ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಜಿಲ್ಲೆಯಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆ ಜರುಗಿಸಲು ಎಲ್ಲ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಭಾನುವಾರ ಜರುಗಿದ ನಾಮಪತ್ರ ಸಲ್ಲಿಕೆ, ಮಾದರಿ ನೀತಿ ಸಂಹಿತೆ ಚುನಾವಣಾ ಅಭ್ಯರ್ಥಿ ಖರ್ಚುವೆಚ್ಚ ಹಾಗೂ ಇನ್ನಿತರ ವಿಷಯಗಳ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಚುನಾವಣಾ ಕಾರ್ಯಗಳಿಗೆ ಸಂಬಂಧಪಟ್ಟ ವಿವಿಧ ರೀತಿಯ ಪರವಾನಗಿಗಳಿಗೆ ಆನ್‌ಲೈನ್ ಮೂಲಕವೇ ಸುವಿಧಾ ತಂತ್ರಾಂಶದಲ್ಲಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿದ ಅವರು, ಜಿಲ್ಲಾಡಳಿತದ ಮುಖ್ಯದ್ವಾರದಲ್ಲಿ 24 ಗಂಟೆ ಕಾರ್ಯ ಮಾಡುವ ಕೇಂದ್ರೀಕೃತ ಕಂಟ್ರೋಲ್ ರೂಂ ತೆರೆಯಲಾಗಿದೆ. ಚುನಾವಣಾ ಸಂಬಂಧಿತ ಕಾರ್ಯಗಳಿಗೆ ನಿಯಮಾನುಸಾರ ಆನ್‌ಲೈನ್ ಪರವಾನಿಗೆಗಳನ್ನು ಸಿಂಗಲ್ ವಿಂಡೋ ಮೂಲಕ ನೀಡಲಾಗುವುದು. ರಾಜಕೀಯ ಪಕ್ಷಗಳಿಗೆ ಓಡಾಟ ಆಗದಂತೆ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಒಂದೆಡೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಮಾದರಿ ನೀತಿ ಸಂಹಿತೆ ನಿಗಾ ವಹಿಸಲು ಕೈಮಗ್ಗ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಮೋನಾ ರಾವುತ್ ನೇತೃತ್ವದಲ್ಲಿ ಎಂ.ಸಿ.ಸಿ ತಂಡ ರಚಿಸಲಾಗಿದೆ ಎಂದು ತಿಳಿಸಿದರು.ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇಲೆಕ್ಟ್ರಾನಿಕ್ ಪ್ರಚಾರಕ್ಕಾಗಿ ಕಡ್ಡಾಯವಾಗಿ ಮಾಧ್ಯಮ ಪ್ರಮಾಣೀಕರಣ ಪಡೆಯತಕ್ಕದ್ದು, ಪತ್ರಿಕೆಗಳಲ್ಲಿ ಪ್ರಕಟವಾಗುವ ಪೇಯ್ಡ್ ನ್ಯೂಸ್‌ಗಳ ಮೇಲೆ ನಿಗಾವಹಿಸಲಾಗುವುದು. ಚುನಾವಣಾ ಕಾರಣಕ್ಕಾಗಿ ಪ್ರಸಾರ ಮಾಡಲು ಸಿದ್ಧಪಡಿಸಿದ ಜಾಹೀರಾತು ಪ್ರಸಾರಕ್ಕೆ ಯೋಗ್ಯವೇ ಅಥವಾ ಇಲ್ಲವೇ ಎಂದು ಎಂ.ಸಿ.ಎಂ.ಸಿ. ತಂಡ ಪರಿಶೀಲನೆ ಮಾಡುತ್ತದೆ. ಪ್ರಚಾರದ ಕರಪತ್ರದಲ್ಲಿ ಕಡ್ಡಾಯವಾಗಿ ಪ್ರಿಂಟರ್ ಹೆಸರು, ವಿಳಾಸ ಹಾಗೂ ಸಂಖ್ಯೆ ನಮೂದಿಸತಕ್ಕದ್ದು ಎಂದರು.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸಿದ್ದು ಹುಳ್ಳೊಳ್ಳಿ ಚುನಾವಣಾ ವೇಳಾಪಟ್ಟಿ, ಮತದಾರರ ಸಂಖ್ಯೆ, ಎಂಟು ವಿಧಾನ ಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಬಗ್ಗೆ, ನಾಮಪತ್ರ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಮಾದರಿ ನೀತಿ ಸಂಹಿತೆ ಬಗ್ಗೆ ವಿವರಿಸಿದರು. ಚುನಾವಣಾ ಖರ್ಚವೆಚ್ಚದ ಬಗ್ಗೆ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿಗಳು ಮಾಹಿತಿ ನೀಡಿದರು.ಆಯುಧ ಪ್ರದರ್ಶನವಿಲ್ಲ
ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರನ್, ಜಿಲ್ಲೆಯಲ್ಲಿ ಸಮಾಜಘಾತುಕ ಹಾಗೂ ಧಕ್ಕೆ ತರುವಂತಹ ರೌಡಿ ಶೀಟರ್ ಗಳ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಎಂಟು ಜನರನ್ನು ಗಡಿಪಾರು ಮಾಡಲಾಗಿದೆ. ಆಯುಧ ಕಾಯ್ದೆಯಡಿ ವಿವಿಧ ರೀತಿಯಲ್ಲಿ ನಿಗಾ ವಹಿಸಲಾಗುತ್ತಿದೆ. ಯಾರೂ ಬಹಿರಂಗವಾಗಿ ಯಾವುದೇ ಆಯುಧ ಪ್ರದರ್ಶಿಸುವಂತಿಲ್ಲ. ರಾತ್ರಿ 10ರ ಬಳಿಕ ಪ್ರಚಾರ ಮಾಡತಕ್ಕದಲ್ಲ. ಪ್ರಚಾರಕ್ಕೆ ಡ್ರೋನ್ ಬಳಕೆಯಾಗುವ ಮುಂಚೆ ಕಡ್ಡಾಯವಾಗಿ ಪರವಾನಗಿ ಪಡೆಯತಕ್ಕದ್ದು ಎಂದು ತಿಳಿಸಿದರು.ಜಿಪಂ ಸಿಇಒ ಸ್ವರೂಪ ಟಿ.ಕೆ. ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪೊಲೀಸ್ ಉಪ ಆಯುಕ್ತರಾದ ರಾಜೀವ ಇದ್ದರು. ವಿವಿಧ ತಂಡಗಳ ನೋಡಲ್ ಅಧಿಕಾರಿಗಳಾದ ಸಿದ್ದಲಿಂಗಯ್ಯ ಹಿರೇಮಠ, ದೇವರಾಜ, ರುದ್ರೇಶ ಗಾಳಿ, ಶಾಲಂ ಹುಸೇನ್, ವಿನೋದ ಹೆಗ್ಗಳಗಿ, ಅಜೀಜ ದೇಸಾಯಿ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))