ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಪೊಲೀಸರು ಕರ್ತವ್ಯದ ಜೊತೆಗೆ ಶಿಸ್ತು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ, ಶಾಂತಿ ಸುವ್ಯವಸ್ಥೆಗಳನ್ನು ಕಾಪಾಡುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ. ಇದರಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಮಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆ ಯಶಸ್ವಿಯಾಗಿ ನಿರ್ವಹಿಸಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದರು.ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆಯ ಪ್ರಕ್ರಿಯೆ ಹಾಗೂ ಕರ್ತವ್ಯಗಳ ಬಗ್ಗೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ತಿಳಿವಳಿಕೆ ಕಾರ್ಯಕ್ರಮದಲ್ಲಿ ಚುನಾವಣೆಯಲ್ಲಿ ಹಾಗೂ ಕರ್ತವ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಪೊಲೀಸ್‌ರಿಗೆ ಮತ್ತು ಅಧಿಕಾರಿಗಳಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದರು. ಪೊಲೀಸ್ ಠಾಣೆಗಳಿಗೆ ಸೌಲಭ್ಯ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಕಾಳಜಿಯಿಂದಾಗಿ ಹೊಸ ಪೊಲೀಸ್ ಠಾಣೆಗಳಿಗೆ ಸಿಎಸ್‌ಆರ್ ಅನುದಾನದಲ್ಲಿ ೨೬ ವಾಹನಗಳು, ಪೊಲೀಸ್ ಕ್ವಾಟರ್‍ಸ್‌ಗೆ ರಸ್ತೆ, ನೀರು, ಸೋಲಾರ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ, ಅದೇ ರೀತಿ ಜಿಲ್ಲಾ ಕಚೇರಿಯಲ್ಲಿ ಸುಸಜ್ಜಿತವಾದ ವೀಡಿಯೋ ಕಾನ್ಫೆರೆನ್ಸ್ ಹಾಲ್‌ನ್ನು ಗೃಹ ಇಲಾಖೆ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಕಾನ್ಫೆರೆನ್ಸ್‌ನಲ್ಲಿ ಕಂಡು ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ಲೋಕಸಭೆಯ ಚುನಾವಣೆಯ ಬೆನ್ನಲ್ಲೆ ವಿಧಾನ ಪರಿಷತ್ ಚುನಾವಣೆಯು ಬಂದಿದೆ, ಇವುಗಳ ಮಧ್ಯೆ ಧಾರ್ಮಿಕ ಕಾರ್ಯಕ್ರಮಗಳ ಒತ್ತಡಗಳ ನಡುವೆಯೂ ಪೊಲೀಸರು ಹಗಲು ಇರಳು ಎನ್ನದೆ ಶ್ರಮಿಸಿ ಉತ್ತಮ ಕಾರ್ಯಚಟುವಟಿಕೆಗಳು ನಡೆಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸಿದವರಿಗೆ ನಗದು ಹಾಗೂ ಪ್ರಶಂಸನಾ ಪತ್ರ ಜಿಲ್ಲಾಧಿಕಾರಿ ವಿತರಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್, ನಾಗ್ತೆ, ಡಿ.ವೈ.ಎಸ್.ಪಿ. ನಂದಕುಮಾರ್, ಹರೀಶ್, ಸಿ.ಪಿ.ಐ. ಲೋಕೇಶ್ ಇದ್ದರು.