ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ತಹಸೀಲ್ದಾರ್

| Published : Feb 26 2024, 01:31 AM IST

ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ತಹಸೀಲ್ದಾರ್
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ೭ ಟ್ರಾನ್ಸಿಟ್ ಬೂತ್ ಹಾಗೂ ಒಂದು ಸಂಚಾರಿ ಬೂತ್ ಕಾರ್ಯನಿರ್ವಹಿಸಲಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಶೇ. ೧೦೦ರಷ್ಟು ಪ್ರಗತಿಗೆ ಎಲ್ಲರೂ ಸಹಕರಿಸಬೇಕು.

ಮಾ. 3ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ । ಜಿಲ್ಲಾಡಳಿತ ಭವನದಲ್ಲಿ ಟಾಸ್ಕ್ ಪೋರ್ಸ್ ಸಭೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನವಜಾತ ಶಿಶುವಿನಿಂದ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಪಲ್ಸ್ ಪೋಲಿಯೋ ಕಾರ್ಯಕ್ರಮವು ಮಾ.೩ರಂದು ಆರಂಭವಾಗಲಿದ್ದು, ಈ ಸಂಬಂಧ ತಾಲೂಕು ಮಟ್ಟದ ಸಂಬಂಧಪಟ್ಟ ಅಧಿಕಾರಿಗಳು ಸೇರಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದ ಅಂಗವಾಗಿ ನಡೆದ ತಾಲೂಕುಮಟ್ಟದ ಟಾಸ್ಕ್‌ಪೋರ್ಸ್ ಸಭೆಯ ಆಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಾಮರಾಜನಗರ ತಾಲೂಕಿನಲ್ಲಿ ಈ ಬಾರಿ ಪೋಲಿಯೋ ಲಸಿಕೆಗೆ ೨೦ ಸಾವಿರಕ್ಕೂ ಹೆಚ್ಚಿನ ಮಕ್ಕಳ ಗುರಿ ಹೊಂದಲಾಗಿದ್ದು, ಪಟ್ಟಣ ಪ್ರದೇಶದಲ್ಲಿ ೩೯ ಹಾಗೂ ಗ್ರಾಮೀಣ ಭಾಗದಲ್ಲಿ ೧೫೦ ಸೇರಿ ಒಟ್ಟು ೧೮೯ ಬೂತ್‌ಗಳನ್ನು ತೆರೆಯಲಾಗುವುದು. ನಿರ್ವಹಣೆಗಾಗಿ ೪೧ ಮೇಲ್ವಿಚಾರಕರು, ೭೭೯ ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ತಾಲೂಕಿನಲ್ಲಿ ೭ ಟ್ರಾನ್ಸಿಟ್ ಬೂತ್ ಹಾಗೂ ಒಂದು ಸಂಚಾರಿ ಬೂತ್ ಕಾರ್ಯನಿರ್ವಹಿಸಲಿದ್ದು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಶೇ. ೧೦೦ರಷ್ಟು ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದರು.

ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮೊದಲ ದಿನ ಅಂದರೆ ಮಾರ್ಚ್ ೩ ರಂದು ಲಸಿಕಾ ಕೇಂದ್ರಗಳಲ್ಲಿ ಪೋಲಿಯೋ ಹನಿ ಹಾಕಲಾಗುವುದು. ೨ನೇ ದಿನ ಗ್ರಾಮೀಣ ಭಾಗದಲ್ಲಿ ಹಾಗೂ ಮೂರು ಮತ್ತು ನಾಲ್ಕನೇ ದಿನ ಮನೆಮನೆಗೆ ಭೇಟಿ ನೀಡಿ ೫ ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು. ಇದಕ್ಕಾಗಿ ಪಟ್ಟಣದ ೧೬೨೧೫ ಹಾಗೂ ಗ್ರಾಮೀಣ ಪ್ರದೇಶದ ೭೦೧೬೪ ಸೇರಿ ಒಟ್ಟು ೮೬೩೭೯ ಮನೆಗಳನ್ನು ಗುರುತಿಸಲಾಗಿದೆ. ಯಾವುದೇ ಮಕ್ಕಳು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಮತ್ತು ಜನನಿಬಿಡ ಸ್ಥಳಗಳಲ್ಲಿ ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದ್ದು, ಪ್ರತಿ ಬಸ್ಸುಗಳನ್ನು ನಿಲ್ಲಿಸಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ಪೊಲೀಸ್ ಪೇದೆಗಳನ್ನು ನಿಯೋಜಿಸಬೇಕು. ಅವಶ್ಯವಿರುವ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಪೊಲಿಯೋ ಲಸಿಕೆ ಹಾಕಲು ಸ್ಥಳಾವಕಾಶ ನೀಡಬೇಕು. ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಲಸಿಕೆಯ ಬಗ್ಗೆ ಮಕ್ಕಳಿಗೆ ಅರಿವು ಹಾಗೂ ಜಾಗೃತಿ ಜಾಥಾ ಏರ್ಪಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಎಲ್ಲಾ ದಿನಗಳಲ್ಲಿಯೂ ವಿದ್ಯುತ್ ಅತ್ಯಾವಶ್ಯವಾಗಿರುವುದರಿಂದ ದಿನದ ೨೪ ಗಂಟೆಯೂ ವಿದ್ಯುತ್ ವ್ಯವಸ್ಥೆ ಮಾಡಬೇಕು. ಕಾಡಂಚಿನ ಹಾಗೂ ದುರ್ಗಮ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ವಾಹನಗಳ ಓಡಾಟಕ್ಕೆ ಅರಣ್ಯ ಇಲಾಖೆ ಸಹಕರಿಸಬೇಕು. ಸರ್ಕಾರಿ ಹಾಗೂ ಖಾಸಗಿ ನರ್ಸಿಂಗ್ ಶಾಲೆಗಳು ಕಾರ್ಯಕ್ರಮಕ್ಕೆ ಅಗತ್ಯವಿರುವಷ್ಟು ನರ್ಸಿಂಗ್ ವಿದ್ಯಾರ್ಥಿಗಳನ್ನು ನಿಯೋಜಿಸಬೇಕು. ತಾಲೂಕುಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ಸಿಗೆ ಮುಂದಾಗಬೇಕು ಎಂದು ತಿಳಿಸಿದರು.

ಚಂದಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ನಂದಿನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಮಹಿಳಾ ಮೇಲ್ವಿಚಾರಕಿ ಶಿವಲೀಲಾ ಬೆಟಗೇರಿ, ನಗರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ್ ಸೇರಿ ತಾಲೂಕುಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

----------

25ಸಿಎಚ್ಎನ್‌12

ಚಾಮರಾಜನಗರದ ಜಿಲ್ಲಾಡಳಿತ ಭವನದ ಹಳೆ ಕೆಡಿಪಿ ಸಭಾಂಗಣದಲ್ಲಿ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದ ಅಂಗವಾಗಿ ನಡೆದ ತಾಲೂಕುಮಟ್ಟದ ಟಾಸ್ಕ್‌ಪೋರ್ಸ್ ಸಭೆಯ ಆಧ್ಯಕ್ಷತೆ ವಹಿಸಿ ತಹಸೀಲ್ದಾರ್‌ ಬಸವರಾಜು ಮಾತನಾಡಿದರು.