ಕನ್ನಡಿಗರ ಹಿತ ಬಯಸಲು ರಾಜಕಾರಣಿಗಳು ಕಟಿಬದ್ಧರಲ್ಲ: ಡಾ.ಕೆ.ಆರ್.ದುರ್ಗಾದಾಸ್

| Published : Sep 30 2024, 01:27 AM IST

ಕನ್ನಡಿಗರ ಹಿತ ಬಯಸಲು ರಾಜಕಾರಣಿಗಳು ಕಟಿಬದ್ಧರಲ್ಲ: ಡಾ.ಕೆ.ಆರ್.ದುರ್ಗಾದಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತಿ ಡಾ.ಸರ್ಜಾಶಂಕರ್ ಹರಳೀಮಠ ರಚಿಸಿರುವ ಕನ್ನಡತನ ಕನ್ನಡ ಅಸ್ಮಿತೆ ಶತಮಾನದ ಚಿಂತನೆಗಳು ಕೃತಿಯನ್ನು ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ್ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ವಿಶ್ವ ವಿದ್ಯಾಲಯಗಳ ಮಟ್ಟದಲ್ಲೇ ಗುಣಮಟ್ಟದ ಸಂಶೋದನೆಯೇ ಅಪರೂಪವಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡದ ಬಗೆಗೆ ಕಾಳಜಿ ಹೊಂದಿರುವ ಮತ್ತು ಕೆಲಸ ಮಾಡುವ ಸಾಹಿತಿಗಳಿದ್ದಾರೆ ಎನ್ನುವುದೇ ಕನ್ನಡಿಗರಾದ ನಮ್ಮಲ್ಲಿ ಆಶಾಭಾವನೆ ಮೂಡಿಸಿದೆ ಎಂದು ಜಾನಪದ ವಿದ್ವಾಂಸರಾದ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್.ದುರ್ಗಾದಾಸ್ ಅಭಿಪ್ರಾಯಪಟ್ಟರು.

ಪಟ್ಟಣದ ಬಂಟರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ನಡೆದ ಸಮಾರಂಭದಲ್ಲಿ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಸರ್ಜಾಶಂಕರ್ ಹರಳೀಮಠ ರಚಿಸಿರುವ ಕನ್ನಡತನ ಕನ್ನಡ ಅಸ್ಮಿತೆ ಶತಮಾನದ ಚಿಂತನೆಗಳು ಕೃತಿ ಬಿಡುಗಡೆಗೊಳಿಸಿ, ಅಧಿಕಾರದ ಮುಖೇನ ವ್ಯಾಪಾರ ನಡೆಸುತ್ತಿರುವ ರಾಜಕಾರಣಿಗಳು ಕನ್ನಡ ಭಾಷೆ ಸೇರಿದಂತೆ ಕನ್ನಡಿಗರ ಹಿತ ಬಯಸಲು ಕಟಿಬದ್ಧರಾಗಿಲ್ಲ. ಕನ್ನಡ ಭಾಷೆಗೆ ಸಂಬಂಧಿಸಿದ ಡಾ.ಸರ್ಜಾಶಂಕರ್‍ರವರ ಅಪರೂಪದ ಈ ಮಹಾಪ್ರಬಂಧ ಯುವ ಸಂಶೋದಕರ ಬಗೆಗೆ ನಿರೀಕ್ಷೆ ಮೂಡಿಸುವಂತಿದೆ ಎಂದರು.

ವಾಸ್ತವತೆಗೆ ವಿರುದ್ಧವಾಗಿ ಸಾಹಿತ್ಯಿಕ ಮತ್ತು ಧಾರ್ಮಿಕವಾಗಿ ಯುವಕರ ಬದುಕನ್ನು ಬಲಿ ತೆಗೆದುಕೊಳ್ಳುವ ಬೆಳವಣಿಗೆ ನಡೆಯುತ್ತಿರುವುದು ಆತಂಕಕಾರಿ ಯಾಗಿದೆ. ರಾಮಾಯಣದಲ್ಲಿ ಶಬರಿ ತಿಂದ ಹಣ್ಣನ್ನು ರಾಮ ತಿನ್ನುವ ಸನ್ನಿವೇಶ ಆದರ್ಶವಾಗಿದೆ. ಆದರೆ ಅಯೋಧ್ಯೆಯಲ್ಲಿ ರಾಮನನ್ನು ಏಕಾಂಗಿಯಾಗಿ ಪ್ರತಿಷ್ಠಾಪಿಸಿರುವುದರ ಸಂದೇಶ ಏನು ಎಂದೂ ಮಾರ್ಮಿಕವಾಗಿ ನುಡಿದರು.

ಪುಸ್ತಕದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ.ಜೆ.ಕೆ.ರಮೇಶ್, ಈ ಕೃತಿಯ ವಸ್ತುವೇ ವೈಚಾರಿಕವಾಗಿದ್ದು ಅಮೂರ್ತವಾದ ವಿಷಯವನ್ನು ಯಾವುದೇ ಭಾವಾತಿರೇಕಕ್ಕೆ ಒಳಗಾಗದೇ ಲೇಖಕರು ಸಮಚಿತ್ತದಿಂದ ಬರೆದಿದ್ದಾರೆ. ಕೃತಿ ಪ್ರವೇಶವೇ ಅರ್ಥಪೂರ್ಣವಾಗಿದ್ದು ಕನ್ನಡದ ಅಸ್ಮಿತೆ ಯಾರ ಪ್ರಭಾವಕ್ಕೂ ಒಳಗಾಗಬಾರದು ಎಂಬುದು ಲೇಖಕರ ಕಳಕಳಿಯಾಗಿದೆ. ಕೃತಿಯೊಂದಿಗಿನ ಅನುಸಂಧಾನ ಕಷ್ಟವಾಗಿ ಕಾಣಬಹುದಾಗಿದ್ದರೂ ಇದರ ಆಶಯಗಳು ಚಿಂತನೆ ಮೂಡಿಸುವಂತಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಕರವೇ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಹೆಗ್ಡೆ, ಪಪಂ ಅಧ್ಯಕ್ಷ ರಹಮತ್‍ಉಲ್ಲಾ ಅಸಾದಿ ಹಾಗೂ ಲೇಖಕ ಡಾ. ಸರ್ಜಾಶಂಕರ್ ಹರಳೀಮಠ ವೇದಿಕೆಯಲ್ಲಿದ್ದರು. ಪತ್ರಕರ್ತ ಮೋಹನ್ ಶೆಟ್ಟಿ ಸ್ವಾಗತಿಸಿದರು. ಲೇಖಕ ಜಿ.ಕೆ.ಸತೀಶ್ ಹಾಗೂ ಗಾಯಿತ್ರಿ ಶೇಷಗಿರಿ ನಿರೂಪಿಸಿದರು.