ಸಾರಾಂಶ
₹3.9 ಕೋಟಿ ವೆಚ್ಚದ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಜನಸಾಮಾನ್ಯರ ಕಷ್ಟ ಸುಖ ವಿಚಾರಿಸುವುದಕ್ಕಾಗಿಯೇ ಇರುವ ಪೊಲೀಸ್ ಠಾಣೆಗಳಲ್ಲಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.ತಾಲೂಕಿನ ಚಿತ್ರಹಳ್ಳಿ ಗೇಟ್‌ನಲ್ಲಿ ₹3.9 ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜನರಿಗೆ ರಕ್ಷಣೆ ಸಿಗಲಿ ಎನ್ನುವ ಉದ್ದೇಶದಿಂದ ಇಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವಸತಿ ನಿಗಮದಿಂದ ₹12.50 ಕೋಟಿ ಮಂಜೂರಾಗಿದ್ದು, ಗೃಹಮಂತ್ರಿಗಳೊಂದಿಗೆ ಮಾತನಾಡಿ ಹೆಚ್ಚಿನ ವಸತಿ ಗೃಹಗಳನ್ನು ನಿರ್ಮಿಸಲು ಪ್ರಯತ್ನಿಸಲಾಗುವುದು. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊತ್ತು ಠಾಣೆಗೆ ಬರುವವರನ್ನು ಗದರಿಸುವ ಬದಲು ನಿಮ್ಮ ಹಂತದಲ್ಲಿಯೇ ಬಗೆಹರಿಸಲು ಪ್ರಯತ್ನಿಸಿ ಎಂದು ಹೇಳಿದರು.ಕ್ಷುಲ್ಲಕ ಕಾರಣಗಳಿಗೆ ಜಾತಿ ನಿಂದನೆ ಪ್ರಕರಣ ದಾಖಲಿಸುವುದು ನಿಲ್ಲಬೇಕು. ಯಾವುದೇ ಕಾರಣಕ್ಕೂ ಕಾನೂನುಗಳು ದುರುಪಯೋಗವಾಗಬಾರದು. ಸಾರ್ವಜನಿಕರಿಗೆ ರಕ್ಷಣೆ ನೀಡುವುದಕ್ಕಾಗಿಯೇ ಕಾನೂನಿರುವುದು ಎನ್ನುವುದನ್ನು ಪೊಲೀಸರು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು.
ಸಂದರ್ಭಕ್ಕನುಗುಣವಾಗಿ ಯೋಚಿಸಿ ಮಾನವೀಯತೆ ದೃಷ್ಟಿಯ ನಿರ್ಧಾರ ತೆಗೆದುಕೊಳ್ಳಬೇಕು. ಠಾಣೆಗೆ ಬಂದವರ ಮೇಲೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಕಳಿಸಿದರೆ ಇತ್ಯರ್ಥವಾಗಲು ವರ್ಷಗಟ್ಟಲೆ ಸಮಯ ಬೇಕಾಗುತ್ತದೆ. ಆದ್ದರಿಂದ ಪೊಲೀಸ್ ಠಾಣಾ ಹಂತದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿ ಸಹಬಾಳ್ವೆಯಿಂದ ಬದುಕುವ ವ್ಯವಸ್ಥೆಗೆ ಸಹಕಾರ ನೀಡುವುದು ಒಳ್ಳೆಯದು ಎಂದರು.ಪೊಲೀಸ್ ಠಾಣೆ ಎಂದರೆ ದೇವಾಲಯವಿದ್ದಂತೆ. ಜನಸಾಮಾನ್ಯರು ಧೈರ್ಯದಿಂದ ಠಾಣೆಗೆ ಬರುವಂತಹ ವ್ಯವಸ್ಥೆ ನಿರ್ಮಾಣವಾಗುವ ರೀತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು ತಿಳಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಕುಮಾರಸ್ವಾಮಿ, ವೃತ್ತ ನಿರೀಕ್ಷಕ ಚಿಕ್ಕಣ್ಣ, ಚಿತ್ರಹಳ್ಳಿ ಪೊಲೀಸ್ ಠಾಣೆ ಎಸ್ಐ ಕಾಂತರಾಜ್, ಚಿತ್ರಹಳ್ಳಿ ದೇವರಾಜ್, ಈಶಣ್ಣ, ಅಂಕಳಪ್ಪ, ನಾಗರಾಜ್, ಪ್ರವೀಣ್, ರಂಗಸ್ವಾಮಿ ಇದ್ದರು.