ಪೊಲೀಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು-ಐಜಿಪಿ ಡಾ. ರವಿಕಾಂತೇಗೌಡ

| Published : Nov 23 2025, 02:45 AM IST

ಪೊಲೀಸರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು-ಐಜಿಪಿ ಡಾ. ರವಿಕಾಂತೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರಿಗೆ ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ಸ್ಥಿಮಿತತೆಯೂ ಮುಖ್ಯ. ಸದೃಢವಾದ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ದಿನನಿತ್ಯ ಕೆಲಸದ ಒತ್ತಡದ ಮಧ್ಯೆ ಆರೋಗ್ಯದ ಬಗ್ಗೆಯೂ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ದಾವಣಗೆರೆ ಪೂರ್ವವಲಯ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದರು.

ಹಾವೇರಿ: ಪೊಲೀಸರಿಗೆ ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ಸ್ಥಿಮಿತತೆಯೂ ಮುಖ್ಯ. ಸದೃಢವಾದ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ದಿನನಿತ್ಯ ಕೆಲಸದ ಒತ್ತಡದ ಮಧ್ಯೆ ಆರೋಗ್ಯದ ಬಗ್ಗೆಯೂ ಸ್ವಲ್ಪ ಸಮಯ ಮೀಸಲಿಡಬೇಕು ಎಂದು ದಾವಣಗೆರೆ ಪೂರ್ವವಲಯ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಒತ್ತಡದ ಕೆಲಸದಲ್ಲಿ ಕ್ರೀಡಾ ಮನೋಭಾವ ಕುಂದಬಾರದು. ನಿತ್ಯವೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕ್ರೀಡಾಕೂಟದಲ್ಲಿ ಗೆದ್ದವರು ಬೀಗದೆ, ಸೋತವರು ಮುಂದೆ ಗೆಲ್ಲುತ್ತೇವೆಂಬ ಆತ್ಮಸ್ಥೈರ್ಯ ತಂದುಕೊಳ್ಳಬೇಕು. ಜಿಲ್ಲಾ ಪೊಲೀಸರು ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ಮಾಡಲಿ ಎಂದರು.

ಆಟೋಟದಲ್ಲಿ ಪಾಲ್ಗೊಂಡ ಖಾಕಿ: ಮೂರು ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣವು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ತುಂಬಿ ತುಳುಕುತ್ತಿತ್ತು. ಬೆಳಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಕ್ರೀಡಾಕೂಟಗಳಲ್ಲಿ ಪೊಲೀಸರು ತಮ್ಮ ವಯಸ್ಸಿನ ಹಂಗು ತೊರೆದು ಕ್ರೀಡೆಯಲ್ಲಿ ಪಾಲೊಂಡಿದ್ದರು. ನಿತ್ಯದ ಕೆಲಸದ ಒತ್ತಡ ಬಿಟ್ಟು ಆಟೋಟಗಳಲ್ಲಿ ಪಾಲ್ಗೊಂಡು ಸಂತಸದಿಂದ ಕಳೆದರು. ಶನಿವಾರ ಸಂಜೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯ ಅಂತಿಮ ಪಂದ್ಯಗಳು ಶಿಗ್ಗಾಂವಿ ಉಪ ವಿಭಾಗ ಹಾಗೂ ರಾಣಿಬೆನ್ನೂರು ಉಪ ವಿಭಾಗದ ತಂಡದ ನಡುವೆ ನೇರ ಹಣಾಹಣಿ ನಡೆದಿತ್ತು. ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರು ಗಾಳಿಯಲ್ಲಿ ಹುಸಿ ಗುಂಡು ಹಾರಿಸುವ ಮೂಲಕ ಹಗ್ಗಜಗ್ಗಾಟ ಸ್ಪರ್ಧೆಗೆ ಚಾಲನೆ ನೀಡಿದರು. ನೇರ ಹಣಾಹಣಿ ಸ್ಪರ್ಧೆಯಲ್ಲಿ ಶಿಗ್ಗಾಂವಿ ಉಪ ವಿಭಾಗದ ತಂಡವು ಎದುರಾಳಿ ರಾಣಿಬೆನ್ನೂರ ಉಪ ವಿಭಾಗ ತಂಡವನ್ನು ಮಣಿಸಿತು.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್ಪಿ ಎಂ.ಎಸ್. ಪಾಟೀಲ ಇತರರು ಇದ್ದರು.

ಗುಂಪು ಆಟ ವಿಜೇತರು: ಕಬಡ್ಡಿ ಸ್ಪರ್ಧೆಯಲ್ಲಿ ಹಾವೇರಿ ಡಿಎಆರ್ ತಂಡ ಪ್ರಥಮ ಹಾಗೂ ಹಾವೇರಿ ಉಪ ವಿಭಾಗ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ವಾಲಿಬಾಲ್‌ನಲ್ಲಿ ಶಿಗ್ಗಾಂವಿ ಉಪ ವಿಭಾಗ ಪ್ರಥಮ ಸ್ಥಾನ ಹಾಗೂ ಹಾವೇರಿ ಡಿಎಆರ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು..

ವೈಯಕ್ತಿಕ ವೀರಾಗ್ರಣಿ: ಮಹಿಳೆಯರ ವಿಭಾಗದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆಯ ರಾಜೇಶ್ವರಿ ಚವ್ಹಾಣ ಡಿಸ್ಕಸ್ ಥ್ರೋನಲ್ಲಿ ದ್ವಿತೀಯ, ಶಾಟ್‌ಫುಟ್ ದ್ವಿತೀಯ, 200 ಮೀ ಓಟದಲ್ಲಿ ಪ್ರಥಮ, ಉದ್ದ ಜಿಗಿತ ದ್ವಿತೀಯ, ಎಸ್‌ಎಲ್‌ಆರ್ ರೈಫಲ್ ಶೂಟ್‌ನಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅದೇ ರೀತಿ ಪುರುಷರ ವಿಭಾಗದಲ್ಲಿ ಹಾವೇರಿ ಡಿಎಆರ್ ವಿಭಾಗದ ಶರತ್ 100 ಮೀ ಓಟ ದ್ವಿತೀಯ, 200 ಮೀ ಪ್ರಥಮ, ಉದ್ದ ಜಿಗಿತ ಪ್ರಥಮ, ಎತ್ತರ ಜಿಗಿತ ದ್ವಿತೀಯ ಸ್ಥಾನ ಪಡೆದು ಪುರುಷರ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಗೆ ಭಾಜನರಾದರು.ಪೊಲೀಸರ ವಾರ್ಷಿಕ ಕ್ರೀಡಾಕೂಟಗಳಲ್ಲಿ ಹಾವೇರಿ ಡಿಎಆರ್ ತಂಡವು ಓವರ್ ಆಲ್ ಟೀಂ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಬಡ್ಡಿ ಪ್ರಥಮ, 4-100 ಮೀಟರ್‌ ರಿಲೇ ಪ್ರಥಮ, ವಾಲಿಬಾಲ್ ದ್ವಿತೀಯ ಸ್ಥಾನ ಪಡೆದುಕೊಂಡು ಆಲ್‌ರೌಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು.