ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಸಭೆ, ಸಮಾರಂಭಗಳು ಮಾಡಬಾರದು. ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆದ ವಾಹಗಳನ್ನು ಮಾತ್ರ ಬಳಸಬೇಕು ಮತ್ತು ಪ್ರತಿ ಹತ್ತು ವಾಹನಗಳ ನಂತರ 100 ಮೀಟರ್ ಅಂತರ ಕಾಯ್ದುಕೊಂಡು ಮೆರವಣಿಗೆ ನಡೆಸಬೇಕು. ಯಾವುದೇ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರಿಗೆ ಊಟ ಕೊಡುವ ಹಾಗಿಲ್ಲ. ನೀರು ಮತ್ತು ಮಜ್ಜಿಗೆ ಕೊಡಬಹುದಾಗಿದ್ದು ಈ ಮಾಹಿತಿಯನ್ನು ತಮ್ಮ ಪಕ್ಷಗಳ ಎಲ್ಲಾ ಕಾರ್ಯಕರ್ತರಿಗೆ ತಿಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮಗಳ ಆಯೋಜನೆಗೆ ಬೆಳಗ್ಗೆ 6 ರಿಂದ ರಾತ್ರಿ 10 ರ ವರೆಗೆ ಮಾತ್ರ ಕಾಲಾವಕಾಶ ಇರುತ್ತದೆ. ಈ ಸಮಯ ಮುಗಿದ ನಂತರ ಕಾರ್ಯಕ್ರಮಗಳನ್ನು ಮಾಡಬಾರದು. ಮತ್ತು ಒಂದು ಕಾರ್ಯಕ್ರಮ ನಂತರ ಇನ್ನೊಂದು ಕಾರ್ಯಕ್ರಮ ಮಾಡಲು ಒಂದು ಗಂಟೆಯ ಸಮಯದ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಮನೆಗಳ ಮೇಲೆ ಪಕ್ಷದ ಧ್ವಜ ಹಾಗೂ ಗೋಡೆ ಬರಹ ಬರೆಸಬೇಕಾದರೆ ಆ ಮನೆ ಮಾಲೀಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದರು.ಜನನಿಬಿಡ ಪ್ರದೇಶಗಳಲ್ಲಿ ಸಭೆ ಸಮಾರಂಭ ಮಾಡಲು ಅವಕಾಶ ನೀಡುವದಿಲ್ಲ. ಚುನಾವಣಾ ಸಭೆ, ಸಮಾರಂಭ, ವಾಹನ, ಚುನಾವಣಾ ಕಚೇರಿ, ಧ್ವನಿವರ್ದಕಗಳ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಅನುಮತಿ ಪಡೆಯಲು ಸುವಿಧಾ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇದರ ಪ್ರಯೋಜನೆ ಪಡೆಯಬೇಕು ಎಂದು ಹೇಳಿದರು.
ಏ.12 ರಿಂದ ನಾಮಪತ್ರಗಳ ಸಲ್ಲಿಕೆ ಆರಂಭವಾಗಿ ಏ.19ರಂದು ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ.20 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 22 ನಾಮಪತ್ರಗಳ ಹಿಂಪಡೆಯುವ ಕೊನೆಯ ದಿನವಾಗಲಿದೆ.ಮೇ 7ರಂದು ಮತದಾನ ನಡೆಯಲಿದ್ದು, ಜೂ.4ರಂದು ಮತ ಎಣಿಕೆ ನಡೆಯಲಿದೆ. ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಸಾರ್ವತ್ರಿಕ ಲೋಕಸಭಾ ಚುನಾವಣೆ ನಡೆಯಲು ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಚುನಾವಣಾ ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್, ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಸಿಪಿಐ ಎಂ ಪಕ್ಷದ ಪ್ರಮುಖರು ಸೇರಿದಂತೆ ಇತರರು ಉಪಸ್ಥಿತರಿದ್ದರು.