ರಾಜಕೀಯ ದ್ವೇಷ: ಭೀಮನಗೌಡನ ಬರ್ಬರ ಹತ್ಯೆ

| Published : Sep 04 2025, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಬಾಗಪ್ಪ ಹರಿಜನ ಕೊಲೆಯಾಗಿ ವರ್ಷ ತುಂಬುವುದರೊಳಗೆ ಭೀಮಾ ತೀರದಲ್ಲಿ ದುಷ್ಕರ್ಮಿಗಳಿಂದ ಮತ್ತೊಂದು ಭೀಕರ ಹತ್ಯೆ ನಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ರೌಡಿಶೀಟರ್‌ ಭೀಮನಗೌಡ ಬಿರಾದಾರ್‌ (42) ಮೇಲೆ ಮೂರ್ನಾಲ್ಕು ಜನ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಬರ್ಬರ ಹತ್ಯೆ ನಡೆಸಿದ್ದಾರೆ. ನಂತರ ಆರೋಪಿಗಳೆಲ್ಲರೂ ಚಡಚಣ ಠಾಣೆಗೆ ತೆರಳಿ ಶರಣಾಗಿದ್ದಾರೆ. ಕೃತ್ಯ ಎಸಗಿದ್ದಾರೆ ಎಂದು ಹೇಳಿಕೊಂಡು ರಜೀವುಲ್ಲಾ ಮಕಾನದಾರ್, ವಸೀಂ ಮಣಿಯಾರ್, ಫಿರೋಜ್ ಅವರಾದ್, ಮೌಲಾಲಿ ಲಾಡೇಸಾಬ್ ಚೋರಗಿ ಠಾಣೆಗೆ ಶರಣಾದ ಆರೋಪಿಗಳು.

ಕನ್ನಡಪ್ರಭ ವಾರ್ತೆ ಚಡಚಣ

ಬಾಗಪ್ಪ ಹರಿಜನ ಕೊಲೆಯಾಗಿ ವರ್ಷ ತುಂಬುವುದರೊಳಗೆ ಭೀಮಾ ತೀರದಲ್ಲಿ ದುಷ್ಕರ್ಮಿಗಳಿಂದ ಮತ್ತೊಂದು ಭೀಕರ ಹತ್ಯೆ ನಡೆದಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ರೌಡಿಶೀಟರ್‌ ಭೀಮನಗೌಡ ಬಿರಾದಾರ್‌ (42) ಮೇಲೆ ಮೂರ್ನಾಲ್ಕು ಜನ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಬರ್ಬರ ಹತ್ಯೆ ನಡೆಸಿದ್ದಾರೆ. ನಂತರ ಆರೋಪಿಗಳೆಲ್ಲರೂ ಚಡಚಣ ಠಾಣೆಗೆ ತೆರಳಿ ಶರಣಾಗಿದ್ದಾರೆ. ಕೃತ್ಯ ಎಸಗಿದ್ದಾರೆ ಎಂದು ಹೇಳಿಕೊಂಡು ರಜೀವುಲ್ಲಾ ಮಕಾನದಾರ್, ವಸೀಂ ಮಣಿಯಾರ್, ಫಿರೋಜ್ ಅವರಾದ್, ಮೌಲಾಲಿ ಲಾಡೇಸಾಬ್ ಚೋರಗಿ ಠಾಣೆಗೆ ಶರಣಾದ ಆರೋಪಿಗಳು.

ಘಟನೆ ಹೇಗೆ ನಡೆಯಿತು?:

ಮಹಾದೇವ ಭೈರಗೊಂಡರ ಪರಮಾಪ್ತನಾಗಿರುವ ಭೀಮನಗೌಡ ಬಿರಾದಾರ ಬುಧವಾರ ಬೆಳಗ್ಗೆ ಗ್ರಾಮ ಪಂಚಾಯತಿ ಕಚೇರಿ ಬಳಿಯಿರುವ ಸಲೂನ್‌ನಲ್ಲಿ ಕಟಿಂಗ್‌ ಮಾಡಿಸಿಕೊಳ್ಳುತ್ತಿದ್ದಾಗ ಏಕಾಏಕಿ ದಾಳಿ ನಡೆಸಿರುವ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ತಲೆಗೆ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ. ಆತ ಚೇರ್‌ ಮೇಲೆಯೇ ಕುಸಿದು ಬಿದ್ದಿದ್ದು, ನಾಡ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಮೂರು ಗುಂಡುಗಳು ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ತಗುಲಿದ್ದರಿಂದ ರೌಡಿಶೀಟರ್‌ ಭೀಮನಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಸುದ್ದಿ ತಿಳಿದ ಚಡಚಣ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಈ ಪ್ರಕರಣ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿರುವ ರಜೀವುಲ್ಲಾ ಮಕಾನದಾರ್, ವಸೀಂ ಮಣಿಯಾರ್, ಫಿರೋಜ್ ಅವರಾದ್, ಮೌಲಾಲಿ ಲಾಡೇಸಾಬ್ ಚೋರಗಿ ಆರೋಪಿಗಳು ಚಡಚಣ ಪೊಲೀಸ್‌ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾರೆ. ಆರೋಪಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ:

ಬುಧವಾರ ಸಂಜೆ ಭೀಮನಗೌಡನ ಮೃತದೇಹ ವಿಜಯಪುರದಿಂದ ದೇವರನಿಂಬರಗಿಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಹಾಗೂ ಆಪ್ತರು ಸೇರಿದಂತೆ ಸಹಸ್ರಾರು ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹ ನೋಡಲು ಬಂದ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

---------------

ಬಾಕ್ಸ್‌.....

ಭೀಕರ ಹತ್ಯೆಗೆ ಕಾರಣವೇನು..?

ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಒಂದು ಬಾರಿ ತಾಲೂಕು ಪಂಚಾಯತಿ ಅಧ್ಯಕ್ಷನಾಗಿದ್ದ ಭೀಮನಗೌಡ, ಈಗ ಸತತ ಎರಡನೇ ಬಾರಿ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ. ಇದೇ ಡಿಸೆಂಬರ್‌ನಲ್ಲಿ ಅಧಿಕಾರಾವಧಿ ಮುಗಿಯಲಿದ್ದು, ಮತ್ತೆ ಚುನಾವಣೆ ನಡೆದರೇ, ಆತನೇ ಅಧ್ಯಕ್ಷನಾಗುತ್ತಾನೆ. ಇಲ್ಲದಿದ್ದರೆ ಆತ ತನ್ನ ಆಪ್ತನನ್ನು ಅಧ್ಯಕ್ಷ ಗಾದಿಗೆ ಕೂಡಿಸುತ್ತಾನೆ ಎಂದು ಭಾವಿಸಿ ಆರೋಪಿತರು ಆತನನ್ನು ಹತ್ಯೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಹಾದೇವ ಸಾಹುಕಾರ ಭೈರಗೊಂಡ ಅಪ್ತನಾಗಿದ್ದ ರೌಡಿಶೀಟರ್‌ ಭೀಮನಗೌಡ ಬಿರಾದಾರ 2017ರಲ್ಲಿ ಕೊಂಕಣಗಾಂವ ಗ್ರಾಮದಲ್ಲಿ ನಡೆದ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಸಹೋದರ ಹತ್ಯೆ ಪ್ರಕರಣದಲ್ಲಿ ಎ8 ಆರೋಪಿಯಾಗಿದ್ದ. ಈತ ಸುಮಾರು ಒಂದು ವರ್ಷ ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರಬಂದಿದ್ದ. ಅಲ್ಲದೇ, ಗ್ರಾಮ ಪಂಚಾಯತಿಯಲ್ಲಿ ಮನೆ ಹಂಚಿಕೆ, ಅನುದಾನ ಹಂಚಿಕೆ ಹಾಗೂ ಅಟ್ರಾಸಿಟಿ ಕೇಸ್‌ನಲ್ಲಿ ಓರ್ವ ಸದಸ್ಯನನ್ನು ಜೈಲಿಗೆ ಕಳುಹಿಸಿದ ಆಪಾದನೆಯೂ ಈತನ ಮೇಲಿದೆ. ಅಲ್ಲದೇ, ಭೀಮನಗೌಡನ ಮೇಲೆ ಹಲವು ಆಪಾದನೆಗಳು ಇದ್ದು, ರೌಡಿಶೀಟರ್‌ ಆಗಿದ್ದ. ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.