ಸಾರಾಂಶ
ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕನ್ನಡಪ್ರಭ ವಾರ್ತೆ ಬಳ್ಳಾರಿಪೊಲೀಸ್ ಸಿಬ್ಬಂದಿಗೆ ಶಿಸ್ತು ಮತ್ತು ಸಂಯಮ ಬಹಳ ಅವಶ್ಯಕ. ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದಿದಲ್ಲಿ ಮಾತ್ರ ಪೊಲೀಸರು ಕರ್ತವ್ಯದಲ್ಲಿ ದಕ್ಷತೆ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ತಿಳಿಸಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಮಾಜದ ಶಾಂತಿಯ ಬದುಕಿಗೆ ಮತ್ತು ಸಾರ್ವಜನಿಕರ ನೆಮ್ಮದಿಗೆ ಪೊಲೀಸರ ಸೇವೆ ಅತ್ಯಂತ ಶ್ಲಾಘನೀಯವಾದದ್ದು. ಪೊಲೀಸರು ಒತ್ತಡದಲ್ಲಿ ಕಾರ್ಯನಿರ್ವಹಿಸುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಪೊಲೀಸರು ಕರ್ತವ್ಯ ವೇಳೆ ಸಹನೆ, ತಾಳ್ಮೆಯನ್ನು ಕಳೆದುಕೊಳ್ಳಬಾರದು. ತಮ್ಮ ಆರೋಗ್ಯದ ಜೊತೆಗೆ ಕುಟುಂಬದ ಕಡೆಗೂ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಏಕೀಕರಣವಾದ ನಂತರ ಕರ್ನಾಟಕ ಪೊಲೀಸ್ ಪಡೆಯನ್ನು 1965ರ ಏಪ್ರಿಲ್ 2 ರಂದು ಕರ್ನಾಟಕ ಪೊಲೀಸ್ ಕಾಯ್ದೆಗೆ ಒಳಪಡಿಸಲಾಯಿತು. ಅದರ ಸ್ಮರಣೆಗಾಗಿ ಪ್ರತಿ ವರ್ಷ ಪೊಲೀಸ್ ಧ್ವಜ ದಿನವನ್ನಾಗಿ ರಾಜ್ಯದ ಎಲ್ಲ ಘಟಕಗಳಲ್ಲಿ ಆಚರಿಸಲಾಗುತ್ತದೆ.ಕಾನೂನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳ ಸಂರಕ್ಷಣೆ ಮಾಡಲು ಈ ದಿನವನ್ನು ಮುಡಿಪಾಗಿಡಲಾಗುತ್ತದೆ. ನಿತ್ಯ ಜೀವನದಲ್ಲಿ ಶಾಂತಿ ಸೌಹಾರ್ದತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತೋರಿದ ಶೌರ್ಯ, ಸಾಹಸ ಹಾಗೂ ನಿಸ್ವಾರ್ಥ ಸೇವೆಯನ್ನು ನೆನಪಿಸುವಂತಹ ದಿನ ಇದಾಗಿದೆ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುವುದು ಎಂದು ಎಸ್ಪಿ ಶೋಭಾರಾಣಿ ತಿಳಿಸಿದರು.
ಜಿಲ್ಲೆಯಲ್ಲಿ 2024 ರ ಏ.1 ರಿಂದ 2025 ರ ಏ.1 ರವರೆಗೆ ಒಟ್ಟು 37 ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಯೋನಿವೃತ್ತಿ ಮತ್ತು ಸ್ವಇಚ್ಛೆ ನಿವೃತ್ತಿ ಹೊಂದಿರುತ್ತಾರೆ. ಅದರಲ್ಲಿ ಪಿಎಸ್‌ಐ-7, ಆರ್‌ಎಸ್‌ಐ-2, ಎಎಸ್‌ಐ-13, ಎಆರ್‌ಎಸ್‌ಐ-09, ಸಿಡ್‌ಸಿಪಿ-03, ಎಸ್‌ಬಿಎ-02, ಎಎಒ-1 ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿವೃತ್ತಿ ಪಡೆದಿದ್ದಾರೆ ಎಂದು ತಿಳಿಸಿದ ಅವರು, 2024-25 ನೇ ಸಾಲಿನ ಉತ್ತಮ ಕಾರ್ಯ ನಿರ್ವಹಿಸಿದ 178 ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ₹ 1 ಲಕ್ಷ ನಗದು ಬಹುಮಾನ ನೀಡಲಾಗಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಡುತಿನಿ ಪೋಲಿಸ್ ಠಾಣೆಯ ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೆ.ವಿರುಪಾಕ್ಷಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯ ಸರ್ಕಾರದ ಸೇವೆಗಳಲ್ಲಿ ಪೊಲೀಸ್ ಸೇವೆ ಅತ್ಯಂತ ಮುಖ್ಯವಾದ ಸೇವೆಯಾಗಿದೆ. ಕಾನೂನು ಬಾಹಿರ ಚಟುವಟಿಕೆ ತಡೆಯುವಲ್ಲಿ ಮತ್ತು ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯ ದೊರಕಿಸಿ ಕೊಡುವ ಕಾರ್ಯದಲ್ಲಿ ಪೊಲೀಸ್ ಸೇವೆ ಕಾರ್ಯ ವಿಶಿಷ್ಟವಾದದ್ದು. ಪೊಲೀಸರು ಇಲ್ಲದಿದ್ದರೆ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಯಾರನ್ನು ಕಿಳರಿಮೆಯಿಂದ ಕಾಣಬಾರದು, ನಿಂದಿಸಬಾರದು, ಪೊಲೀಸರು ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಗೌರವ ಕಾಪಾಡಿಕೊಳ್ಳಬೇಕು. ಸಾರ್ವಜನಿಕರಲ್ಲಿ ಭಾಂದವ್ಯದ ವಾತಾವರಣ ಮೂಡಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು, ಕೆ.ವಿರುಪಾಕ್ಷಿ ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು. ನಂತರ ಪೊಲೀಸ್ ಧ್ವಜಗಳ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭ ಹೆಚ್ಚುವರಿ ಎಸ್ಪಿ ಕೆ.ಪಿ.ರವಿಕುಮಾರ್, ಎಸ್.ನವೀನ್‌ಕುಮಾರ್, ಜಿಲ್ಲಾ ಕಾರಗೃಹ ಅಧೀಕ್ಷಕರಾದ ಕೆ.ಲತಾ, ಡಿಎಆರ್ ನ ಡಿವೈಎಸ್‌ಪಿ ತಿಪ್ಪೇಸ್ವಾಮಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಕುಟುಂಬದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))