ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ವಂಚನೆ ಪ್ರಕರಣದ ಆರೋಪಿಗೆ ಸೇರಿದ ಕಾರಿನಲ್ಲಿದ್ದ ₹11 ಲಕ್ಷ ಕಳವು ಮಾಡಿದ ಆರೋಪಕ್ಕೆ ಸಿಸಿಬಿ ಸೈಬರ್ ಠಾಣೆ ಕಾನ್‌ಸ್ಟೇಬಲ್ ಜಬಿವುಲ್ಲಾ ತುತ್ತಾಗಿದ್ದು, ಆರೋಪದ ಬೆನ್ನಲ್ಲೆ ಕಾನ್‌ಸ್ಟೇಬಲ್ ಸಂಪೂರ್ಣ ಹಣವನ್ನು ಮರಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ವಂಚನೆ ಪ್ರಕರಣದ ಆರೋಪಿಗೆ ಸೇರಿದ ಕಾರಿನಲ್ಲಿದ್ದ ₹11 ಲಕ್ಷ ಕಳವು ಮಾಡಿದ ಆರೋಪಕ್ಕೆ ಸಿಸಿಬಿ ಸೈಬರ್ ಠಾಣೆ ಕಾನ್‌ಸ್ಟೇಬಲ್ ಜಬಿವುಲ್ಲಾ ತುತ್ತಾಗಿದ್ದು, ಆರೋಪದ ಬೇನ್ನಲ್ಲೆ ಕಾನ್‌ಸ್ಟೇಬಲ್ ಸಂಪೂರ್ಣ ಹಣವನ್ನು ಮರಳಿಸಿದ್ದಾರೆ.ಕೆಲ ದಿನಗಳ ಹಿಂದೆ ವಂಚನೆ ಪ್ರಕರಣ ಸಂಬಂಧ ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಠಾಣೆಗೆ ಕರೆತಂದಿದ್ದು, ಆ ವೇಳೆ ಈ ಹಣ ಕಳ್ಳತನವಾಗಿದೆ. ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಆರೋಪಿ, ತನ್ನ ಕಾರನ್ನು ಪರಿಶೀಲಿಸಿದಾಗ ಅದರಲ್ಲಿದ್ದ ₹11 ಲಕ್ಷ ಕಳ್ಳತನವಾಗಿದೆ ಎಂದು ದೂರಿದ್ದಾನೆ. ಈ ಕಳ್ಳತನ ಬಗ್ಗೆ ಸಿಸಿಬಿ ಡಿಸಿಪಿ ಅವರಿಗೆ ಸಹ ಆರೋಪಿಯು ದೂರು ನೀಡಿದ್ದಾನೆ. ಆಗ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಾರಿನಲ್ಲಿದ್ದ ಹಣವನ್ನು ಜಬ್ಬೀವುಲ್ಲಾ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆದರೆ, ಈ ಕುರಿತು ತನಿಖೆ ನಡೆಸದೆ ಅಧಿಕಾರಿಗಳು ನಿರ್ಲಕ್ಷ್ಯತನ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಕಾರಿನಲ್ಲಿ ಹಣ ಕಳ್ಳತನ ಆರೋಪದ ಬಗ್ಗೆ ಮಾಹಿತಿ ಬಂದಿದೆ. ಯಾರೇ ತಪ್ಪು ಮಾಡಿದ್ದರು ಅದೂ ತಪ್ಪೇ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.ಕದ್ದ ಹಣದಲ್ಲಿ ಚಿನ್ನಖರೀದಿಸಿದ ಪೇದೆ
ಕಳವು ಮಾಡಿದ ಹಣದಲ್ಲಿ ಚಿನ್ನಾಭರಣವನ್ನು ಆರೋಪಿತ ಕಾನ್‌ಸ್ಟೇಬಲ್ ಜಬಿವುಲ್ಲಾ ಖರೀದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾದ ಕೂಡಲೇ ಜಬ್ಬೀವುಲ್ಲಾ ಮನೆಗೆ ತೆರಳಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆ ವೇಳೆ ಜಬ್ಬೀವುಲ್ಲಾ ತೀವ್ರ ವಿರೋಧ ಸಹ ವ್ಯಕ್ತಪಡಿಸಿದ್ದು, ಕೊನೆಗೆ ಹೈಡ್ರಾಮಾ ನಡೆದು ಆತ ಶಾಂತವಾಗಿದ್ದ. ಈ ಬೆಳವಣಿಗೆಯ ಬಳಿಕ ₹2 ಲಕ್ಷ ಮರಳಿಸಿರುವ ಜಬಿವುಲ್ಲಾ, ಇನ್ನುಳಿದ ಹಣ ಕೊಡಲು ಸಮಯ ಕೋರಿದ್ದಾನೆ ಎಂದು ತಿಳಿದು ಬಂದಿದೆ.