ಸಾರಾಂಶ
-
- - - ಕನ್ನಡಪ್ರಭ ವಾರ್ತೆ ದಾವಣಗೆರೆಕಲ್ಲು ತೂರಾಟದಿಂದ ಬಿಗುವಿನ ಸ್ಥಿತಿ ನಿರ್ಮಾಣವಾಗಿದ್ದ ನಗರದ ಅರಳೀ ಮರ ವೃತ್ತ, ಶ್ರೀ ವೆಂಕಟೇಶ್ವರ ವೃತ್ತ, ಆನೆಕೊಂಡ ಬಡಾವಣೆ, ಮಟ್ಟಿಕಲ್ಲು, ನೂರಾನಿ ಶಾದಿ ಮಹಲ್ ಪ್ರದೇಶದಲ್ಲಿ ಪೊಲೀಸ್ ಸರ್ಪಗಾವಲು ಮುಂದುವರಿದ್ದು, ಜನಜೀವನ ದಿನವಿಡೀ ಸಹಜ ಸ್ಥಿತಿಯಲ್ಲಿ ಮುಂದುವರಿದಿತ್ತು.
ನಗರದಲ್ಲಿ ಆಟೋ ರಿಕ್ಷಾ, ಬಸ್ಸುಗಳ ಸಂಚಾರ ಎಂದಿನಂತೆ ಸಾಗಿತ್ತು. ಅಂಗಡಿ, ಹೋಟೆಲ್, ವಾಣಿಜ್ಯ ಮಳಿಗೆ, ಬೇಕರಿ, ಔಷಧಿ ಅಂಗಡಿಗಳು ತೆರೆದಿದ್ದವು. ಹಳೇ ಭಾಗದಲ್ಲಿ ಪರಿಸ್ಥಿತಿ ಸಹಜವಾಗುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು. ಅಷ್ಟೇ ಅಲ್ಲ, ಶುಕ್ರವಾರ ಸಂಜೆ ಪೊಲೀಸ್ ಇಲಾಖೆಯಿಂದ ಪಥ ಸಂಚಲನ ಮಾಡುವ ಮೂಲಕ ಕಿಡಿಗೇಡಿಗಳಿಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದೆ.ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳು, ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ಇದ್ದು, ಪೊಲೀಸ್ ಅಧಿಕಾರಿಗಳು, ಪೊಲೀಸ್ ವಾಹನಗಳು ಗಸ್ತು ನಡೆಸಿವೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆರ್.ಹಿತೇಂದ್ರ ದಾವಣಗೆರೆಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿ, ಐಜಿಪಿ, ಎಸ್‌ಪಿ ಸೇರಿದಂತೆ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಸಲಹೆ, ಸೂಚನೆ ನೀಡಿದರು. ಹಗಲಿರುಳು ಜನಸಾಮಾನ್ಯರು, ಆಸ್ತಿ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ, ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಿಂದೆ ಮುಂದೆ ನೋಡುವುದಿಲ್ಲವೆಂಬ ಸಂದೇಶವನ್ನು ಸಂಜೆ ನಡೆದ ಪೊಲೀಸ್ ಪಥ ಸಂಚಲನ ಸಾರಿದೆ.
- - -ಬಾಕ್ಸ್-1
* ಸರ್ಕಾರದ ವೈಫಲ್ಯ ಕಾರಣ: ಶಾಸಕ ಹರೀಶ ಕಿಡಿದಾವಣಗೆರೆ: ದಾವಣಗೆರೆ ನಗರದಲ್ಲಿ ಕಲ್ಲು ತೂರಾಟ ಘಟನೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಆರೋಪಿಸಿದ್ದಾರೆ. ನಾಗಮಂಗಲ ಘಟನೆಯು ಅಸಮರ್ಥ ಗೃಹ ಸಚಿವರ ಕಾರಣದಿಂದ ಆಗಿತ್ತು. ಇದೀಗ ದಾವಣಗೆರೆಯಲ್ಲೂ ಆಗಿದೆ. ಇದೊಂದು ಪೂರ್ವಯೋಜಿಕ ಕೃತ್ಯವಾಗಿದೆ. ಘಟನೆಯಿಂದ ಹಿಂದುಗಳು ಆತಂಕಗೊಂಡಿಲ್ಲ. ನಾವು ಹೆದರುವ ಪ್ರಶ್ನೆಯೇ ಇಲ್ಲ. ನಮ್ಮ ಸಹನೆ, ತಾಳ್ಮೆಯನ್ನು ಕೆಣಕಬೇಡಿ ಎಂಬುದಾಗಿ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳಿಗೆ ಎಚ್ಚರಿಸಿದರು.
- - -ಬಾಕ್ಸ್-2
* ಬಂಧಿತರ ಕುಟುಂಬಗಳ ಅಳಲುದಾವಣಗೆರೆಯಲ್ಲಿ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗಿದೆ ಎಂದು ಎರಡೂ ಕೋಮಿನ ಬಂಧಿತರ ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಐವರನ್ನು ಪೊಲೀಸರು ಕರೆದೊಯ್ದಿದ್ದಾರೆ. ನಮ್ಮ ಹುಡುಗರು ಗಣೇಶನ ಮೂರ್ತಿ ಬಳಿಯೇ ಇದ್ದರು. ಅಂಥವರನ್ನು ಪೊಲೀಸರು ಕರೆದೊಯ್ದಿದ್ದು, ತಕ್ಷಣ ಮನೆಗೆ ವಾಪಸ್ ಕಳಿಸಿ ಎಂಬುದಾಗಿ ಒತ್ತಾಯಿಸುತ್ತಿದ್ದುದು ಸಾನ್ಯವಾಗಿತ್ತು. ಯಾರೋ ಏನೋ ಮಾಡಿದರೆಂಬ ಕಾರಣಕ್ಕೆ ಮನೆಯಲ್ಲಿ ಮಲಗಿದ್ದವರನ್ನು ಪೊಲೀಸರು ಕರೆದುಕೊಂಡು ಹೋದರೆ ಏನರ್ಥ? ತಪ್ಪು ಮಾಡದ ತಮ್ಮ ಮಕ್ಕಳನ್ನು ತಕ್ಷಣ ಬಿಡುವಂತೆ ಮಹಿಳೆಯರು, ವಯೋವೃದ್ಧೆಯರು ಕಣ್ಣೀರಿಟ್ಟರು.- - -
ಬಾಕ್ಸ್-3 * ಸಮಯಪ್ರಜ್ಞೆ ಮೆರೆದ ಸ್ಥಳೀಯ ಜನತೆದಾವಣಗೆರೆ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟದ ಬೆನ್ನಲ್ಲೇ ಗಲಾಟೆ ಮಾಡಲೆಂದೇ ಖಾಲಿ ಬಿಯರ್ ಬಾಟಲುಗಳನ್ನು ಪುಂಡರು ಸಂಗ್ರಹಿಸಿಕೊಂಡಿದ್ದ ವಿಚಾರ ಸ್ಥಳೀಯರಿಂದ ಬೆಳಕಿಗೆ ಬಂದಿದೆ. ಖಾಲಿ ಬಿಯರ್ ಬಾಟಲುಗಳನ್ನು ಸಂಗ್ರಹಿಸಿ, ಒಂದು ಕಡೆ ಗುಡ್ಡೆ ಹಾಕಿದ್ದನ್ನು ಗಲಾಟೆಯ ವೇಳೆ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದು, ತಕ್ಷಣವೇ ಪೊಲೀಸರ ಗಮನಕ್ಕೆ ತಂದಿದ್ದರು. ಬಿಯರ್ ಬಾಟಲುಗಳನ್ನು ಬೀಸಿ, ಮತ್ತಷ್ಟು ಅನಾಹುತ ಮಾಡುವ ಪುಂಡರ ಲೆಕ್ಕಾಚಾರ ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ.
- - - ಬಾಕ್ಸ್-4 * ನಾವೇನು ತಪ್ಪು ಮಾಡಿದ್ವಿ?: ಮಹಿಳೆಯರ ಆಕ್ರೋಶದಾವಣಗೆರೆ: ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟದ ಬೆನ್ನಲ್ಲೇ ಆನೆಕೊಂಡ ಬಡಾವಣೆ, ಮಟ್ಟಿಕಲ್ಲು ಪ್ರದೇಶದ ಮನೆಗಳ ಮೇಲೆ ಪುಂಡರು ದಾಳಿ ಮಾಡಿದ್ದರಿಂದ ಸ್ಥಳೀಯ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮದೇನೂ ತಪ್ಪಿಲ್ಲ. ಆದರೂ, ನಮ್ಮ ಮನೆಗಳ ಮೇಲೆ, ವಾಹನಗಳ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ. ನಾವು ಮನೆಯಲ್ಲಿ ಒಬ್ಬೊಬ್ಬರೇ ಇರುತ್ತವೆ. ಇಂತಹ ಘಟನೆಯಿಂದಾಗಿ ನಮ್ಮ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂಬ ಅರಿವಿಲ್ಲವೇ ಎಂದು ಮಹಿಳೆಯರು ಕಿಡಿಕಾರಿದರು.ಮನೆಯಲ್ಲಿ ಮಲಗಿದ್ದವರು, ಊಟ ಮಾಡುತ್ತಿದ್ದವರು, ಕೆಲಸಕ್ಕೆ ಹೋಗಿ ಬಂದವರು, ಊಟ ಮಾಡಿ ಮನೆ ಮುಂದೆ ನಿಂತವರು, ಮಾತನಾಡುತ್ತಿದ್ದವರನ್ನು ಪೊಲೀಸರು ಎಳೆದೊಯ್ದಿದ್ದಾರೆ. ನಾವು ತಿರುಗಿಬಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎಂಬುದನ್ನು ಪುಂಡರ ಗುಂಪು ಅರ್ಥ ಮಾಡಿಕೊಳ್ಳಲಿ ಎಂದು ಎಚ್ಚರಿಸಿದರು.
- - - (-ಫೋಟೋಗಳಿವೆ)