ಕನ್ನಡಪ್ರಭ ವಾರ್ತೆ ಹಾಸನ
ಎರಡು ಹನಿ ಪಲ್ಸ್ ಪೋಲಿಯೋ ಲಸಿಕೆ ಮಕ್ಕಳ ಆರೋಗ್ಯವನ್ನು ರಕ್ಷಿಸುವ ಜೀವ ರಕ್ಷಕ ಔಷಧಿಯಾಗಿದ್ದು, ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೆ ಲಸಿಕೆ ನೀಡುವ ಮೂಲಕ ಪೋಲಿಯೋ ಮುಕ್ತ ಭಾರತವನ್ನು ಮತ್ತಷ್ಟು ಸದೃಢಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.ನಗರದ ಹಿಮ್ಸ್ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಮಕ್ಕಳಿಗೆ ಎರಡು ಹನಿ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದ ಅವರು, ಪೋಲಿಯೋ ಎಂಬುದು ಮಕ್ಕಳನ್ನು ಜೀವಿತಾವಧಿಯವರೆಗೆ ಅಂಗವಿಕಲರನ್ನಾಗಿಸಬಹುದಾದ ಗಂಭೀರ ಕಾಯಿಲೆಯಾಗಿದ್ದು, ಅದನ್ನು ತಡೆಗಟ್ಟಲು ಪಲ್ಸ್ ಪೋಲಿಯೋ ಲಸಿಕೆಯೇ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಿಬ್ಬಂದಿ ಮನೆ ಮನೆಗೆ ತೆರಳಿ ಲಸಿಕೆ ನೀಡಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಕಳೆದ ವರ್ಷ ಹಾಸನ ಜಿಲ್ಲೆ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಶೇ.99ರಷ್ಟು ಗುರಿ ಸಾಧಿಸಿ ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿತ್ತು. ಈ ಬಾರಿ ಶೇ. 100ರಷ್ಟು ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಜಿಲ್ಲೆಯನ್ನು ಮಾದರಿಯನ್ನಾಗಿಸಬೇಕು. ಪ್ರತಿಯೊಬ್ಬ ಆರೋಗ್ಯ ಸಿಬ್ಬಂದಿಯ ಶ್ರಮದಿಂದ ಈ ಗುರಿ ಸಾಧಿಸಲು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಭಾರತವನ್ನು ವಿಶ್ವ ಆರೋಗ್ಯ ಸಂಸ್ಥೆ ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಿದ್ದರೂ, ಇತರ ದೇಶಗಳಿಂದ ವಲಸೆ ಬರುವವರ ಮೂಲಕ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿವರ್ಷ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ನಡೆಸಲಾಗುತ್ತಿದೆ. ಪೋಷಕರು ಯಾವುದೇ ನಿರ್ಲಕ್ಷ್ಯ ಮಾಡದೆ ತಮ್ಮ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಎರಡು ಹನಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಒಟ್ಟು 1,05,536 ಐದು ವರ್ಷದೊಳಗಿನ ಮಕ್ಕಳಿದ್ದು, ಎಲ್ಲ ಮಕ್ಕಳಿಗೂ ಲಸಿಕೆ ತಲುಪಿಸಲು ಸಮಗ್ರ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲೆಯಾದ್ಯಂತ 872 ಪಲ್ಸ್ ಪೋಲಿಯೋ ಬೂತ್‌ಗಳನ್ನು ತೆರೆಯಲಾಗಿದ್ದು, 3,584 ವ್ಯಾಕ್ಸಿನೇಟರ್‌ಗಳನ್ನು ನಿಯೋಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮೂರು ದಿನ ಹಾಗೂ ನಗರ ಪ್ರದೇಶಗಳಲ್ಲಿ ಐದು ದಿನ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುವುದು. ಈ ಅವಧಿಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಪೋಷಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಲಸಿಕಾ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು 1,744 ತಂಡಗಳು, 179 ಮೇಲ್ವಿಚಾರಕರು, 8 ಸಂಚಾರಿ ತಂಡಗಳು ಹಾಗೂ 187 ವಾಹನಗಳನ್ನು ನಿಯೋಜಿಸಲಾಗಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ವಲಸೆ ಕಾರ್ಮಿಕರ ಪ್ರದೇಶಗಳು ಸೇರಿದಂತೆ ವಿಶೇಷ ಸ್ಥಳಗಳಲ್ಲಿಯೂ ಮಕ್ಕಳಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಶೇ.100ರಷ್ಟು ಗುರಿ ಸಾಧಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅನೀಲ್, ಹಾಸನ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ರಾಜಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್, ಡಾ. ವಿಜಯ್, ಆರೋಗ್ಯ ಮತ್ತು ಕುಟುಂಬ ಪೂರೈಕೆ ಇಲಾಖೆಯ ನಿರ್ದೇಶಕಿ ರಜಿನಿ, ಜಿಲ್ಲಾ ಶಸ್ತ್ರಚಿಕಿತ್ಸಕ ನಾಗೇಶ್ ಆರಾಧ್ಯ, ಡಾ. ಮನು ಪ್ರಕಾಶ್, ಎಅ. ದಿನೇಶ್, ಡಾ. ಶಿವಶಂಕರ್, ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಡಾ. ಚೇತನ್, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.===
---ಹೇಳಿಕೆ1
ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಪೋಷಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಸಹಕರಿಸಿ ಶೇ.100ರಷ್ಟು ಗುರಿ ಸಾಧಿಸಲು ನೆರವಾಗಬೇಕು. - ಶುಭಂ ಶುಕ್ಲ, ಜಿಲ್ಲಾ ಪಂಚಾಯಿತಿ ಸಿಇಒ