ರಾಘು ಕಾಕರಮಠ
ಅಂಕೋಲಾ: ನಿಮ್ಮ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿಲ್ಲವೇ? ಡೋಂಟ್ ವರಿ. ನೀವು, ಮದುವೆ ಹಾಗೂ ಶುಭ ಸಮಾರಂಭಗಳಿಗೆ ಹೋಗುವಾಗ ಮನೆಗಳಿಗೆ ಬೀಗ ಹಾಕಿ ನೆಮ್ಮದಿಯಿಂದ ಹೋಗಿ ಬರಬಹುದು. ರಾತ್ರಿ ವೇಳೆ ಮನೆಗೆ ಕಳ್ಳರು ನುಗ್ಗಿ ಕಳ್ಳತನ ಮಾಡುತ್ತಾರೆ ಎಂಬ ಭಯ ಪಡಬೇಕಿಲ್ಲ, ಏಕೆಂದರೆ, ಇನ್ಮುಂದೆ ನಿಮ್ಮ ಮನೆ ಕಾಯುವ ಜವಾಬ್ದಾರಿ ಪೊಲೀಸರದ್ದು,ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮನೆ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎಂಬ ಯೋಜನೆ ರೂಪಿಸಿದೆ. ಇದರಡಿ ಪೊಲೀಸರೇ ಖುದ್ದು ಬೀಗ ಹಾಕಿದ ಮನೆಗಳ ಬಳಿ ತೆರಳ ವ್ಯವಸ್ಥಿತ ಗಸ್ತು ನಡೆಸಲಿದ್ದಾರೆ.
ಅನುಸರಿಸುವ ಮಾರ್ಗಸಾರ್ವಜನಿಕರು ನೂತನ ಸೇವೆಯ ಲಾಭ ಪಡೆಯಲು ತಮ್ಮ ಲೋಕೇಷನ್ (ಜಿಪಿಆರ್‌ಎಸ್), ಮನೆಯಿಂದ ಹೊರ ಹೋಗುವ ಹಾಗೂ ಮರಳಿ ಬರುವ ನಿಖರ ಸಮಯದ ಮಾಹಿತಿ, ಮನೆ ಮುಂದೆ ನಿಂತು ತೆಗೆದಿರುವ ಒಂದು ಫೋಟೋ (ಸೆಲ್ಪಿ)ಯನ್ನು ಪೊಲೀಸರಿಗೆ ವ್ಯಾಟ್ಸ್ ಆ್ಯಪ್ ಮೂಲಕ ತಿಳಿಸಬೇಕು. ಕರ್ತವ್ಯದಲ್ಲಿರುವ ಸಿಬ್ಬಂದಿ ಪ್ರಸ್ತುತ ಮಾಹಿತಿಯನ್ನು ರಾತ್ರಿ ಬೀಟ್ ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುತ್ತಾರೆ.
ಬೀಟ್ ಸಿಬ್ಬಂದಿ ರಾತ್ರಿ ಕನಿಷ್ಠ ಎರಡು ಬಾರಿ ಮಾಹಿತಿ ದಾಖಲಿಸಿದವರ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಈ ನೂತನ ವಿಧಾನಕ್ಕಾಗಿ ಪೊಲೀಸ್ ಇಲಾಖೆ ಪ್ರತ್ಯೇಕ ಮೊಬೈಲ್ ಬಳಸುತ್ತದೆ. ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಮಾಹಿತಿ ನೀಡಿದವರು ಹಾಗೂ ಅವರ ಕುಟುಂಬದ ಸದಸ್ಯರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ.
ಇಲಾಖೆಯ ಮೂಲ ಉದ್ದೇಶವೇನು?
ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಆಗದಂತೆ ತಡೆಗಟ್ಟುವುದು ರಾತ್ರಿ ಗಸ್ತು ಪರಿಣಾಮಕಾರಿಯಾಗಿಸುವುದು, ಅಪರಾಧ ತಡೆಗಟ್ಟುವಿಕೆಯಲ್ಲಿ ನಾಗರಿಕರ ಪಾತ್ರ ಏನು ಎಂಬುದನ್ನು ತಿಳಿಸುವ ಮೂಲಕ ಅವರ ಸಹಕಾರ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.ನೂತನ ಯೋಜನೆ ಲಾಭವೇನು
ಮನೆಯಿಂದ ತೆರಳಿದಾಗ ಭದ್ರತೆ ಖಾತರಿ, ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವ ಅವಶ್ಯ ಇಲ್ಲ, ಪ್ರವಾಸ, ಪ್ರಯಾಣ ಸಂಪೂರ್ಣ ಎಂಜಾಯ್ ಮಾಡಬಹುದು. ಸಂಬಂಧಿಕರು ಅಥವಾ ನೆರೆ-ಹೊರೆಯವರಿಗೆ ಕಿರಿಕಿರಿ ತಪ್ಪುತ್ತದೆ. ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಬಾಂಧವ್ಯ ವೃದ್ಧಿ ಪೊಲೀಸ್ ಇಲಾಖೆ ಮೇಲಿನ ವಿಶ್ವಾಸ ಹೆಚ್ಚಳದ ಉಪಯೋಗ ಪಡೆದುಕೊಳ್ಳಬಹುದು.ನೋಡಲ್ ಅಧಿಕಾರಿ ನೇಮಕ
ಹೌಸ್ ಬೀಟ್ ಸಿಸ್ಟಮ್‌ಗೆ ನೋಡಲ್ ಅಧಿಕಾರಿ ನೇಮಿಸಿದ್ದು, ಸಾರ್ವಜನಿಕರು ಈ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ವಾಟ್ಸ್ ಆ್ಯಪ್ ಮೊಬೈಲ್ ಸಂಖ್ಯೆ 8277988303 ಸಂಪರ್ಕಿಸಿ ತಮ್ಮ ಹೆಸರು, ವಿಳಾಸ, ಗೂಗಲ್ ಲೊಕೇಶನ್, ಮನೆಯಿಂದ ಹೊರ ಹೋಗಿ ಹಿಂತಿರುಗುವ ಅವಧಿ ಹಾಗೂ ಮೊಬೈಲ್ ಸಂಖ್ಯೆಯ ಮಾಹಿತಿ ನೀಡಬೇಕಾಗಿರುತ್ತದೆ.ಮನೆ ಕಳವು ಪ್ರಕರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆ ಸಿಸ್ಟಮ್ ಎಂಬ ಯೋಜನೆ ರೂಪಿಸಿದೆ. ನಾಗರಿಕರು ಇದರ ಸದುಪಯೋಗ ಪಡಿದುಕೊಳ್ಳಬೇಕು. ಪೊಲೀಸ್ ಇಲಾಖೆ ಎಂದೂ ಸಹ ನಿಮ್ಮೊಂದಿಗೆ ಇದೆ ಎಂದು ಅಂಕೋಲಾ ಪೊಲೀಸ್ ಠಾಣೆ ಸಿಪಿಐ ಚಂದ್ರಶೇಖರ ಮಠಪತಿ ಹೇಳಿದರು.