ಕನ್ನಡಪ್ರಭ ವಾರ್ತೆ ಬೆಳಗಾವಿನಗರದ ಗಾಂಧಿ ನಗರ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಐಟಿಐ ವಿದ್ಯಾರ್ಥಿಯೊಬ್ಬ ಮೃತಪಟ್ಟ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ನಗರದಲ್ಲಿ ಮಾಂಜಾ ದಾರ ಮಾರಾಟದ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಅವರ ಸೂಚನೆ ಮೇರೆಗೆ ಶನಿವಾರ ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು, ನಿಷೇಧಿತ ಮಾಂಜಾ ದಾರದ ಮೂರು ಬಂಡಲ್‌ಗಳನ್ನು ವಶಪಡಿಸಿಕೊಂಡು ಒಂದು ಪ್ರಕರಣ ದಾಖಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಗಾಂಧಿ ನಗರ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಐಟಿಐ ವಿದ್ಯಾರ್ಥಿಯೊಬ್ಬ ಮೃತಪಟ್ಟ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದು, ನಗರದಲ್ಲಿ ಮಾಂಜಾ ದಾರ ಮಾರಾಟದ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಅವರ ಸೂಚನೆ ಮೇರೆಗೆ ಶನಿವಾರ ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು, ನಿಷೇಧಿತ ಮಾಂಜಾ ದಾರದ ಮೂರು ಬಂಡಲ್‌ಗಳನ್ನು ವಶಪಡಿಸಿಕೊಂಡು ಒಂದು ಪ್ರಕರಣ ದಾಖಲಿಸಿದ್ದಾರೆ.ಮಹಾಂತೇಶ ನಗರದ ಧ್ರುವ ಸಂತೋಷ ಕರಜಗಿ (19) ಪರೀಕ್ಷೆ ಮುಗಿಸಿ ಹೋಗುತ್ತಿದ್ದಾಗ ಈ ಮಾಂಜಾ ದಾರಕ್ಕೆ ಸಿಲುಕಿ ಇತ್ತೀಚೆಗಷ್ಟೇ ಮೃತಪಟ್ಟಿದ್ದ. ಖಾಸಗಿ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ. ಪರೀಕ್ಷೆ ಬರೆಯಲು ಸಂಬಂಧಿಕರೊಬ್ಬರ ಬೈಕ್ ಪಡೆದು ಕಾಲೇಜಿಗೆ ತೆರಳಿದ್ದ. ಪರೀಕ್ಷೆ ಮುಗಿಸಿ ಬೈಕ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ ಗಾಂಧಿ ನಗರದ ಬಳಿ ಕುತ್ತಿಗೆಗೆ ಮಾಂಜಾ ದಾರ ಸಿಲುಕಿದ್ದು, ತೀವ್ರ ರಕ್ತಸ್ರಾವದಿಂದ ಬೈಕ್ ಮೇಲೆಯೇ ಆತ ಅಸನೀಗಿದ್ದ.
ಪೂರೈಕೆ ಮೂಲದ ಜಾಡು:ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಬೆನ್ನಲ್ಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ನಗರದಲ್ಲಿ ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿ ಗಾಂಜಾ ದಾರವನ್ನು ಜಪ್ತಿ ಮಾಡಲಾಗುತ್ತಿದೆ. ವಶಪಡಿಸಿಕೊಂಡ ಮಾಂಜಾ ದಾರ ಎಲ್ಲಿಂದ ಪೂರೈಕೆಯಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮುಂಬೈಯಿಂದ ಪೂರೈಕೆಯಾಗಿದೆಯೇ ಅಥವಾ ಬೇರೆ ಪ್ರದೇಶಗಳಿಂದ ತರಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸ್ ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ತಿಳಿಸಿದ್ದಾರೆ.
ನಗರದ ವಿವಿಧೆಡೆ ಮಾಂಜಾ ದಾರದ ಅಕ್ರಮ ಮಾರಾಟ ನಡೆಯುತ್ತಿದೆಯೇ ಎಂಬುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮಾಂಜಾ ದಾರದ ಮಾರಾಟ ಹಾಗೂ ಬಳಕೆಯಿಂದ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಎದುರಾಗುತ್ತಿರುವ ಅಪಾಯದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿರುವುದು ನಗರದ ರಸ್ತೆ ಸುರಕ್ಷತೆ ಹಾಗೂ ನಿಷೇಧಿತ ದಾರದ ಮಾರಾಟದ ಮೇಲಿನ ನಿಯಂತ್ರಣದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗಾಳಿಪಟ ಹಾರಾಟದ ನೆಪದಲ್ಲಿ ಮಾರಾಟವಾಗುವ ಮಾಂಜಾ ದಾರ, ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಗೋಚರಿಸದ ಮಾರಕ ಬಲೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಹೀಗಾಗಿ ದುರಂತ ಸಂಭವಿಸಿದ ಬಳಿಕ ದಾಳಿ ನಡೆಸುವುದಕ್ಕಿಂತ, ಮಾಂಜಾ ದಾರದ ಮಾರಾಟ, ಪೂರೈಕೆ ಹಾಗೂ ಬಳಕೆಯ ಮೇಲೆ ಪೊಲೀಸರು ನಿರಂತರ ನಿಗಾ ವಹಿಸುವ ಅಗತ್ಯವಿದೆ.---------
ಕೋಟ್.....ಮಾಂಜಾ ದಾರಕ್ಕೆ ಯುವಕನೋರ್ವ ಬಲಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, ಮಾಂಜಾ ದಾರವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾಂಜಾ ದಾರ ಎಲ್ಲಿಂದ ಪೂರೈಕೆಯಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಕಾಶ ನಿಕಮ್, ನಗರ ಪೊಲೀಸ್ ಆಯುಕ್ತ