ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಈ ಬಾರಿ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಇನ್ನೂ ಏರಿದಂತೆ ಕಾಣುತ್ತಿಲ್ಲ. ನಾಮಪತ್ರ ಸಲ್ಲಿಕೆ ಕೊನೆಗೊಂಡು ಏ.26ರಂದು ಮತದಾನಕ್ಕೆ 20 ದಿನ ಬಾಕಿ ಉಳಿದಿದೆ. ಆದರೂ ದ.ಕ.ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಪ್ರಚಾರದ ಭರಾಟೆ ಶುರುವಾಗಿಲ್ಲ. ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ನೆಚ್ಚಿಕೊಂಡಿದ್ದಾರೆ.
ಎರಡೂ ಪಕ್ಷಗಳ ಅಭ್ಯರ್ಥಿಗಳು ಜಾಲತಾಣಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೀಲ್ಸ್, ವಿಡಿಯೋ ಪೋಸ್ಟ್‌ಗಳನ್ನು ಹರಿಯಬಿಟ್ಟಿದ್ದಾರೆ. ಪರಸ್ಪರ ಕಾಲೆಳೆಯುವ ರೀಲ್ಸ್‌ಗಳೂ ಇಲ್ಲದಿಲ್ಲ. ಅಭಿವೃದ್ಧಿ ವಿಚಾರಗಳ ಜತೆಗೆ ರಾಜಕೀಯ ಪೋಸ್ಟ್‌ಗಳೂ ಹರಿದಾಡುತ್ತಿವೆ. ಸದ್ಯದ ಮಟ್ಟಿಗೆ ಇದುವೇ ರಾಜಕೀಯ ಪಕ್ಷಗಳ ಪ್ರಚಾರದ ಸರಕಾಗಿದೆ.ವಾರ್ ರೂಂನಲ್ಲಿ ಬ್ಯೂಸಿ:
ಎರಡು ಪಕ್ಷಗಳು ಪ್ರಚಾರಕ್ಕೆ ವಾರ್ ರೂಂ ತೆರೆದಿದ್ದು, ಅವುಗಳು ಸದ್ಯಕ್ಕೆ ಬಿಝಿ ಆಗಿವೆ. ಜಾಲತಾಣಗಳು ಪಕ್ಷದಿಂದ ಮಾತ್ರವಲ್ಲ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಸ್ವತಃ ಅಭ್ಯರ್ಥಿಗಳ ಹೆಸರಿನಲ್ಲಿ ಕೂಡ ಜಾಲ ತಾಣ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಅಭ್ಯರ್ಥಿಗಳ ಪ್ರವಾಸ ಜತೆಗೆ ಇತರೆ ಪ್ರಚಾರವೂ ಕಾಣಿಸುತ್ತಿದೆ.ಸಾಂಪ್ರದಾಯಿಕ ಪ್ರಚಾರಕ್ಕೆ ಒತ್ತು:
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ. ಹಾಗಾಗಿ ಈ ಉಭಯ ಪಕ್ಷಗಳು ಸಾಂಪ್ರದಾಯಿಕ ಎಂಬಂತೆ ಮನೆ ಮನೆ ಪ್ರಚಾರಕ್ಕೆ ಒತ್ತು ನೀಡಿವೆ. ಬಿಜೆಪಿ ಅಭ್ಯರ್ಥಿ ಎರಡು ಸುತ್ತು ಪ್ರಚಾರ ಮುಕ್ತಾಯಗೊಳಿಸಿ ಈಗ ಮೂರನೇ ಸುತ್ತಿನ ಪ್ರಚಾರಕ್ಕೆ ಇಳಿದಿದ್ದಾರೆ. ರಾಜಧಾನಿ ಬೆಂಗಳೂರು ಹಾಗೂ ಮುಂಬೈನಲ್ಲಿರುವ ಕರಾವಳಿಯ ಮತದಾರರ ಭೇಟಿ ಮಾಡಲು ಬಿಜೆಪಿ ಅಭ್ಯರ್ಥಿ ತೆರಳಿದ್ದಾರೆ. ಕಾಂಗ್ರೆಸ್‌ನಲ್ಲಿ ಕೂಡ ಈ ಪ್ರಯತ್ನ ನಡೆಯುತ್ತಿದೆ. ಸದ್ಯವೇ ಹೊರ ರಾಜ್ಯಗಳಲ್ಲಿರುವ ಕರಾವಳಿಯ ಮತದಾರರ ಸೆಳೆಯಲು ಸಿದ್ಧತೆ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿ ಮೊದಲ ಸುತ್ತಿನ ಪ್ರಚಾರವಷ್ಟೆ ಮುಗಿದಿದೆ. ಎರಡನೇ ಸುತ್ತಿನ ಪ್ರಚಾರ ಆರಂಭವಾಗಿದೆ ಎನ್ನುತ್ತಾರೆ ಪಕ್ಷ ಮುಖಂಡರು.ಸ್ಟಾರ್ ಪ್ರಚಾರಕ್ಕೆ ಸಿದ್ಧತೆ:
ಎರಡೂ ಪಕ್ಷಗಳಲ್ಲಿ ಸದ್ಯಕ್ಕೆ ಸ್ಟಾರ್ ಪ್ರಚಾರಕರು ಆಗಮಿಸಿಲ್ಲ. ಏ.15 ಅಥವಾ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಉಳಿದಂತೆ ಸ್ಟಾರ್ ಪ್ರಚಾರಕರು ಯಾರೇ ಬಂದರೂ ಸಮಾವೇಶ ಏರ್ಪಡಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ.ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತಿತರರನ್ನು ಕರೆಸಲು ಸಿದ್ಧತೆ ನಡೆಯುತ್ತಿದೆ.
----------ಮೊದಲ ಸುತ್ತಿನಲ್ಲಿ ಮಹಾಶಕ್ತಿ ಕೇಂದ್ರಗಳ ಸಭೆ ನಡೆಸಲಾಗಿದೆ. ಎರಡನೇ ಸುತ್ತಿನಲ್ಲಿ ಮಂಡಲ ಕಾರ್ಯಕರ್ತರ ಸಮಾವೇಶ ಪೂರ್ಣಗೊಳಿಸಲಾಗಿದೆ. ಮೂರನೇ ಸುತ್ತಿನಲ್ಲಿ ಮಂಡಲ ಭೇಟಿ ಅಭಿಯಾನ ನಡೆಯುತ್ತಿದೆ. ಈ ಮಧ್ಯೆ ಮನೆ ಮನೆ ಭೇಟಿ ಮುಂದುವರಿದಿದೆ. ಸ್ಟಾರ್ ಪ್ರಚಾರಕರನ್ನು ಕರೆಸಲು ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ ಬಿಜೆಪಿ ಅಭ್ಯರ್ಥಿ ಪರ ಮಾಧ್ಯಮ ಕಾರ್ಯದರ್ಶಿ ಸುಜಿತ್ ಪ್ರತಾಪ್. ಪ್ರಥಮ ಸುತ್ತಿನ ಪ್ರಚಾರ ಪೂರ್ತಿಯಾಗಿದ್ದು, ಎರಡನೇ ಸುತ್ತು ಪ್ರಚಾರ ನಡೆಯುತ್ತಿದೆ. ಏಪ್ರಿಲ್ ಮಧ್ಯಭಾಗದಲ್ಲಿ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಲಿದ್ದಾರೆ. ಪಕ್ಷದಿಂದ ಪ್ರಚಾರಕರನ್ನು ಕಳುಹಿಸಿದರೆ, ಇಲ್ಲಿ ಸಮಾವೇಶ ನಡೆಸಲು ಸಿದ್ಧರಿದ್ದೇವೆ. ಹೊರ ಜಿಲ್ಲೆ, ರಾಜ್ಯಗಳ ಮತದಾರರ ಭೇಟಿಗೆ ಸಿದ್ಧತಾ ಸಭೆ ನಡೆಯುತ್ತಿದೆ ಎಂದು ದ.ಕ. ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳುತ್ತಾರೆ.