ಪೊಲೀಸ್ ಠಾಣೆಗೆ ಅತಿಕ್ರಮಣದಾರರ ಮುತ್ತಿಗೆ: ಅಧಿಕಾರಿಗಳ ತರಾಟೆ

| Published : Dec 22 2024, 01:30 AM IST

ಪೊಲೀಸ್ ಠಾಣೆಗೆ ಅತಿಕ್ರಮಣದಾರರ ಮುತ್ತಿಗೆ: ಅಧಿಕಾರಿಗಳ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಗೂ ಹೊನ್ನಾವರ ತಾಲೂಕಿನ ನೂರಾರು ಸಂಖ್ಯೆ ಅರಣ್ಯ ಅತಿಕ್ರಮಣದಾರರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು.

ಹೊನ್ನಾವರ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನೆ ಕುರಿತು ಹೊನ್ನಾವರದಲ್ಲಿ ಸಂಘಟಿಸಿದ ಜಿಲ್ಲಾ ಮಟ್ಟದ ಅರಣ್ಯವಾಸಿಗಳ ಸ್ಫಂದನಾ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿದರು.

ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ನೂರಾರು ಸಂಖ್ಯೆ ಅರಣ್ಯ ಅತಿಕ್ರಮಣದಾರರು ಮೊದಲು ಹೊನ್ನಾವರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು.

ತಾಲೂಕಿನ ಚಿಕ್ಕನಕೋಡ ಗ್ರಾಪಂ ವ್ಯಾಪ್ತಿಯ ಕೆಂಚಗಾರದಲ್ಲಿನ ಅರಣ್ಯ ಅತಿಕ್ರಮಣ ತೆರವು ವಿಚಾರವಾಗಿ ಆರ್‌ಎಫ್‌ಒ ಮೇಲೆ ಪ್ರಕರಣ ದಾಖಲಾಗದಿರುವ ಕುರಿತು ಪಿಐ ವಸಂತ ಆಚಾರಿಯವರೊಂದಿಗೆ ಚರ್ಚಿಸಿ ಅಸಮಾಧಾನ ಹೊರಹಾಕಿದರು. ಕೆಲಕಾಲ ಚರ್ಚೆ ನಂತರ ಸಮರ್ಪಕ ಉತ್ತರ ಸಿಗದ ಕಾರಣ ನಂತರ ಅಲ್ಲಿಂದ ತೆರಳಿ ತಹಸೀಲ್ದಾರ್‌ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದರು.

ಈ ವೇಳೆ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯವಾಸಿಗಳು ತಹಸೀಲ್ದಾರ್ ಪ್ರವೀಣ ಕರಾಂಡೆಯೊಂದಿಗೆ ಚರ್ಚಿಸಿದರು. ಅರಣ್ಯವಾಸಿಗಳಲ್ಲಿ ಉಂಟಾಗಿರುವ ಆತಂಕದ ಬಗ್ಗೆ ರವೀಂದ್ರ ನಾಯ್ಕ ಮಾತನಾಡಿದರು. ಅರಣ್ಯ ಅತಿಕ್ರಮಣ ವಿಚಾರದಲ್ಲಿ ಅರಣ್ಯ ಅಧಿಕಾರಿಗಳು ತೋರುತ್ತಿರುವ ವರ್ತನೆ ಖಂಡನೀಯ. ಏಕಾಏಕಿ ಕೃಷಿ ಜಮೀನು ತೆರವುಗೊಳಿಸುವುದರಿಂದ ಅರಣ್ಯವಾಸಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ ಎಂದು ಸಮಸ್ಯೆ ವಿವರಿಸಿದರು. ಉತ್ತರಿಸಿದ ತಹಸೀಲ್ದಾರ್ ಪ್ರವೀಣ ಕರಾಂಡೆ, ಮೌಖಿಕವಾಗಿ ಚರ್ಚೆ ನಡೆದರೆ ಸಾಲದು. ಎಲ್ಲವೂ ಲಿಖಿತವಾಗಿ, ಕಾನೂನು ಬದ್ದವಾಗಿಯೇ ಆಗಬೇಕಿದೆ. ಆಗ ಯಾರಿಗೂ ಅನ್ಯಾಯವಾಗುವುದಿಲ್ಲ. ಇನ್ಮುಂದೆ ಅರಣ್ಯವಾಸಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಡಿಎಫ್‌ಒ ಯೋಗೀಶ್ ಸಿ.ಕೆ. ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಅರಣ್ಯವಾಸಿಗಳು ತಮಗೆ ನ್ಯಾಯಕೊಡಿಸಿ ಎಂದು ಆಗ್ರಹಿಸಿದರು.

ಈ ಎಲ್ಲ ಬೆಳವಣಿಗೆ ಕುರಿತಂತೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದರು. ಇದಕ್ಕೆ ಅರಣ್ಯವಾಸಿಗಳು ಗರಂ ಆಗಿ, ಈಗಲೇ ಮೇಲಧಿಕಾರಿ ಕರೆಯಿಸಿ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಗದ್ದಲ ಮುಂದುವರೆಯಿತು. ಕೊನೆಯಲ್ಲಿ ಡಿವೈಎಸ್‌ಪಿ ಗಣೇಶ್ ಕೆ.ಆರ್. ಭೇಟಿ ನೀಡಿ, ಈಗಾಗಲೇ ಅರಣ್ಯ ಇಲಾಖೆಯ ಮೇಲಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಲಾಗಿದೆ.‌ ಈ ಕುರಿತು ದಿನಾಂಕ ನಿಗದಿ ಪಡಿಸಿ ಸಂಘಟನೆಯ ಮುಖ್ಯಸ್ಥರಿಗೆ ತಿಳಿಸುತ್ತಾರೆ ಎಂದರು.

ಚರ್ಚೆ ಸಂದರ್ಭದಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳು ಸಾಗುವಳಿ ಕ್ಷೇತ್ರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕು ಎಂಬ ಆಗ್ರಹ ಕೇಳಿಬಂತು. ಇತ್ತೀಚಿಗೆ ಅರಣ್ಯ ಅಧಿಕಾರಿಗಳ ಪತ್ರಕ್ಕೆ ಅರಣ್ಯವಾಸಿಗಳು ತೀವ್ರ ತರದ ವಿರೋಧ ವ್ಯಕ್ತಪಡಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಪದೇ ಪದೇ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಯಿಂದ ತೀವ್ರ ತರದ ದೌರ್ಜನ್ಯ, ಕಿರುಕುಳ ನೀಡುತ್ತಿರುವ ಅರಣ್ಯ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಅರಣ್ಯವಾಸಿಗಳು ಬಿಗಿಪಟ್ಟು ಹಿಡಿದು, ಆಕ್ರೋಶ ವ್ಯಕ್ತಪಡಿಸಿದರು. ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಮೇಲೆ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಹಾಗೂ ಪ್ರಕರಣದ ಶಿಕ್ಷೆಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ₹೨೫,೦೦೦ ದಂಡ ಕುರಿತು ಚರ್ಚೆಯಾಗಿ ಇಂತಹ ಪ್ರಕರಣ ದಾಖಲಿಸುವುದನ್ನು ಕೈಬಿಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಆಗ್ರಹಿಸಿದರು.

ನಂತರ ಮಾಧ್ಯಮದವರೊಂದಿಗೆ ರವೀಂದ್ರ ನಾಯ್ಕ ಮಾತನಾಡಿ, ಭೂಕಬಳಿಕೆ ಕಾಯ್ದೆ ಅಡಿ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಹತ್ತು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವ ಮಾಹಿತಿ ಇದೆ. ಸ್ಪಷ್ಟ ಅಂಕಿ-ಸಂಖ್ಯೆ ನೀಡಿ ಎಂದು ಪಟ್ಟು ಹಿಡಿಯಲಾಗಿದೆ. ಈ ಎಲ್ಲ ವಿಚಾರ ಮುಂದಿನ ಸಭೆಯಲ್ಲಿ ಅಧಿಕಾರಿಗಳು ಚರ್ಚಿಸುವ ಭರವಸೆ ನೀಡಿದ ಹಿನ್ನೆಲೆ ಇಂದಿನ ಹೋರಾಟ ಮೊಟಕುಗೊಳಿಸಲಾಗಿದೆ. ಹೊಸ ಅತಿಕ್ರಮಣಕ್ಕೆ ನಾವು ಬೆಂಬಲಿಸುವುದಿಲ್ಲ. ಕೆಂಚಗಾರ ಪ್ರಕರಣದಲ್ಲಿ ನಮ್ಮ ಸತ್ಯಶೋಧನಾ ಸಮಿತಿ ಪರಿಶೀಲಿಸಿದಾಗ ಅರಣ್ಯ ಅಧಿಕಾರಿಗಳು ಎಂಟು ವರ್ಷ ಹಳೆಯದಾದ ತೆಂಗಿನಮರ ನಾಶಪಡಿಸಿದ್ದಾರೆ ಎನ್ನುವುದು ಕಂಡುಬಂದಿದೆ. ಹಾಗಾದರೆ ಎಂಟು ವರ್ಷ ಅರಣ್ಯ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.