ಅಕ್ರಮ ಚಟುವಟಿಕೆ ಶಂಕೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಪಬ್‌, ಕ್ಲಬ್‌, ಡ್ಯಾನ್ಸ್‌ ಬಾರ್‌ಗಳು ಹಾಗೂ ಹೋಟೆಲ್‌ಗಳ ಮೇಲೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಾರಥ್ಯದಲ್ಲಿ ಪೊಲೀಸರು ಶುಕ್ರವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

-ಅಕ್ರಮ ಚಟುವಟಿಕೆ ಶಂಕೆ ಹಿನ್ನೆಲೆ ಆಯುಕ್ತ ಸೀಮಂತ್ ಕುಮಾರ್ ಸಾರಥ್ಯದಲ್ಲಿ ಶುಕ್ರವಾರ ರಾತ್ರಿ ದಾಳಿ । ಕಾನೂನಿಗೆ ಗೌರವ ಕೊಡಿ ಎಂದ ಗೃಹ ಸಚಿವ

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮ ಚಟುವಟಿಕೆ ಶಂಕೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಪಬ್‌, ಕ್ಲಬ್‌, ಡ್ಯಾನ್ಸ್‌ ಬಾರ್‌ಗಳು ಹಾಗೂ ಹೋಟೆಲ್‌ಗಳ ಮೇಲೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಾರಥ್ಯದಲ್ಲಿ ಪೊಲೀಸರು ಶುಕ್ರವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ನಗರದಲ್ಲಿರುವ 843 ಪಬ್/ಬಾರ್‌ಗಳು, 42 ಡ್ಯಾನ್ಸ್ ಬಾರ್‌ಗಳು ಮತ್ತು ಕ್ಲಬ್‌ಗಳು, 53 ಮನರಂಜನಾ ಸ್ಥಳಗಳು. 522 ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ರಾತ್ರಿ ತಪಾಸಣೆ ನಡೆಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಈ ಕಾರ್ಯಾಚರಣೆ ವೇಳೆ ನಗರದ ಕೆಲವು ಪಬ್‌ಗಳಿಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಯಮಗಳ ಪಾಲನೆಯ ಬಗ್ಗೆ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ನಿಗದಿತ ಸಮಯದ ನಂತರವೂ ಕಾರ್ಯನಿರ್ವಹಿಸುತ್ತಿದ್ದ ಕೆಲವು ವ್ಯಾಪಾರ ಸ್ಥಳಗಳನ್ನು ಮುಚ್ಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ನಗರದಲ್ಲಿ ಸಾರ್ವಜನಿಕರ ಸುರಕ್ಷತೆ, ಮಹಿಳೆಯರ ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಇಲಾಖೆಯ ಆದ್ಯತೆಯಾಗಿದೆ. ಪಬ್‌ಗಳು, ಬಾರ್‌ಗಳು, ಕ್ಲಬ್‌ಗಳು, ಹೋಟೆಲ್‌ ಹಾಗೂ ಇತರೆ ಮನರಂಜನಾ ಕೇಂದ್ರಗಳ ನಿರ್ವಾಹಕರು ನಿಯಮ/ಷರತ್ತುಗಳನ್ನು ಪಾಲಿಸಬೇಕಿದೆ. ಆದರೆ ಕೆಲವು ನಿಯಮ ಉಲ್ಲಂಘನೆ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

355 ಕೊಪ್ಟಾ ಪ್ರಕರಣ ದಾಖಲು:

ಈ ಪರಿಶೀಲನೆ ವೇಳೆ 292 ಪಿಟಿ ಕೇಸ್, 355 ಕೊಪ್ಟಾ ಪ್ರಕರಣಗಳು, 3 ಅಬಕಾರಿ ಪ್ರಕರಣಗಳು ಮತ್ತು 01 ಕೆ.ಪಿ ಆಕ್ಟ್ ಪ್ರಕರಣವನ್ನು ದಾಖಲಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದ್ ಮಾಡಿ 2584 ದ್ವಿ-ಚಕ್ರ ವಾಹನಗಳು, 692 ತ್ರಿ-ಚಕ್ರ ವಾಹನಗಳು, 748 ನಾಲ್ಕು ಚಕ್ರದ ವಾಹನಗಳನ್ನು ತಪಾಸಣೆ ನಡೆಸಲಾಯಿತು. ಅವುಗಳಲ್ಲಿ 187 ದ್ವಿ-ಚಕ್ರ ವಾಹನಗಳು, 2 ತ್ರಿ-ಚಕ್ರ ವಾಹನಗಳು, 5 ನಾಲ್ಕು ಚಕ್ರದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಅಲ್ಲದೆ ಸಂಚಾರ ವಿಭಾಗದಿಂದ ಒಟ್ಟು 8780 ವಾಹನಗಳನ್ನು ತಪಾಸಣೆ ಮಾಡಿ, 113 ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವ ಪ್ರಕರಣಗಳು, 364 ಏಕಮುಖ ಸಂಚಾರ ಪ್ರಕರಣಗಳು, 34 ನಂಬರ್ ಪ್ಲೇಟ್ ಇಲ್ಲದ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳ ಪೈಕಿ 114 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

ಬಾಕ್ಸ್,,,,,

ಪಬ್‌, ರೆಸ್ಟೋರೆಂಟ್‌ ನಿಯಮಪ್ರಕಾರ ನಡೆಸಿ: ಪ್ರಿಯಾಂಕ್‌

ಡ್ಯಾನ್ಸ್‌ ಬಾರ್‌, ರಿಕ್ರಿಯೇಷನಲ್‌ ಕ್ಲಬ್‌, ಪಬ್‌ಗಳು ಸಮಯ ಮೀರಿ ವ್ಯವಹರಿಸುತ್ತಿರುವ ದೂರಿನ ಹಿನ್ನೆಲೆ 700-800 ಕಡೆ ದಾಳಿ ಮಾಡಿದ್ದಾರೆ. ಈ ವೇಳೆ ಬೇರೆ ಬೇರೆ ಚಟುವಟಿಕೆಗಳು ಸಹ ಗಮನಕ್ಕೆ ಬಂದಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಲೋಬಲ್‌ ಸಿಟಿ, ಕಾಸ್ಮೋಪಾಲಿಟನ್ ಎಂಬ ಕಾರಣಕ್ಕೆ 11 ಗಂಟೆ ಬದಲಿಗೆ 1 ಗಂಟೆವರೆಗೆ ಅವಕಾಶ ನೀಡಲಾಗಿದೆ. 1 ಗಂಟೆಯವರೆಗೆ ಅವಕಾಶ ಎಂದರೆ ಬೆಳಗ್ಗೆ 3-4 ಗಂಟೆವರೆಗೆ ನಡೆಸಿದರೆ ಒಪ್ಪಲ್ಲ. ನೀವು ಸಹ ಕಾನೂನಿಗೆ ಗೌರವ ಕೊಡಿ ಎಂದು ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.