ಶಾಸಕರಿಂದ ರಾಜಕೀಯ ಪ್ರೇರಿತ ಆರೋಪ: ಕೆ.ಆರ್.ಕೆಂಪಾಚಾರಿ

| Published : Jul 11 2025, 11:48 PM IST

ಸಾರಾಂಶ

ಗೋಪಾಲಪುರ ಗ್ರಾಪಂ ಮಾಜಿ ಅಧ್ಯಕ್ಷರ ಪುತ್ರ ಮತ್ತು ಪಿಡಿಒ ಜೊತೆ ಸೇರಿ ಗ್ರಾಮದಲ್ಲಿ ಅಕ್ರಮವಾಗಿ ಲೇ-ಔಟ್ ನಿರ್ಮಾಣ ಮಾಡಿರುವುದಾಗಿ ದಿಶಾ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಆರೋಪ ಮಾಡಿರುವುದು ರಾಜಕೀಯ ಪ್ರೇರಿತ. ಲೇಔಟ್ ನಿರ್ಮಾಣಕ್ಕೆ ಮುಡಾ ಕಾನೂನಾತ್ಮಕ ಅಂಶಗಳನ್ನು ಪಾಲಿಸದೆ ನಿಯಮಬಾಹಿರವಾಗಿ ಅನುಮೋದನೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗೋಪಾಲಪುರ ಗ್ರಾಪಂ ಮಾಜಿ ಅಧ್ಯಕ್ಷರ ಪುತ್ರ ಮತ್ತು ಪಿಡಿಒ ಜೊತೆ ಸೇರಿ ಗ್ರಾಮದಲ್ಲಿ ಅಕ್ರಮವಾಗಿ ಲೇ-ಔಟ್ ನಿರ್ಮಾಣ ಮಾಡಿರುವುದಾಗಿ ದಿಶಾ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ಆರೋಪ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಗ್ರಾಪಂ ಉಪಾಧ್ಯಕ್ಷ ಕೆ.ಆರ್.ಕೆಂಪಾಚಾರಿ ಆರೋಪಿಸಿದರು.

ಶಾಸಕರ ಆರೋಪ ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಶ್ರೀವಜ್ರ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಬಡಾವಣೆ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಶಾಸಕರು ಕಾನೂನಾತ್ಮಕವಾಗಿ ಮುನ್ನಡೆಯಬೇಕು. ಜನಪ್ರತಿನಿಧಿಯಾಗಿ ಅಪಪ್ರಚಾರ ಮಾಡದಂತೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೇಔಟ್ ನಿರ್ಮಾಣಕ್ಕೆ ಮುಡಾ ಕಾನೂನಾತ್ಮಕ ಅಂಶಗಳನ್ನು ಪಾಲಿಸದೆ ನಿಯಮಬಾಹಿರವಾಗಿ ಅನುಮೋದನೆ ನೀಡಿದೆ. ರೈತರು, ಸಾರ್ವಜನಿಕರು ಬಳಸುತ್ತಿದ್ದ ಹಳ್ಳದ ಪ್ರದೇಶವನ್ನು ಮುಚ್ಚಿ ಮುಖ್ಯ ರಸ್ತೆಯನ್ನಾಗಿ ಮಾಡಿಕೊಂಡು ಅಕ್ರಮ ಮಾಡಿದ್ದರೂ ಸಹ ಮುಡಾ ಅಧಿಕಾರಿಗಳು ಒಪ್ಪಿಗೆ ನೀಡಿರುವುದರ ಹಿಂದೆ ಯಾವ ಕೈವಾಡವಿದೆ ಎನ್ನುವುದನ್ನು ಶಾಸಕರು ಬಹಿರಂಗಪಡಿಸುವಂತೆ ಒತ್ತಾಯಿಸಿದರು.

ಹಳ್ಳ ಮುಚ್ಚಿ ಅಕ್ರಮವಾಗಿ ರಸ್ತೆ ಮಾಡಿರುವ ಬಗ್ಗೆ ಚಿಕ್ಕಮಂಡ್ಯ ರೈತರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೆ, ಗ್ರಾಮ ಪಂಚಾಯ್ತಿಯು ಹೈಕೋರ್ಟ್‌ನಲ್ಲಿ ಅಕ್ರಮ ಬಡಾವಣೆ ವಿರುದ್ಧ ದಾವೆ ಹೂಡಿದೆ. ಅದೇ ರೀತಿ ಭಾನುಪ್ರಕಾಶ್ ಅವರು ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದಾರೆ. ಇಷ್ಟೆಲ್ಲಾ ಕಾನೂನು ಹೋರಾಟದ ನಡುವೆ ಶಾಸಕರು ಅಕ್ರಮ ಲೇ-ಔಟ್ ನಿರ್ಮಾಣಕಾರರ ಪರ ನಿಂತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ಅಕ್ರಮ ಬಡಾವಣೆ ಹೊರತುಪಡಿಸಿ ಇತರೆ ಪ್ರದೇಶದ ನಿವೇಶನದಾರರಿಗೆ ಖಾತೆ ಮಾಡಿಕೊಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ತಹಸೀಲ್ದಾರ್, ಜಿಪಂ ಸಿಇಒ ಅವರಿಗೆ ದೂರು ನೀಡಿದ್ದರೂ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಎಚ್.ಎಸ್.ಸವಿತಾ, ಎಸ್.ಡಿ.ಜಯರಾಮು, ಭಾನುಪ್ರಕಾಶ್, ಜಿ.ಶ್ರೀನಿವಾಸ್, ಶ್ರೀನಿವಾಸ್ ಇದ್ದರು.