ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಪೊಲೀಸ್‌ ‘ಸ್ಪೆಶಲ್ ಕ್ಲಾಸ್’

| Published : Jun 06 2024, 12:30 AM IST

ಸಾರಾಂಶ

ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸುವ ಮೂಲಕ ವಾಹನ ಚಲಾಯಿಸುತ್ತಿದ್ದ ಸವಾರರನ್ನು ಪತ್ತೆ ಹಚ್ಚಿ ಅವರಿಗೆ ವಿಶೇಷ ಮಾಹಿತಿ ನೀಡುವ ಕಾರ್ಯಕ್ರಮ ಸೋಮವಾರಪೇಟೆ ಪೊಲೀಸ್ ಉಪ ವಿಭಾಗದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ವಾಹನ ಸವಾರರು, ಪಾದಚಾರಿಗಳು ಸೇರಿದಂತೆ ಇತರ ವಾಹನಗಳಿಗೆ ಅವಘಡಗಳು ಸಂಭವಿಸದಂತೆ ಸುರಕ್ಷತೆಯಿಂದ ಚಲಾಯಿಸುವ ಸಂಬಂಧ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್‌.ವಿ. ಗಂಗಾಧರಪ್ಪ ಕಿವಿಮಾತು ಹೇಳಿದ್ದಾರೆ.

ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸುವ ಮೂಲಕ ವಾಹನ ಚಲಾಯಿಸುತ್ತಿದ್ದ ಸವಾರರನ್ನು ಪತ್ತೆ ಹಚ್ಚಿ ಅವರಿಗೆ ವಿಶೇಷ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಾಹನ ಸವಾರರು ತಮ್ಮ ಅಮೂಲ್ಯವಾದ ಜೀವಕ್ಕೆ ಬೆಲೆ ನೀಡಬೇಕು, ಜೊತೆಗೆ ಪಾದಚಾರಿಗಳು ಸೇರಿದಂತೆ ಇತರರ ಜೀವಕ್ಕೂ ರಕ್ಷಣೆ ನೀಡುವುದು ಜವಾಬ್ದಾರಿಯಾಗಿದೆ.

ಈ ನಿಟ್ಟಿನಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. ತಪ್ಪಿದಲ್ಲಿ ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೆಲ್ಮೆಟ್ ಧರಿಸದೆ, ಸಂಚಾರಿ‌ ನಿಯಮ ಪಾಲಿಸದ ಸವಾರರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡ ಪೊಲೀಸರು, ಸವಾರರಿಗೆ ವಿಶೇಷ ಅರಿವು ಜಾಗೃತಿ ಮೂಡಿಸುವ ತರಗತಿಗಳನ್ನು ತೆಗೆದುಕೊಂಡರು. ನಿಯಮಾನುಸಾರ ದಂಡ ತೆರುವ ಮೂಲಕ ವಾಹನಗಳನ್ನು ಪಡೆಯಬಹುದು ಎಂದರು.

ಸಂಚಾರಿ ನಿಯಮ‌ ಉಲ್ಲಂಘನೆ, ಅಸುರಕ್ಷಿತ ವಾಹನ ಚಾಲನೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ದುರ್ಘಟನೆಗಳು ಸಂಭವಿಸಿದ‌ ನಂತರ ಪಶ್ಚಾತಾಪ ಪಡುವ ಬದಲು ಪ್ರತಿನಿತ್ಯ ಸುರಕ್ಷತಾ ವಿಧಾನಗಳು ಅನುಸರಿಸಿ ತಮ್ಮ ಜವಾಬ್ದಾರಿ ನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಪೋಷಕರು ಯಾವುದೇ ಸಂದರ್ಭ ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನಡೆದಂತೆ ಎಚ್ಚರಿಕೆ ನೀಡಿದರು .

ಈಗಾಗಲೇ ಕೆಲವು ಪ್ರಕರಣಗಳು ನಡೆದಿರುವ ಬಗ್ಗೆ ಅವರು ಮಾಹಿತಿ ಒದಗಿಸಿದರು.

ವಾಹನ ತಪಾಸಣೆ:

ಕುಶಾಲನಗರ ಭಾಗದಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತ ಪೊಲೀಸರು ವಾಹನ ತಪಾಸಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲಿದ್ದಾರೆ, ಈ ಸಂದರ್ಭ ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಅವರು ಹೇಳಿದರು.

ಪಟ್ಟಣ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಕಾಶ್, ರಾಜೇಶ್ ಕೋಟ್ಯಾನ್, ಠಾಣಾಧಿಕಾರಿಗಳಾದ ಕುಸುಮ, ಲೋಹಿತ್, ಉಮಾ ಮತ್ತು ಸಿಬ್ಬಂದಿ ಇದ್ದರು.