ಚಿತ್ರದುರ್ಗದ ಎಪಿಎಂಸಿ ರೈತಭವನದಲ್ಲಿ ಸೋಮವಾರ ನಡೆದ ಚಿಂತನ ಶ್ರಾವಣ ಕಾರ್ಯಕ್ರಮದಲ್ಲಿ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿದರು.

ರೈತ ಭವನದಲ್ಲಿ ನಡೆದ ಅನುಭಾವ ಶ್ರಾವಣ ಶರಣ ಚಿಂತನ ಮಾಲಿಕೆಯಲ್ಲಿ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆಯ ಪೂರ್ಣಪ್ರಮಾಣದ ಅನುಷ್ಠಾನ ವಿಳಂಬಕ್ಕೆ ಚಿತ್ರದುರ್ಗ ನೆಲದ ರಾಜಕೀಯ ವೈಫಲ್ಯ ಕಾರಣವೆಂದು ಹಿರಿಯ ಪತ್ರಕರ್ತ ಹಾಗೂ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಆರೋಪಿಸಿದರು.

ನಗರದ ಕೃಷಿ ಇಲಾಖೆ ರೈತನಾಯಕ ದಿವಂಗತ ಪುಟ್ಟಯ್ಯ ಸಭಾ ಭವನದಲ್ಲಿ ರೈತ ಸಂಘದವರು ಏರ್ಪಡಿಸಿದ್ದ ಅನುಭಾವ ಶ್ರಾವಣ ಶರಣ ಚಿಂತನಮಾಲಿಕೆಯ 18ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತದ ಹಿಂದೆ ಜಿಲ್ಲೆಯ ಜನ ಸಮುದಾಯದ ಯಶಸ್ವಿ ಹೋರಾಟವಿದೆ. ಸರ್ಕಾರಕ್ಕೆ ನೀರು ತೋರಿಸಿ, ಯೋಜನೆ ಮಂಜೂರು ಮಾಡಿಸಿ ಕಾಮಗಾರಿ ಆರಂಭವಾಗಿಸುವುದರ ತನಕ ಸಮುದಾಯ ಹೋರಾಟ ತನ್ನ ಅಸ್ಥಿತ್ವ ಕಾಯ್ದುಕೊಂಡಿದೆ. ಕಾಮಗಾರಿ ನಿಧಾನವಾಗದಂತೆ ನೋಡಿಕೊಳ್ಲುವ ಜವಾಬ್ದಾರಿ ಜನ ಪ್ರತಿನಿಧಿಗಳದ್ದಾಗಿದೆ. ಪ್ರತಿ ಹಂತಕ್ಕೂ ಜನರೇ ಹೋರಾಟ ಮಾಡಿ ರಾಜ್ಯ ಸರ್ಕಾರವ ಎಚ್ಚರಿಸುವ ಇರಾದೆ ಇಲ್ಲವೆಂದರು.

ಆರಂಭದಲ್ಲಿ 6 ಸಾವಿರ ಕೋಟಿ ರು. ಇದ್ದ ಯೋಜನಾ ವೆಚ್ಚ ಇದೀಗ 22 ಸಾವಿರ ಕೋಟಿ ರು. ಗೆ ಹೆಚ್ಚಳವಾಗಿದೆ. ರಾಜ್ಯ ಸರ್ಕಾರ ಅನುದಾನ ಹೊಂದಿಸಿ ಕಾಮಗಾರಿ ಪೂರ್ಣಗೊಳಿಸುವ ಹಂತದಲ್ಲಿ 5300 ಕೋಟಿ ರು. ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವತಹ ಚಿತ್ರದುರ್ಗದಲ್ಲಿ ಘೋಷಣೆ ಮಾಡಿದ ನಂತರ ಕಾಮಗಾರಿ ನೆನೆಗುದಿಗೆ ಬಿದ್ದಿತು. ಕೇಂದ್ರದ ಕಡೆ ರಾಜ್ಯ ಸರ್ಕಾರ ಬೆಟ್ಟು ಮಾಡಿ ತೋರಿಸುತ್ತಾ ತನ್ನ ಜವಾಬ್ದಾರಿ ಮರೆಯಿತು.

ಕಾವೇರಿ ಸಮಸ್ಯೆ ಎದುರಾದಾಗ ರಾಜ್ಯ ಸರ್ಕಾರ ತಮ್ಮ ಪ್ರಮಾದವೆನ್ನುವಂತೆ ನಿರ್ವಹಣೆಗೆ ಮುಂದಾಗುತ್ತದೆ. ಆದರೆ ಕೃಷ್ಣೆ ವಿಚಾರ ಬಂದಾಗ ನಿರ್ಲಕ್ಷ್ಯ ತೋರುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಕೃಷ್ಣಕಣಿವೆ ವ್ಯಾಪ್ತಿಗೆ ಬರುತ್ತದೆ. ಜಿಲ್ಲೆಯ ಮಠಾಧೀಶರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಿವಿ ಹಿಂಡಿ ಅನುದಾನ ಬಿಡುಗಡೆ ಮಾಡಿಸುವುದರ ಕಡೆ ತಮ್ಮ ಪ್ರಯತ್ನ ಮುಂದುವರಿಸಬೇಕು.

ಭದ್ರಾ ಹೋರಾಟಗಳು ಮುಗಿದಿದ್ದು ಈಗ ಉಳಿದಿರುವುದು ಒತ್ತಡ ಹಾಕುವ ಕೆಲಸ ಮಾತ್ರವೆಂದು ಚಿಕ್ಕಪ್ಪನಹಳ್ಳಿ ಷಣ್ಮುಖ ಹೇಳಿದರು. ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಶ್ರಾವಣಮಾಸ ಒಟ್ಟಾರೆ ಎಲ್ಲರಿಗೂ ಶ್ರವಣ ಮತ್ತು ಮನನ ಮಾಡಿಕೊಳ್ಳಲು ಉತ್ತಮ ಕಾಲವೆಂದು ಪ್ರಕೃತಿಯೊಂದಿಗಿನ ಒಡನಾಟದಲ್ಲಿ ನಮ್ಮ ಪೂರ್ವಿಕರು ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ. ಇದರಿಂದ ರೈತಲೂ ಹೊರತಾಗಿಲ್ಲ. ರೈತ ಮುಖಂಡರು, ಸೇರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದರು.

ನಿಡಸೋಸಿಯ ನಿಜಲಿಂಗೇಶ್ವರರು 17-18ನೇ ಶತಮಾನದಲ್ಲಿ ಬಾಳಿ ಹೋದ ಮಹಾ ತಪಸ್ವಿಗಳು. ಬಸವತತ್ವದ ಪರಮ ಅನುಯಾಯಿಗಳಾಗಿ ನಡೆದವರು. ಅಲ್ಲಿನ ದಾಸೋಹ ವ್ಯವಸ್ಥೆ ಮಾದರಿಯಾಗಿ ಈಗಲೂ ನಡೆದಿದೆ. ಇದರೊಂದಿಗೆ ಈಗ ಶಿಕ್ಷಣ ಕ್ಷೇತ್ರಕ್ಕೆ ಒತ್ತುಕೊಟ್ಟು ಬಡವರ ಪಾಲಿಗೆ ಸೇವೆ ಸಲ್ಲಿಸುತ್ತಿದೆ. ರೈತರು ಶ್ರೀಮಠದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಬೇಕೆಂದು ಸಲಹೆ ನೀಡಿದರು.

ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಅಂದು ಬಯಲು ಸೀಮೆಯ ನಾಡಿಗೆ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳು ಕೇವಲ ಜನರಿಂದಲೇ 7 ಕೆರೆಗಳನ್ನು ಕಟ್ಟಿಸುತ್ತಾರೆ. ಯಾವ ತಂತ್ರಜ್ಞಾನ ಸೌಲಭ್ಯಗಳಿರದ ಕಾಲದಲ್ಲಿ ಸಾಧ್ಯವಾಗಿರೋದು ಈಗ ಯಾಕೆ ಆಗುತ್ತಿಲ್ಲ. ಭದ್ರಾ ಮೇಲ್ದಂಡೆಯೋಜನೆ ಜಾರಿಗೆ ಇಚ್ಛಾಶಕ್ತಿ ಕೊರತೆ ಇದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಇಂತಹ ಅನುಭಾವ ಚಿಂತನ ಮಾಲಿಕೆಗಳಿಂದ ಜನತೆ ಅನುಭವವನ್ನು ಪಡೆದುಕೊಳ್ಳಬೇಕಿದೆ ಎಂದರು.

ನಿಡಸೋಸಿಯ ಶಿವಯೋಗಿಗಳವರ ಬಗ್ಗೆ ವಿಷಯಾವಲೋಕನ ಮಾಡಿದ ಉಪನ್ಯಾಸಕ ವಿಶ್ವನಾಥ್, ನಿಡಸೋಸಿ ಕ್ಷೇತ್ರವು ಭಕ್ತಿ, ಜ್ಞಾನ ಮತ್ತು ದಾಸೋಹದ ಕೇಂದ್ರವಾಗಿ ಬೆಳೆದಿದೆ. ಮಠವು ಕೇವಲ ಧಾರ್ಮಿಕ ಕೇಂದ್ರವಲ್ಲದೆ, ವಿಜ್ಞಾನ, ಚಿಂತನೆ ಮತ್ತು ಸಮಾಜಸೇವೆಯ ಕೇಂದ್ರವಾಗಬೇಕು ಎಂಬ ಸಂದೇಶವನ್ನು ಈ ಪರಂಪರೆ ಸಾರುತ್ತದೆ ಎಂದು ತಿಳಿಸಿದರು.

ರೈತಮುಖಂಡ ಕೆ.ಪಿ ಭೂತಯ್ಯ, ಬಾಪೂಜಿ ವಿದ್ಯಾಸಂಸ್ಥೆ ಸ್ಥಾಪಕ ಕೆ.ಎಂ ವೀರೇಶ್ ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ,ಸುಧಾ, ತಿಪ್ಪೇಸ್ವಾಮಿ, ಸುರೇಶ್‌ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಪಿ.ವೀರೇಂದ್ರಕುಮಾರ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು. ಉಮೇಶ್ ಪತ್ತಾರ್ ಪ್ರಾರ್ಥನೆ ಹಾಡಿದರೆ, ರುದ್ರಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಮತ್ತೋರ್ವ ಉಪನ್ಯಾಸಕಿ ಡಾ.ಪುಷ್ಪಾ ಶರಣು ಸಮರ್ಪಣೆ ಮಾಡಿದರು.