂ. ಯಾದವಾಡ ಶಾಲೆಯ ವರದಿ ವಾಚನ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಮಹಾನಗರ ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ ಇದ್ದರು.ತರಬೇತಿಯಲ್ಲಿ ಒಳಾಂಗಣ ಕ್ರೀಡೆಗಳಲ್ಲಿ ಪೊಲೀಸ್ ಕಾನ್ಸ್ಟೇಬಲ್‌ಗಳಾದ ಶ್ರೀನಿವಾಸ ಪಾಟೀಲ ಪ್ರಥಮ ಸ್ಥಾನ, ಅಜರ್ ಮೈಮೂದ್ ದ್ವಿತೀಯ ಸ್ಥಾನ, ಹನುಮಂತರಾಯ ತೃತೀಯ ಸ್ಥಾನವನ್ನು ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಪ್ರಶಿಕ್ಷಣಾರ್ಥಿಗಳಾದ ರಾಜಬಕ್ಷಿ ಪಿಂಜಾರ ಪ್ರಥಮ ಸ್ಥಾನ, ಸಂತೋಷ ಬಿರಾದಾರ ದ್ವಿತೀಯ ಸ್ಥಾನ, ನಿತೀನ್ ವೈ. ತೃತೀಯ ಸ್ಥಾನವನ್ನು ಮತ್ತು ಪೈರಿಂಗ್ ವಿಭಾಗದಲ್ಲಿ ಉಮೇಶ ಸಿದ್ದಪ್ಪ ಪೂಜೇರಿ ಪ್ರಥಮ ಸ್ಥಾನ, ನಾಗಲಿಂಗ ಕುರಿ ದ್ವಿತೀಯ ಸ್ಥಾನ ಮತ್ತು ಶಶಿಭೂಷಣ ಎಂ.ಬಿ. ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿಜೇತರಿಗೆ ಅಲೋಕ್ ಕುಮಾರ್ ಬಹುಮಾನ ವಿತರಿಸಿದರು.
ಸರ್ವೋತ್ತಮ ಪ್ರಶಸ್ತಿ ಶ್ರೀಶೈಲ ಚಿನಗುಂಡಿ ಪಡೆದರು. ನಂತರ ಸ್ಪೂರ್ಥಿ ಸ್ಮರಣಸಂಚಿಕೆ ಬಿಡುಗಡೆ ಕಾರ್ಯಕ್ರಮ ನೇರವೇರಿತು.