ಸಾರಾಂಶ
ರೈತರಿಂದ ಭತ್ತ ಖರೀದಿಸಿ ಮೂರು ವರ್ಷ ಕಳೆದರೂ ಹಣ ನೀಡದೇ ಸತಾಯಿಸಿದ ವಂಚಕ ದಲಾಲಿ ವರ್ತಕನನ್ನು ಇಲ್ಲಿನ ಪೊಲೀಸರು ರೈತರ ಪ್ರತಿಭಟನೆಗೆ ಮಣಿದು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರಟಗಿ
ರೈತರಿಂದ ಭತ್ತ ಖರೀದಿಸಿ ಮೂರು ವರ್ಷ ಕಳೆದರೂ ಹಣ ನೀಡದೇ ಸತಾಯಿಸಿದ ವಂಚಕ ದಲಾಲಿ ವರ್ತಕನನ್ನು ಇಲ್ಲಿನ ಪೊಲೀಸರು ರೈತರ ಪ್ರತಿಭಟನೆಗೆ ಮಣಿದು ಬಂಧಿಸಿದ್ದಾರೆ.ಇಲ್ಲಿನ ರೈತ ಸಂಘಟನೆಗಳು ಮತ್ತು ಭತ್ತ ಕೊಟ್ಟವರು ಪೊಲೀಸ್ ಠಾಣೆ ಮುಂದೆ ಮಂಗಳವಾರ ಪ್ರತಿಭಟಿಸಿದ ನಂತರವೇ ಪ್ರಭಾವಿ ವರ್ತಕ ಮತ್ತು ಆರ್.ಎಸ್.ಎಸ್. ಮತ್ತು ಹಿಂದೂಪರ ಸಂಘಟನೆಯ ಮುಖಂಡ ವರ್ತಕ ರಾಜುಗೌಡ ತಂದೆ ಚಂದ್ರಶೇಖರಗೌಡನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ವಂಚಕ ರಾಜುಗೌಡನಿಗೆ ಸಿಂಧನೂರು ತಾಲೂಕಿನ ಏಳು ಮೈಲಿನ ಕ್ಯಾಂಪಿನ ರೈತ ಮಹಿಳೆ ಶಿವಮ್ಮ ಪೂಜಾರಿ ಸೇರಿದಂತೆ ಮೂವರು ರೈತರು ಒಟ್ಟು 1310 ಚೀಲ ಭತ್ತ ಮಾರಾಟ ಮಾಡಿದ್ದರು.ಒಟ್ಟು ₹16 ಲಕ್ಷ ರೂಪಾಯಿ ಮೌಲ್ಯದ ಭತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿಯೇ ರಾಜುಗೌಡನ ವಿರುದ್ಧ ಈಗ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಮೇ 19ರಂದು ಇಲ್ಲಿನ ಠಾಣೆಗೆ ಬಂದು ರೈತರು ರಾಜುಗೌಡನ ವಿರುದ್ಧ ದೂರು ನೀಡಿದ್ದರು. ಆದರೆ, ಪೊಲೀಸರು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆ ಇಂದು ರೈತ ಸಂಘಟನೆ ನೇತೃತ್ವದಲ್ಲಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.ನಾಟಕ;
ಆರು ತಿಂಗಳ ಹಿಂದೆ ಭತ್ತ ಕೊಟ್ಟು ವಂಚನೆಗೊಳಗಾದ ರೈತರು ಈ ವಂಚಕನ ಬಗ್ಗೆ ಸ್ಥಳೀಯ ಮುಖಂಡರ ಮುಂದೆ ನ್ಯಾಯ ಪಂಚಾಯಿತಿ ಹಾಕಿದ್ದರು. ಅಲ್ಲಿ ₹16 ಲಕ್ಷಗಳಲ್ಲಿ 13ಲಕ್ಷಕ್ಕೆ ಸೆಟಲ್ಮೆಂಟ್ ಮಾಡಲಾಯಿತು. 3ಲಕ್ಷ ರೂಪಾಯಿ ಬೇಕಾದರೂ ಹೋಗಲಿ ಇನ್ನುಳಿದ ₹13 ಲಕ್ಷವಾದರೂ ಬರುತ್ತಲ್ಲ ಎಂದು ಹಿರಿಯ ಮಧ್ಯಸ್ಥಗಾರರ ಮುಂದೆ ಒಪ್ಪಿಕೊಂಡರು. ಇದೇ ವೇಳೆ 2 ತಿಂಗಳೊಳಗೆ ರೈತರ ಹಣ ನೀಡುವ ವಾಗ್ದಾನವಾಯಿತು. ಈ ನಿಟ್ಟಿನಲ್ಲಿ ಹಿರಿಯ ಮಧ್ಯಸ್ಥಗಾರರ ಮುಂದೆ ಬಾಂಡ್ ಪೇಪರ್ ಮೇಲೆ ಬರೆದುಕೊಟ್ಟಿದ್ದರು. ಇದೇ ವೇಳೆ ಮೂರು ಚೆಕ್‌ಗಳನ್ನು ಕೂಡಾ ನೀಡಿ ರೈತರನ್ನು ಸಮಾಧಾನಪಡಿಸಲಾಯಿತು. ಇಷ್ಟೆಲ್ಲದರ ನಡುವೆಯೂ ಮಧ್ಯಸ್ಥರ ಮಧ್ಯದಲ್ಲಿ ಹಣ ನೀಡುವುದಾಗಿ ಮಾತು ಕೊಟ್ಟಿದ್ದ ದಲ್ಲಾಳಿ ರಾಜುಗೌಡ ಕೊನೆಗೂ ಅಲ್ಲೂ ಕೂಡಾ ಕೊಟ್ಟ ಮಾತಿನಂತೆ ನಡೆಯದೇ ನಾಟಕವಾಡಿ ಮತ್ತೆ ರೈತರನ್ನು ಅಲೆದಾಡಿಸಿದ್ದಾನೆ. ಕೊಟ್ಟ ಚೆಕ್ ಕೂಡಾ ಬೌನ್ಸ್ ಆಗಿದೆ. ಇದರಿಂದ ಕೆರೆಳಿದ ರೈತರು ಕೊನೆಗೂ ಪೊಲೀಸ್ ಮೊರೆ ಹೋಗಿದ್ದಾರೆ. ಅಲ್ಲೂ ಪ್ರಭಾವಿಗಳಿಂದ ಹೇಳಿಸಿ ಪ್ರಕರಣ ದಾಖಲಾಗುವುದನ್ನು ಕೂಡಾ ತಡೆಯುವ ಪ್ರಯತ್ನ ಮಾಡಿದ್ದಾನೆ. ಇತ್ತ ಮೋಸ ಹೋದ ರೈತರು ಕಾರಟಗಿಯ ರೈತ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿದ್ದು, ಪ್ರಕರಣ ಗಂಭೀರತೆ ಪಡೆದು ಕೊನೆಗೂ ಆರೋಪಿ ರಾಜುಗೌಡ ಮೇಲೆ ಕೊನೆಗೂ ಮೇ 19ರಂದು ಪ್ರಕರಣ ದಾಖಲಾಗಿದೆ. ಇತ್ತ ಪ್ರಕರಣ ದಾಖಲಾಗಿದ್ದರೂ ಆರೋಪಿ ರಾಜುಗೌಡ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ. ಆದರೆ ಮೇ 21ರ ಬೆಳಗ್ಗೆ ಕಾರಟಗಿಯ ತನ್ನ ಮನೆಯಲ್ಲಿರುವಾಗ ಪೊಲೀಸರು ಆರೋಪಿ ರಾಜುಗೌಡನನ್ನು ಬಂಧಿಸಿದ್ದಾರೆ.