ಈದ್ಗಾ ಮೈದಾನದಲ್ಲಿ ಪೊಲೀಸ್ ಬಿಗಿ ಭದ್ರತೆ

| Published : Apr 03 2025, 12:33 AM IST

ಸಾರಾಂಶ

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಈದ್ಗಾ ಮೈದಾನದ ವಿವಾದ ಮತ್ತಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಈದ್ಗಾ ಮೈದಾನದ ವಿವಾದ ಮತ್ತಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಎದ್ದು ಕಾಣುತ್ತಿವೆ.

ರಂಜಾನ್ ಹಬ್ಬದ ನಂತರ ಮೈದಾನಕ್ಕೆ ಬೇಲಿ ಹಾಕಿ ಯಾವುದೇ ಖಾಸಗಿ ವಾಹನಗಳು ಒಳಗೆ ಪ್ರವೇಶಿಸದಂತೆ ತಡೆಹಿಡಿಯಲಾಗಿತ್ತು. ಇದನ್ನು ಹಿಂದೂಪರ ಸಂಘಟನೆಗಳು ವಿರೋಧಿಸಿ ಮಂಗಳವಾರ ಪ್ರತಿಭಟನೆ ನಡೆಸಿದ್ದರು. ವಾತಾವರಣ ಬಿಗಡಾಯಿಸುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ್ದ ಜಿಲ್ಲಾ ರಕ್ಷಣಾಧಿಕಾರಿಗಳು ಬೇಲಿಯನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರ ಪ್ರಕಾರ ಬೇಲಿಯನ್ನು ತೆರವುಗೊಳಿಸಲಾಗಿತ್ತು. ಆದರೆ ಬೇಲಿಯನ್ನು ತೆಗೆದುಹಾಕಿದ್ದರೂ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿತ್ತು.

ಬುಧವಾರ ಮುಸ್ಲಿಂ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಮೈದಾನ ಹಾಗೂ ಡಿಸಿ ಕಚೇರಿ ಸುತ್ತಮುತ್ತ ಭಾರೀ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮೈದಾನದೊಳಗೆ ಯಾವ ವಾಹನಗಳೂ ಪ್ರವೇಶಿಸದಂತೆ ನಿರ್ಭಂದ ಹೇರಲಾಗಿತ್ತು. ಅಲ್ಲದೆ ಡಿಸಿ ಕಚೇರಿ ಎದುರಿನ ಮೈದಾನದ ರಸ್ತೆಯನ್ನು ಶ್ರೀ ರಾಘವೇಂದ್ರಸ್ವಾಮಿ ಮಠದವರೆಗೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಮೈದಾನದ ಆವರಣದಲ್ಲಿರುವ ಎಸ್‌ಬಿಐ ಬ್ಯಾಂಕ್ ಒಂದನ್ನು ಬಿಟ್ಟು ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಸದ್ಯಕ್ಕೆ ವಿವಾದ ತಣ್ಣಗಾದಂತೆ ಕಂಡರೂ ಮುಂದಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳು ಸೇರಿದಂತೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಹಿಂದಿನ ಸ್ಥಿತಿಯನ್ನೇ ಮುಂದುವರಿಸಿ ಸಾರ್ವಜನಿಕರ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಿದರೆ ಯಾವ ತೊಂದರೆಯೂ ಆಗುವುದಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ವಾಹನಗಳ ನಿಲುಗಡೆಗೆ ಅವಕಾಶವಿಲ್ಲ: ಡೀಸಿ

ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಪಾಲಿಕೆ ಆಯುಕ್ತರು, ಅಧಿಕಾರಿಗಳ ಸಭೆಯಲ್ಲಿ ಕೆಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಈ ಮೈದಾನ ದಾಖಲೆಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದ್ದು, ಈ ಸಂಬಂಧ ಸಮಿತಿಯವರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಪಾಲಿಕೆಯಲ್ಲಿರುವ ದಾಖಲೆಗಳನ್ನೂ ಕೂಡಾ ಪರಿಶೀಲಿಸಬೇಕಾಗಿದೆ. ಅಲ್ಲದೆ ಮೂಲ ದಾಖಲೆಗಳು ಕೂಡಾ ಬೇಕಾಗಿದ್ದು ಎಲ್ಲವನ್ನೂ ಪರಿಶೀಲಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ವಿವಾದಿತ ಮೈದಾನದಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶವಿಲ್ಲ. ಅಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅನ್ಯಕೋಮಿನ ಮುಖಂಡರು ಅನೇಕ ಸಮಸ್ಯೆಗಳ ಬಗ್ಗೆಯೂ ಗಮನಕ್ಕೆ ತಂದಿದ್ದಾರೆ. ಖಬರಸ್ತಾನ್ ಜಮೀನಿನ ಬಗ್ಗೆಯೂ ಕೆಲವೊಂದು ಮಾಹಿತಿ ನೀಡಿದ್ದಾರೆ. ಎಲ್ಲವನ್ನೂ ಗಮನಿಸಿ ದಾಖಲೆ ಪರಿಶೀಲನೆಗೆ ಸಮಯ ಕೇಳಿದ್ದೇವೆ. ಅಲ್ಲಿಯವರೆಗೆ ಆ ಮೈದಾನದಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಈ ಅಸ್ತಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪರಿಶೀಲನೆ ಅಗತ್ಯ ಇರುವುದರಿಂದ ಸದ್ಯಕ್ಕೆ ಬ್ಯಾರಿಕೇಡ್ ಹಾಕಿ ಆ ಜಾಗವನ್ನು ರಕ್ಷಿಸಲಾಗುವುದು ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ನಗರದಲ್ಲಿ ಯವುದೇ ಅಹಿತಕರ ಘಟನೆ ನಡೆದಿಲ್ಲ. ಪರಿಸ್ಥಿತಿ ಶಾಂತವಾಗಿದೆ. ಕಾನೂನಾತ್ಮಕವಾಗಿ ಪರಿಶೀಲನೆ ಮಾಡಿದ ಬಳಿಕ ಮುಂದಿನ ತೀರ್ಮಾನ ತಿಳಿಸಲಾಗುವುದು. ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.