ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರಬಿಎಲ್‌ಡಿಇ ಸಂಸ್ಥೆಯ ಕೆಡಿಸುವ ಪ್ರಯತ್ನ ನಡೆದಾಗ ದಿ.ಬಿ.ಎಂ.ಪಾಟೀಲರು ಶಕ್ತಿಮೀರಿ ಗಟ್ಟಿಯಾಗಿ ನಿಂತರು. ಶಿಕ್ಷಣ ಸಂಸ್ಥೆಗಳಲ್ಲಿ ರಾಜಕಾರಣ ಯಾವತ್ತೂ ಬರಬಾರದು, ರಾಜಕಾರಣ ಪ್ರವೇಶಿದರೆ ಶಿಕ್ಷಣ ಸಂಸ್ಥೆಗಳಿಗೆ ಧಕ್ಕೆಯಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಬಿ.ಎಲ್.ಡಿ.ಇ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಚಿಂತನ ಸಾಂಸ್ಕೃತಿಕ ಬಳಗದ ಆಶ್ರಯದಲ್ಲಿ ನಡೆದ ಬಂಥನಾಳದ ಸಂಗಮ ಬಸವ ಶಿವಯೋಗಿಗಳು, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ, ದಾನ ಚಿಂತಾಮಣಿ ಬಂಗಾರಮ್ಮ ಸಜ್ಜನ ಹಾಗೂ ಅಜಾತಶತ್ರು ದಿ.ಬಿ.ಎಂ.ಪಾಟೀಲ ಅವರ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ತುಮಕೂರಿನ ಸಿದ್ದಾರ್ಥ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಲು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಷರತ್ತು ವಿಧಿಸಿದ್ದರು. ಆದರೆ, ಶ್ರೀಗಳು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸುತಾರಾಂ ಒಪ್ಪಲಿಲ್ಲ, ಆಗ ನಾನು ಸಹ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅನುಮತಿ ಪಡೆದುಕೊಂಡೆ. ಕೆಎಲ್‌ಇ ಸಹ ಕೆಡಿಸುವ ಪ್ರಯತ್ನ ನಡೆಯಿತು, ಈ ಪ್ರಯತ್ನ ಬಿ.ಎಲ್.ಡಿ.ಇ ಅಲ್ಲಿಯೂ ನಡೆಯಿತು. ಆದರೆ ಅದನ್ನು ಗಟ್ಟಿಯಾಗಿ ದಿ.ಬಿ.ಎಂ.ಪಾಟೀಲರು ಶಕ್ತಿಮೀರಿ ಪ್ರಯತ್ನಿಸಿ ಗಟ್ಟಿಯಾಗಿ ನಿಂತರು ಎಂದರು.ಎಸ್.ಎಸ್.ಎಲ್. ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಬೀದರ್, ಕಲಬುರ್ಗಿ, ರಾಯಚೂರ, ಕೊಪ್ಪಳ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿಯೇ ಇರುತ್ತವೆ. ಆದರೆ ಧಾರವಾಡ ಮುಂತಾದ ಕಡೆಗಳಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿದವು, ಶಿಕ್ಷಣ ಸಚಿವರಾಗಿದ್ದ ದಿ.ಕಂಬಳಿ ಸಿದ್ದಪ್ಪ ಆಗ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಒತ್ತು ನೀಡುವಂತೆ ಕೋರಿದ ಪರಿಣಾಮ ಅನೇಕ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಆರಂಭಗೊಂಡವು. ಡಾ.ಫ.ಗು.ಹಳಕಟ್ಟಿ ಅವರು ತಮ್ಮ ಸರ್ವಸ್ವವನ್ನು ವಚನ ಸಂಶೋಧನೆಗೆ ತ್ಯಾಗ ಮಾಡಿದ್ದಾರೆ. ಬಂಥನಾಳ ಶಿವಯೋಗಿಗಳು, ದಾನ ಚಿಂತಾಮಣಿ ಬಂಗಾರಮ್ಮ ಸಜ್ಜನ ದಿ.ಬಿ.ಎಂ.ಪಾಟೀಲ ಮೊದಲಾದ ಮಹನೀಯರು ಬಿ.ಎಲ್.ಡಿ.ಇ. ಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಅಪ್ಪಾಜಿ ನಾಡಗೌಡ, ಶಾಸಕರಾದ ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ ವಿಶ್ವವಿದ್ಯಾಲಯ ಕುಲಪತಿ ಬಸನಗೌಡ ಪಾಟೀಲ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಬಿ.ಎಲ್.ಡಿ.ಇ. ರಿಜಿಸ್ಟ್ರಾರ್ ರಾಘವೇಂದ್ರ ಕುಲಕರ್ಣಿ, ಡಾ.ಅರುಣ ಇನಾಮದಾರ, ಬಿ.ಎಸ್.ಪಾಟೀಲ ಯಾಳಗಿ, ಎಸ್.ವಿ.ಪಾಟೀಲ, ಮೊಹ್ಮದ್ ರಫೀಕ್ ಟಪಾಲ್, ಶ್ರೀದೇವಿ ಉತ್ಲಾಸರ, ಅರವಿಂದ ಹಿರೊಳ್ಳಿ, ಗಂಗಾಧರ ಸಾಲಕ್ಕಿ ಇತರರು ಇದ್ದರು.
ಚಿಂತನ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿ.ಡಿ.ಐಹೊಳಿ ಹಾಗೂ ಪ್ರೊ.ಸುಭಾಸಚಂದ್ರ ಕನ್ನೂರ ನಿರೂಪಿಸಿದರು.----
ಕೋಟ್ಪ್ರಪಂಚದಲ್ಲಿ ಧರ್ಮ ಧರ್ಮಗಳ ನಡುವೆ ಯುದ್ದ ನಡೆಯುತ್ತಿದೆ. ಜಗತ್ತಿಗೆ ಶಾಂತಿ ಬೋಧಿಸಿದ ಬುದ್ದನ ತತ್ವ ಪಾಲಿಸುವ ರಾಷ್ಟ್ರಗಳು ಸಹ ಯುದ್ದ ಮಾಡುತ್ತಿವೆ. ತುಂಡು ಜಮೀನಿಗಾಗಿ ಕಾಂಬೋಡಿಯಾ, ಥೈಲ್ಯಾಂಡ್ ಜಗಳವಾಡುತ್ತಿರುವುದು ನೋವಿನ ಸಂಗತಿ. ದೇಶವೇ ಮೊದಲಾಗಬೇಕು, ಆಚರಣೆ, ನಂಬಿಕೆ ಆನಂತರ ಇರಬೇಕು. ಆದರೆ ಇತ್ತೀಚಿಗೆ ಈ ಮನೋಭಾವ ಬದಲಾಗುತ್ತಿರುವುದು ಬೇಸರದ ಸಂಗತಿ. ಸಂವಿಧಾನ ಉಳಿಯಬೇಕು, ಸಂವಿಧಾನ ಉಳಿದರೆ ದೇಶ, ಪ್ರಜಾಪ್ರಭುತ್ವ ಉಳಿಯಲು ಸಾಧ್ಯ.
ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಅಧ್ಯಕ್ಷ