ರಾಮನಗರ: ಕಳೆದ ಆರು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಹಿಡಿದಿದ್ದ ಗ್ರಹಣ ಇದೀಗ ಬಿಟ್ಟಿದೆ. ರಾಜ್ಯ ಸರ್ಕಾರ ಮೀಸಲಾತಿ ಕರಡು ಅಧಿಸೂಚನೆ ಪ್ರಕಟಗೊಳಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಆಕಾಂಕ್ಷಿಗಳು ಮೈ ಕೊಡವಿಕೊಂಡು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ

ರಾಮನಗರ: ಕಳೆದ ಆರು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಹಿಡಿದಿದ್ದ ಗ್ರಹಣ ಇದೀಗ ಬಿಟ್ಟಿದೆ. ರಾಜ್ಯ ಸರ್ಕಾರ ಮೀಸಲಾತಿ ಕರಡು ಅಧಿಸೂಚನೆ ಪ್ರಕಟಗೊಳಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಆಕಾಂಕ್ಷಿಗಳು ಮೈ ಕೊಡವಿಕೊಂಡು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರಗಳು ಜಿಪಂ-ತಾಪಂ ಚುನಾವಣೆ ನಡೆಸುವುದಾಗಿ ಹೇಳುತ್ತಲೇ ಬಂದಿದ್ದವು. ಆದರೆ, ಮೀಸಲಾತಿ ನಿಗದಿಪಡಿಸದೆ ಚುನಾವಣೆಯನ್ನು ಮುಂದೂಡುತ್ತಿದ್ದವು. ಇದರಿಂದ ಆಕಾಂಕ್ಷಿಗಳು ಪದೇಪದೇ ನಿರಾಸೆಗೆ ಒಳಗಾಗುತ್ತಲೇ ಇದ್ದರು. ಇದೀಗ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸುವ ಮೂಲಕ ಚುನಾವಣೆ ನಡೆಸುವುದಕ್ಕೆ ಸಿದ್ಧ ಎಂಬ ಸಂದೇಶವನ್ನು ರಾಜ್ಯ ಸರ್ಕಾರ ರವಾನಿಸಿದೆ.

ರಾಜಕೀಯ ಪಕ್ಷಗಳಲ್ಲಿ ಬಿರುಸಿನ ತಾಲೀಮು:

ಯಾವಾಗ ಚುನಾವಣೆ ಘೋಷಣೆಯಾಗಲಿದೆ ಎಂಬ ಕುತೂಹಲ ರಾಜಕೀಯ ಪಕ್ಷದವರಲ್ಲಿ ಮನೆ ಮಾಡಿದೆ. ಒಂದೆಡೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಸಿದ್ಧತೆಗಳನ್ನು ಚುರುಕುಗೊಳಿಸಿದ್ದರೆ, ಜಿಪಂ-ತಾಪಂ ಚುನಾವಣಾ ಚಟುವಟಿಕೆಗಳಿಗೆ ರಾಜಕೀಯ ಪಕ್ಷಗಳು ಬಿರುಸಾಗಿಯೇ ತಾಲೀಮು ಆರಂಭಿಸಿವೆ.

ಮೀಸಲಾತಿ ಪಟ್ಟಿ ನಿರೀಕ್ಷೆಯಂತೆಯೇ ನಿಗದಿಯಾಗಿದೆಯೇ, ಬದಲಾವಣೆಯಾಗಿದೆಯೇ, ಬದಲಾವಣೆಯಾಗಿದ್ದರೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು, ಯಾರನ್ನು ಕಣಕ್ಕಿಳಿಸಬಹುದು, ಎಲ್ಲೆಲ್ಲಿ ಮತ ಬ್ಯಾಂಕ್ ಗಟ್ಟಿಯಾಗಿದೆ, ಎಲ್ಲೆಲ್ಲಿ ಕಡಿಮೆ ಇದೆ, ಅದನ್ನು ಸರಿದೂಗಿಸುವ ಬಗೆ ಹೇಗೆ ಎಂಬೆಲ್ಲಾ ಆಲೋಚನೆಗಳೊಂದಿಗೆ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗಳು ಪ್ರಾರಂಭವಾಗಿವೆ.

ಕೆಲವು ಪ್ರಭಾವಿಗಳು ತಾವು ಪ್ರತಿನಿಧಿಸುವ ಕ್ಷೇತ್ರದ ಮೀಸಲಾತಿ ಬೇರೆ ಜನಾಂಗಕ್ಕೆ ನಿಗದಿಯಾಗಿದ್ದರೆ ರಾಜಕೀಯ ಪ್ರಭಾವ ಬೀರಿ ಮೀಸಲು ಬದಲಾಯಿಸಿಕೊಂಡು ಬರುವುದಕ್ಕೂ ಮುಂದಾಗಿದ್ದಾರೆ. ಕೆಲವರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಖಾಂತರ ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ.

ರಾಜಕೀಯ ಪಕ್ಷದ ಗುರುತಿನೊಂದಿಗೆ ಪಂಚಾಯಿತಿ ಚುನಾವಣೆಗಳು ನಡೆಯದಿದ್ದರೂ ಹಲವಾರು ಆಕಾಂಕ್ಷಿಗಳು ರಾಜಕೀಯ ನಾಯಕರ ಬೆನ್ನೇರಿ ತಮ್ಮನ್ನು ಬೆಂಬಲಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ನೂ ಕೆಲವರು ವೈಯಕ್ತಿಕ ವರ್ಚಸ್ಸಿನ ಮೇಲೆ ಕಣಕ್ಕಿಳಿಯುತ್ತಿದ್ದರೆ, ಮೀಸಲಾತಿ ಬದಲಾವಣೆಯಾಗಿರುವ ಕಡೆ ಪ್ರಬಲರು ಮೀಸಲು ನಿಗದಿಯಾಗಿರುವ ಸಮುದಾಯದವರನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನಕ್ಕೂ ಮುಂದಾಗಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಜಿಪಂ 6 ಸ್ಥಾನ ಹೆಚ್ಚಳವಾಗಿದ್ದರೆ, ತಾಪಂನಲ್ಲಿ 4 ಕ್ಷೇತ್ರಗಳು ಕಡಿತಗೊಂಡಿವೆ. ನಿರೀಕ್ಷೆಯಂತೆ ಕ್ಷೇತ್ರಗಳಿಗೆ ಮೀಸಲು ನಿಗದಿಯಾಗದ ಕಾರಣ ಅನೇಕರು ಸ್ಪರ್ಧೆಯಿಂದಲೇ ಹೊರಗುಳಿಯುವಂತಾಗಿದೆ. ಇದರಿಂದ ಅವರ ಸ್ಪರ್ಧಾಕಾಂಕ್ಷೆಗೆ ತಣ್ಣೀರೆರಚಿದಂತಾಗಿದೆ.

ಈ ಮೊದಲು ಜಿಪಂ 22 ಕ್ಷೇತ್ರಗಳಿದ್ದವು. ಇದೀಗ 6 ಕ್ಷೇತ್ರಗಳನ್ನು ಹೊಸದಾಗಿ ರಚಿಸಿ ಒಟ್ಟು 28ಕ್ಕೆ ಹೆಚ್ಚಿಸಲಾಗಿದೆ ಆಕಾಂಕ್ಷಿಗಳು ನಿಟ್ಟುಸಿರು ಬಿಡುವಂತಾಗಿದೆ. 4 ತಾಪಂಗಳಿಂದ 81 ಕ್ಷೇತ್ರಗಳಿದ್ದವು. ಇದೀಗ ಹಾರೋಹಳ್ಳಿ ತಾಲೂಕು ರಚನೆಗೊಂಡಿದೆ. ಆದರೂ ತಾಪಂ ಕ್ಷೇತ್ರಗಳ ಸಂಖ್ಯೆ 77ಕ್ಕೆ ಇಳಿಸಿ 4 ಸ್ಥಾನಗಳನ್ನು ಕಡಿತಗೊಳಿಸಲಾಗಿದೆ.

ಬಾಕ್ಸ್ ...............

ಚುನಾವಣೆ ಹೊಣೆ ಹೊತ್ತ ಸರ್ಕಾರದಿಂದ ವಿಳಂಬ:

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗೆ ಪ್ರತಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಸುವ ಅಧಿಕಾರ ಈ ಹಿಂದೆ ರಾಜ್ಯ ಚುನಾವಣಾ ಆಯೋಗಕ್ಕೆ ಇತ್ತು. ಆಯೋಗವೇ ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿ ಕರಡನ್ನು ಪ್ರಕಟಿಸುವ ಅಧಿಕಾರ ಹೊಂದಿತ್ತು. ಆದರೆ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್‌ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ನೀಡಿತ್ತು.

ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ಚುನಾವಣಾ ಆಯೋಗ ಹೈಕೋರ್ಟ್ ಮೊರೆ ಹೋಗಿತ್ತು. ಆನಂತರ ಈ ಪ್ರಕ್ರಿಯೆಯನ್ನು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಹೈಕೋರ್ಟ್‌ಗೆ 3 ವರ್ಷಗಳ ಹಿಂದೆಯೇ ಪ್ರಮಾಣ ಪತ್ರ ಸಲ್ಲಿಸಿತ್ತು. ಆನಂತರದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಒಪ್ಪಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕ್ಷೇತ್ರ ಪುನರ್‌ ವಿಂಗಡಣೆಗೊಳಿಸಿ, ಸದಸ್ಯರ ಸಂಖ್ಯೆ ನಿಗದಿಪಡಿಸಿ ಆದೇಶ ಹೊರಡಿಸಿದ್ದು ಇನ್ನೂ ಮೀಸಲು ನಿಗದಿಪಡಿಸುವುದು ಬಾಕಿ ಇತ್ತು. 2026ರ ಏಪ್ರಿಲ್ ಒಳಗೇ ಜಿಪಂ ಮತ್ತು ತಾಪಂ ಚುನಾವಣೆ ನಡೆಸುವುದಾಗಿ ಹೇಳಿದ್ದ ಸರ್ಕಾರ ಇದೀಗ 2027ರ ಫೆಬ್ರವರಿ ವೇಳೆಗೆ ನಡೆಸುವುದಾಗಿ ಮುಂದೂಡುತ್ತಲೇ ಬಂದಿತ್ತು. ಇದೀಗ ಮೀಸಲಾತಿ ಅಧಿಸೂಚನೆ ಪ್ರಕಟಣೆಯಿಂದ ಚುನಾವಣೆ ನಡೆಯುವ ಶುಭಸೂಚನೆ ಸಿಕ್ಕಿದೆ.

ಬಾಕ್ಸ್ .................

5 ವರ್ಷ ಆಡಳಿತಾಧಿಕಾರಿಗಳ ದರ್ಬಾರ್:

2021ರ ಏಪ್ರಿಲ್‌ನಲ್ಲಿ ಜಿಪಂ ಮತ್ತು ತಾಪಂ ಅವಧಿ ಪೂರ್ಣಗೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಜನಪ್ರತಿನಿಧಿಗಳ ಸ್ಥಾನದಲ್ಲಿ ಕುಳಿತು ಆಡಳಿತಾಧಿಕಾರಿಗಳೇ ದರ್ಬಾರ್ ನಡೆಸಿದ್ದಾರೆ. ಜಿಪಂನಲ್ಲಿ ರಶ್ಮಿ ಮಹೇಶ್ ಬಳಿಕ ಕಳೆದ 3 ತಿಂಗಳಿಂದ ಮಂಜುನಾಥ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಕ್ಸ್ .................

ಜೆಡಿಎಸ್ - ಬಿಜೆಪಿ ಮೈತ್ರಿ V/S ಕಾಂಗ್ರೆಸ್ ಫೈಟ್ ಸಾಧ್ಯತೆ:

ಜಿಲ್ಲಾ ಮತ್ತು ತಾಪಂ ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಎಲ್ಲ ಪಕ್ಷಗಳಲ್ಲೂ ಗೆಲ್ಲುವ ಅಭ್ಯರ್ಥಿಗಳಿಗೆ ಹುಡುಕಾಟ ಶುರುವಾಗಿದೆ. ಈಗಾಗಲೇ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವುದಕ್ಕೆ ತಯಾರಿ ನಡೆಸಿವೆ.

ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಗೆ ಹೋಲಿಕೆ ಮಾಡಿದರೆ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಎಲ್ಲರೂ ಜಿಪಂ ಹಾಗೂ ತಾಪಂ ಸದಸ್ಯರಾಗುವುದಕ್ಕೆ ಹವಣಿಸುತ್ತಾ ಕ್ಷೇತ್ರದೆಲ್ಲೆಡೆ ಓಡಾಡುತ್ತಾ ಜನರೆದುರು ಗುರುತಿಸಿಕೊಳ್ಳುವ ಪ್ರಯತ್ನಕ್ಕಿಳಿದ್ದಾರೆ.

ಈ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರೆಯುತ್ತದೆಯೊ ಇಲ್ಲವೊ ಎಂಬುದು ಕುತೂಹಲ ಮೂಡಿಸಿದೆ. ಹಾಗೊಂದು ವೇಳೆ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿದರೆ ಚುನಾವಣೆ ರಂಗು ಪಡೆಯಲಿದ್ದು, ಕಾಂಗ್ರೆಸ್ ಪಕ್ಷ ತೀವ್ರ ಪೈಪೋಟಿ ಎದುರಿಸಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷದೊಳಗೆ ಚುರುಕು:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಯಲ್ಲಿ 4 ವಿಧಾನಸಭಾ ಸದಸ್ಯರು, ಮೂವರು ವಿಧಾನ ಪರಿಷತ್ ಸದಸ್ಯರನ್ನೊಳಗೊಂಡಿರುವ ಕಾಂಗ್ರೆಸ್ ಪಕ್ಷದಲ್ಲೂ ಚುನಾವಣಾ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಶಾಸಕರು ತಮ್ಮ ಕ್ಷೇತ್ರದಲ್ಲೇ ಸಭೆ ಕರೆದು ಮುಖಂಡರು-ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಸಿದ್ಧತೆ ನಡೆಸಿದ್ದಾರೆ. ಚುನಾವಣೆಗೆ ದಿನಾಂಕ ನಿಗದಿಯಾಗುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಜೆಡಿಎಸ್ ನೊಳಗೆ ಬಿರುಸು:

ಕೇಂದ್ರ ಸಚಿವ ಕುಮಾರಸ್ವಾಮಿ ಕರ್ಮಭೂಮಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಂದೇ ಒಂದು ಶಾಸಕ ಸ್ಥಾನವಿಲ್ಲದೆ ಕಳಾಹೀನ ಸ್ಥಿತಿಯಲ್ಲಿರುವ ಜೆಡಿಎಸ್ ಪಕ್ಷಕ್ಕೆ ಜಿಪಂ-ತಾಪಂ ಚುನಾವಣೆ ಪ್ರತಿಷ್ಠೆಯಾಗಿದೆ. ಅಸ್ತಿತ್ವ ಕಾಪಾಡಿಕೊಳ್ಳಲು ಜೆಡಿಎಸ್ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಹಂಬಲದೊಂದಿಗೆ ತೀವ್ರ ಹೋರಾಟ ನೀಡುವುದಕ್ಕೆ ಸಜ್ಜಾಗುತ್ತಿದೆ.

ಬಿಜೆಪಿಯಲ್ಲೂ ತಯಾರಿ ಜೋರು:

ಭಾರತೀಯ ಜನತಾ ಪಕ್ಷದಲ್ಲೂ ಚುನಾವಣಾ ತಯಾರಿ ಜೋರಾರಿಯೇ ಶುರುವಾಗಿದೆ. ಜಿಪಂ-ತಾಪಂನಲ್ಲಿ ಕಮಲ ಅರಳಿಸಿ ದಾಖಲೆ ಬರೆಯುವ ಉತ್ಸಾಹದಲ್ಲಿದೆ. ಇದುವರೆಗೂ ಜಿಪಂ.ಯೊಳಗೆ ಖಾತೆ ತೆರೆಯದ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಎರಡು-ಮೂರು ಸ್ಥಾನಗಳಲ್ಲಾದರೂ ಗೆದ್ದು ಶಕ್ತಿ ಪ್ರದರ್ಶಿಸಲು ಪಣತೊಟ್ಟಿದೆ.

10ಕೆಆರ್ ಎಂಎನ್ 1.ಜೆಪಿಜಿ

ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯಿತಿ ಕಚೇರಿ.