ಕುಷ್ಟಗಿ ತಾಲೂಕಿನಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗಳ ರಾಜಕೀಯ ಕಾವು ಏರತೊಡಗಿದೆ. 2021ರಲ್ಲಿ ನಡೆಯಬೇಕಿದ್ದ ಚುನಾವಣೆಗಳ ಪ್ರಕ್ರಿಯೆ ಈಗ ಆರಂಭವಾಗಿದ್ದು, ತಾಲೂಕಿನ ಆರು ಜಿಪಂ ಹಾಗೂ 23 ತಾಪಂ ಕ್ಷೇತ್ರಗಳ ತಾತ್ಕಾಲಿಕ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಇದರಿಂದ ಆಕಾಂಕ್ಷಿಗಳಲ್ಲಿ ಹೊಸ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಕುಷ್ಟಗಿ ತಾಲೂಕಿನಲ್ಲಿ ಜಿಪಂ ಮತ್ತು ತಾಪಂ ಚುನಾವಣೆಗಳ ರಾಜಕೀಯ ಕಾವು ಏರತೊಡಗಿದೆ. 2021ರಲ್ಲಿ ನಡೆಯಬೇಕಿದ್ದ ಚುನಾವಣೆಗಳ ಪ್ರಕ್ರಿಯೆ ಈಗ ಆರಂಭವಾಗಿದ್ದು, ತಾಲೂಕಿನ ಆರು ಜಿಪಂ ಹಾಗೂ 23 ತಾಪಂ ಕ್ಷೇತ್ರಗಳ ತಾತ್ಕಾಲಿಕ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಇದರಿಂದ ಆಕಾಂಕ್ಷಿಗಳಲ್ಲಿ ಹೊಸ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.ಚುನಾವಣೆಯ ಅಧಿಕೃತ ವೇಳಾಪಟ್ಟಿ ಪ್ರಕಟವಾಗದಿದ್ದರೂ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ಧತೆ ಆರಂಭಿಸಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಒಂದೇ ಪಕ್ಷದಿಂದ ಐದಾರು ಮಂದಿ ಟಿಕೆಟ್ ಬಯಸುತ್ತಿರುವುದು ಮುಖಂಡರಿಗೆ ತಲೆನೋವಾಗಿದೆ. ಜನಸಂಪರ್ಕ, ಪಕ್ಷದ ಸಂಘಟನೆಯಲ್ಲಿ ಸಕ್ರಿಯತೆ ಹಾಗೂ ಸ್ಥಳೀಯ ಬೆಂಬಲದ ಆಧಾರದಲ್ಲಿ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಪ್ರಯತ್ನಿಸುತ್ತಿದ್ದಾರೆ. ಒಬ್ಬರಿಗೆ ಟಿಕೆಟ್ ನೀಡಿದರೆ ಉಳಿದವರನ್ನು ಸಮಾಧಾನಪಡಿಸುವುದು ಪಕ್ಷಗಳಿಗೆ ಸವಾಲಾಗುವ ಸಾಧ್ಯತೆಯಿದೆ.
ಪ್ರಚಾರದ ಅಬ್ಬರ: ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಯುವ ಮುಖಂಡರು ತಮ್ಮ ಭಾವಚಿತ್ರಗಳಿರುವ ಪೋಸ್ಟರ್‌ಗಳನ್ನು ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಜನರೊಂದಿಗೆ ಸಂಪರ್ಕ ಬೆಳೆಸುವುದು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮ ರಾಜಕೀಯ ನೆಲೆ ಬಲಪಡಿಸಿಕೊಳ್ಳಲು ಮುಂದಾಗಿದ್ದಾರೆ. ಚುನಾವಣೆ ಘೋಷಣೆಗೆ ಮುನ್ನವೇ ಜನರ ಗಮನ ಸೆಳೆಯುವ ಪ್ರಯತ್ನಗಳು ಚುರುಕುಗೊಂಡಿವೆ.ಮೀಸಲಾತಿಯೇ ಆಧಾರ: ತಾತ್ಕಾಲಿಕ ಮೀಸಲಾತಿ ಪಟ್ಟಿಯಲ್ಲಿ ತಮ್ಮ ಸ್ಪರ್ಧೆಗೆ ಅನುಕೂಲವಾಗಿದೆಯೇ ಎಂಬುದನ್ನು ಆಕಾಂಕ್ಷಿಗಳು ಪರಿಶೀಲಿಸುತ್ತಿದ್ದಾರೆ. ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅ. 19, 2026 ಕೊನೆಯ ದಿನವಾಗಿದೆ. ಆಕ್ಷೇಪಣೆಗಳ ಪರಿಶೀಲನೆಯ ಬಳಿಕ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಲಿದ್ದು, ಬದಲಾವಣೆಯಾದರೆ ಆಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರವೂ ಬದಲಾಗಬಹುದು. ಹೀಗಾಗಿ ಕೆಲವರು ಪ್ರಚಾರದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಅಂತಿಮ ಪಟ್ಟಿಗಾಗಿ ಕಾಯುತ್ತಿದ್ದಾರೆ.
ಟಿಕೆಟ್ ಹಂಚಿಕೆಯೇ ಸವಾಲು: ಹಲವು ಆಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗುವ ಸಾಧ್ಯತೆಯಿದೆ. ಟಿಕೆಟ್ ವಂಚಿತರನ್ನು ಸಮಾಧಾನಪಡಿಸುವ ಜತೆಗೆ ಸಂಘಟನೆಯ ಒಗ್ಗಟ್ಟು ಕಾಯ್ದುಕೊಳ್ಳುವುದು ಮುಖಂಡರಿಗೆ ಸವಾಲಾಗಿದೆ. ಅಂತಿಮ ಮೀಸಲಾತಿ ಹಾಗೂ ಪಕ್ಷಗಳ ಟಿಕೆಟ್ ಹಂಚಿಕೆಯ ಬಳಿಕ ಸ್ಪರ್ಧೆಯ ಚಿತ್ರಣ ಸ್ಪಷ್ಟವಾಗಲಿದೆ. ಹೀಗಾಗಿ ಆರು ಜಿಪಂ ಮತ್ತು 23 ತಾಪಂ ಕ್ಷೇತ್ರಗಳ ಆಕಾಂಕ್ಷಿಗಳು ಅಂತಿಮ ಪಟ್ಟಿಯತ್ತ ಚಿತ್ತ ನೆಟ್ಟಿದ್ದಾರೆ.ಪಕ್ಷದ ತೀರ್ಮಾನ: 2021ರಲ್ಲಿ ಜಿಪಂ ಹಾಗೂ ತಾಪಂ ಚುನಾವಣೆಗಳು ನಡೆಯಬೇಕಿದ್ದು ಸಂಪೂರ್ಣ ಒಂದು ಅವಧಿ ಮೀರಿದೆ. ಈಗ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಅಂತಿಮ ಮೀಸಲಾತಿ ಪಟ್ಟಿಗಾಗಿ ಆಕಾಂಕ್ಷಿಗಳು ಕಾಯುತ್ತಿದ್ದಾರೆ. ಪಕ್ಷದ ನಾಯಕರ ತೀರ್ಮಾನದಂತೆ ಎಲ್ಲವೂ ನಡೆಯಲಿದೆ ಎಂದು ಕ್ಯಾದಿಗುಪ್ಪ ಕ್ಷೇತ್ರದ ತಾಪಂ ಮಾಜಿ ಸದಸ್ಯ ಯಂಕಪ್ಪ ಚವ್ಹಾಣ ಹೇಳಿದರು.