ಬಿಜೆಪಿಯಿಂದ ಹೆಣದ ಮುಂದೆ ರಾಜಕೀಯ ಷಡ್ಯಂತ್ರ ಪ್ರವೃತ್ತಿ: ಎ.ಎಸ್. ಪೊನ್ನಣ್ಣ

| Published : Apr 06 2025, 01:49 AM IST

ಬಿಜೆಪಿಯಿಂದ ಹೆಣದ ಮುಂದೆ ರಾಜಕೀಯ ಷಡ್ಯಂತ್ರ ಪ್ರವೃತ್ತಿ: ಎ.ಎಸ್. ಪೊನ್ನಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಅವರ ಆತ್ಮಹತ್ಯೆಗೆ ಆ ಪಕ್ಷದ ಜೊತೆ ಗುರುತಿಸಿಕೊಂಡಿರುವುದೇ ಅವರ ಸಾವಿಗೆ ಕಾರಣ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಆ ಪಕ್ಷದ ಜೊತೆ ಗುರುತಿಸಿಕೊಂಡಿರುವುದೇ ಅವರ ಸಾವಿಗೆ ಕಾರಣ. ವಿನಯ್ ಸಾವಿನ ಸಂಬಂಧಿತ ತನಿಖೆಯನ್ನು ನಂಬದೇ ಸಾವಿನ ಪ್ರಕರಣದಲ್ಲಿಯೂ ರಾಜಕೀಯ ಮಾಡುತ್ತಿರುವ ಬಿಜೆಪಿ ಹೆಣದ ಮುಂದೆ ರಾಜಕೀಯ ಷಡ್ಯಂತ್ರ ಮಾಡುವ ಪ್ರವೃತ್ತಿಯನ್ನು ಮುಂದವರೆಸಿರುವುದು ಖಂಡನೀಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ,

ವಿನಯ್ ಅವರ ಸಾವು ಬೇಸರ ತರಿಸಿದೆ. ಅವರ ಕುಟುಂಬಸ್ಥರೊಂದಿಗೆ ಸಾಂತ್ವನ ಹೇಳಿ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ. ಆದರೆ ವಾಸ್ತವ ಹಾಗೂ ನಿಜಾಂಶವನ್ನು ಮುಚ್ಚಿಡುವ ನಿಟ್ಟಿನಲ್ಲಿ ಬಿಜೆಪಿ ಶವದ ಮೇಲೆ ರಾಜಕೀಯ ಮಾಡಿದೆ. ವಿನಯ್ ಸೋಮಯ್ಯ ಅವರ ಶವದೊಂದಿಗೆ ಬಿಜೆಪಿಯ ಪ್ರಮುಖರು ವರ್ತಿಸುವುದು ಗಮನಿಸಿದರೆ ಇದನ್ನು ಯಾರೂ ಕೂಡ ಒಪ್ಪುವುದಿಲ್ಲ ಎಂದು ಹೇಳಿದರು.

ವಿನಯ್ ಆತ್ಮಹತ್ಯೆಯಾದಾಗ ಅವರ ಮೊಬೈಲ್ ಎಲ್ಲಿತ್ತು. ಅದನ್ನು ತಂದುಕೊಟ್ಟವರು ಯಾರು. ಆ ಮೆಸೇಜ್ ಅನ್ನು ಫಾರ್ವರ್ಡ್ ಮಾಡಿದವರು ಯಾರು. ಅದೆಲ್ಲ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಬಿಜೆಪಿ ಕೆಲ ನಾಯಕರು ಶವ ಎತ್ತಲು ಬಿಡುವುದಿಲ್ಲ ಎಂದು ಶುಕ್ರವಾರ ಬೆಂಗಳೂರಿನಲ್ಲಿ ಹೇಳಿದ್ದರು. ಆದರೆ ತಮ್ಮ ನಾಟಕ ಮುಗಿದ ನಂತರ ವಿನಯ್ ಅವರ ಮೃತದೇಹದೊಂದಿಗೆ ಒಬ್ಬ ಕೂಡ ಇರಲಿಲ್ಲ. ಶವದೊಂದಿಗೆ ಯಾರು ಪ್ರಯಾಣ ಕೂಡ ಮಾಡಲಿಲ್ಲ. ಅಲ್ಲದೆ ಶವವಿಟ್ಟು ಪ್ರತಿಭಟನೆ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇವರಿಗೆ ತನಿಖೆ ಬೇಡ ರಾಜಕೀಯ ಬೇಕು. 12.30 ವರೆಗೂ ಶವವನ್ನು ನೀಡದೆ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು.

ಶುಕ್ರವಾರ ಪ್ರತಿಭಟನೆ ಸಂದರ್ಭ ಬಿಜೆಪಿಯವರು ರೌಡಿಗಳಂತೆ ವರ್ತಿಸಿದ್ದಾರೆ. ಇವರು ವಿನಯ್ ಪ್ರಕರಣ ಇಟ್ಟುಕೊಂಡು ಎಲ್ಲಾ ಬೇರೆ ಕೇಸ್ ಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದಾರೆ. ಒಬ್ಬ ವಿರೋಧಪಕ್ಷದ ನಾಯಕರು ಬಂದಾಗ ಅವರಿಗೆ ಮೊಟ್ಟೆ ಹೊಡೆಯುವ ಸಂಸ್ಕೃತಿ ಬೆಳೆಸಿದ್ದಾರೆ. ತನಿಖೆಯಾಗಿ ನಾಲ್ಕು ದಿನಗಳಲ್ಲಿ ಎಲ್ಲಾ ಸತ್ಯ ಹೊರ ಬರಲಿದೆ. ಮಡಿಕೇರಿಯಲ್ಲಿ ಕುಳಿತು ಬೆಂಗಳೂರು ಕಮಿಷನರ್ ಗೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದರು.

ಮೂಡಾ ಕೇಸು ಹಗರಣದಲ್ಲಿ ಸರಿಯಾದ ಸಲಹೆ ಕೊಡಲು ಆಗಿಲ್ಲ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳಿಗೆ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ.

ಸೈಟುಗಳನ್ನು ವಾಪಸ್ ಕೊಟ್ಟಿದ್ದೇವೆ. ಇದರೆಲೆಲ್ಲಾ ಯಾರು ಕಾನೂನು ಸಲಹೆ ನೀಡಿದವರು. ಯಾರದೋ ರೋಲ್ ಕಾಲ್ ಗಿರಾಕಿಗಳ ಮಾತಿಗೆ ನಾನು ಉತ್ತರಕೊಡಲ್ಲ ಎಂದು ಮಾಜಿ ಸಂಸದರಿಗೆ ತಿರುಗೇಟು ನೀಡಿದರು.

ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ವಿಜಯೇಂದ್ರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಯಾರು ಪೋಕ್ಸೋ ಕೇಸ್ ಎದುರಿಸುತ್ತಿದ್ದಾರೆ. ಯಾರು ಅವ್ಯವಹಾರದ ಟೀಕೆ ಎದುರಿಸುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಪೊನ್ನಣ್ಣ ಗರಂ ಆದರು.

ತನ್ನೀರ ಮೈನಾ ಅವರು ನನ್ನ ಭಾವನೆಗಳಿಗೆ ಧಕ್ಕೆ ಆಗಿದೆ ಅಂತ ದೂರು ಕೊಟ್ಟಿದ್ದಾರೆ. ಅದು ಬಿಟ್ಟರೆ ರಾಜಕೀಯ ದ್ವೇಷ ಇದರಲ್ಲಿ ಇಲ್ಲ, ಪೊಲೀಸರು ಯಾಕೆ ಪ್ರಕರಣ ದಾಖಲಿಸಿದರು ನನಗೆ ಗೊತ್ತಿಲ್ಲ. ವಿನಯ್ ಕುಟುಂಬಕ್ಕೆ ಸಹಾಯ ಮಾಡಲು ಚಿಂತಿಸಿದ್ದೇವೆ ಎಂದು ಹೇಳಿದರು.

ಶಾಸಕ ಮಂತರ್ ಗೌಡ ಮಾತನಾಡಿ, ಚುನಾವಣೆ ಸಂದರ್ಭದಿಂದಲೂ ನಾನು ಯಾರನ್ನೂ ವೈಯಕ್ತಿಕ ಟೀಕೆ ಮಾಡಿಲ್ಲ. ವಿನಯ್ ಸೋಮಣ್ಣ ಇದುವರೆಗೆ ನನಗೆ ಭೇಟಿಯಾಗಿಲ್ಲ. ಇದನ್ನು ನೋಡಿದರೆ ಬೇರೆ ರೀತಿ ಏನೋ ನಡೆಯುತ್ತಿದೆ. ಈ ಸತ್ಯ ಹೊರಬರಬೇಕು. ನಮ್ಮ ಅಭಿವೃದ್ಧಿ ಕೆಲಸಗಳಿಗೆ ಬ್ರೇಕ್ ಹಾಕುವುದಕ್ಕೆ ಪ್ರಯತ್ನ ನಡೆಯುತ್ತಿದೆ. ಯಾವ ಸಮಯದಲ್ಲಿ ಆತ್ಮಹತ್ಯೆ ಆಯ್ತು. ಎಲ್ಲಿ ಹೇಗೆ ಆಯ್ತು ಎನ್ನುವುದನ್ನು ತನಿಖೆ ಮಾಡಲಿ ಎಂದು ಆಗ್ರಹಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ವಿನಯ್ ಸಾವಿನ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿಯೂ ಸಂಬಂಧ ಹೊಂದಿರದೇ ಇದ್ದರೂ ಇಬ್ಬರು ಶಾಸಕರನ್ನು ದಾಳವಾಗಿರಿಸಿಕೊಂಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಎಂದರು. ಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಪ್ರಮುಖರಾದ ಟಿ.ಪಿ.ರಮೇಶ್, ಮುನೀರ್ ಅಹಮ್ಮದ್, ಕೊಲ್ಯದ ಗಿರೀಶ್ ಉಪಸ್ಥಿತರಿದ್ದರು.