ಸಾರಾಂಶ
ನಗರ ಠಾಣೆಯ ಪಿಎಸೈ ಪರಶುರಾಮ್ ಶಂಕಾಸ್ಪದ ಸಾವು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈ ಪ್ರಕರಣ ಇಲಾಖೆಯಲ್ಲಿನ ವರ್ಗಾವಣೆ ದಂಧೆಯ ಕರಾಳಮುಖಗಳ ಅನಾವರಣಗೊಳಿಸಿದಂತಿದೆ.
ಕನ್ನಡಪ್ರಭವಾರ್ತೆ ಯಾದಗಿರಿ
ನಗರ ಠಾಣೆಯ ಪಿಎಸೈ ಪರಶುರಾಮ್ ಶಂಕಾಸ್ಪದ ಸಾವು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈ ಪ್ರಕರಣ ಇಲಾಖೆಯಲ್ಲಿನ ವರ್ಗಾವಣೆ ದಂಧೆಯ ಕರಾಳಮುಖಗಳ ಅನಾವರಣಗೊಳಿಸಿದಂತಿದೆ. ನೇಮಕ, ವರ್ಗಾವಣೆ ಆಗಲು ರಾಜಕೀಯ ಪ್ರಭಾವಿಗಳ ವಸೂಲಿ ಪತ್ರಕ್ಕಾಗಿ "ಹಣ "ಹಣಿಗಳು ನಡೆದಿರುವ ಬಗ್ಗೆ ಹೊಸ ಹೊಸ ಮಾಹಿತಿಗಳು ಪರಶುರಾಮ್ ಸಾವಿನ ನಂತರ ಖಾಕಿಪಡೆಯ ವಲಯದಲ್ಲೇ ಹರಿದಾಡುತ್ತಿವೆ. ಇತ್ತೀಚೆಗೆ ನಡೆದ ಪಿಎಸೈ ಹಾಗೂ ಕಾನ್ಸಟೇಬಲ್ ವರ್ಗಾವಣೆಯಲ್ಲಿ ಇಂತಹ ಆರೋಪಗಳು ಪೊಲೀಸರ ಬಾಯಲ್ಲೇ ಕೇಳಿಬರುತ್ತಿವೆ. ಪ್ರಭಾವಿಗಳ ಶಿಫಾರಸ್ಸು ಪತ್ರ ಕೊಡಿಸುವುದರಿಂದ ಹಿಡಿದು, ಆದೇಶ ಪ್ರತಿ ಕೊಡಿಸುವವರೆಗೆ ಇಲಾಖೆಯವರೇ ಕೆಲವರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ ಎಂದು ಇತ್ತೀಚೆಗೆ ನಿವೃತ್ತರಾದ ಇಲಾಖೆಯ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ಹೆಚ್ಚು ಬೇಡಿಕೆ ಇರುವ ಸ್ಥಳಗಳಿಗೆ ಸ್ಪರ್ಧೆ ಬಹಳ ಇರುತ್ತದೆ ಎಂದಿದ್ದಾರೆ.ಅಂದರೆ, ಉದಾಹರಣೆಗೆ ಯಾದಗಿರಿ ಜಿಲ್ಲೆಯ ವಡಗೇರಾ, ಶಹಾಪುರ, ಭೀಮರಾಯನ ಗುಡಿ, ಸುರಪುರ, ಮುಂತಾದ ಕಡೆಗಳಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಅಕ್ರಮ ಮರಳು ಗಣಿಗಾರಿಕೆ-ಸಾಗಾಟ , ಮಟ್ಕಾ, ಇಸ್ಪೀಟ್ ಕ್ಲಬ್ಬುಗಳು, ಮದ್ಯ ಮಾರಾಟ, ಅಕ್ಕಿ ಅಕ್ರಮ ದಂಧೆಗಳು ಹೆಚ್ಚಾಗಿ ನಡೆಯುವ ಸ್ಥಳಗಳಲ್ಲಿ "ಬಂಡವಾಳ ಹೂಡಿಕೆ "ಗೆ ಅನೇಕರು ಪ್ರಯತ್ನಿಸುತ್ತಿರುತ್ತಾರಂತೆ. ಅದರಲ್ಲೂ, ಕೃಷ್ಣಾ ಭೀಮಾ ನದಿಪಾತ್ರಕ್ಕಂಟಿಕೊಂಡ ಸ್ಥಳಗಳಿಗೆ ಭಾರಿ ಜಿದ್ದಾಜಿದ್ದಿಯೇ ನಡೆದಿರುತ್ತದೆ. ಅಕ್ರಮಕೋರರೇ ತಮಗೆ ಬೇಕಿದ್ದ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು ಪತ್ರದಿಂದ ಹಿಡಿದು, ಹಣ ನೀಡುವವರೆಗೂ ಪ್ರಯತ್ನಿಸುತ್ತಾರೆ. ಇದು ಅವರ ಅಕ್ರಮ ದಂಧೆಗಳಿಗೂ ರಕ್ಷಣೆ ನೀಡುವುದರ ಜೊತೆಗೆ, ಹೂಡಿಕೆ ಮಾಡಿದ್ದ ಅಧಿಕಾರಿಗಳ ಗಳಿಕೆಗೂ ಇಲ್ಲಿ ಆಪತ್ತಿಲ್ಲ ಎಂದು ಅವರು ತಿಳಿಸಿದರು.