ಕುಕನೂರು:ಜೋಳಿಗೆ ಹಾಕಿಕೊಂಡು ಸಮಾಜದ ಒಳಿತಿಗೆ ಬದುಕುವ ಸ್ವಾಮೀಜಿಗಳ ಗುಣ ರಾಜಕಾರಣಿಗಳಿಗಿಲ್ಲ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಗುದ್ನೇಪ್ಪನಮಠದ ಶ್ರಿನೀಲಗುಂದ ಗುದ್ನೇಶ್ವರ ಸ್ವಾಮಿ ಸೇವಾ ಸಮಿತಿಯಿಂದ ಜರುಗಿದ 16 ಜೋಡಿ ಧಾರ್ಮಿಕ ವಿವಾಹ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಾಮೂಹಿಕ ವಿವಾಹ ವಧು ವರರನ್ನು ಪಾವನ ಮಾಡುತ್ತವೆ.ಆರ್ಥಿಕ ಹೊರ ಸಾಮೂಹಿಕ ವಿವಾಹದಿಂದ ತಪ್ಪುತ್ತದೆ. ಅನೇಕ ಮಠಗಳು, ಸ್ವಾಮೀಜಿಗಳು ಜೋಳಿಗೆ ಹಾಕಿಕೊಂಡು ಸಾಮೂಹಿಕ ವಿವಾಹದಂತ ಸಾಮಾಜಿಕ ಕಾರ್ಯ ಮಾಡಿ ಜನರಿಗೆ ಒಳಿತು ಮಾಡುತ್ತಾರೆ.ಅದೇ ಕೋಟಿ ಕೋಟಿ ಒಡೆಯರಾಗಿರುವ ರಾಜಕಾರಣಿಗಳು ಇಂತಹ ಸಾಮೂಹಿಕ ವಿವಾಹ ಮಾಡಿಕೊಡಲು ಮುಂದಾಗುವುದಿಲ್ಲ.ರಾಜಕಾರಣಿಗಳಲ್ಲಿ ಸಮಾಜ ಸೇವೆ ಮಾಡುವ ತುಡಿತ ಬರಬೇಕು ಎಂದರು.

ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ನವ ದಂಪತಿಗಳು ಪರಸ್ಪರ ಅನ್ಯೋನತೆಯಿಂದ ಬಾಳಬೇಕು. ಧಾರ್ಮಿಕ ಕಾರ್ಯ ಮನುಷ್ಯನಿಗೆ ಬದುಕುವ ಶಕ್ತಿ ನೀಡುತ್ತವೆ ಎಂದರು.

ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮಾತನಾಡಿ, ಸಾಮೂಹಿಕ ವಿವಾಹ ಪುಣ್ಯದ ಕಾರ್ಯ.ಸಾಮೂಹಿಕ ವಿವಾಹದಲ್ಲಿ ಅನೇಕ ಗ್ರಾಮದ ಜನರು,ಹಲವಾರು ಸ್ವಾಮೀಜಿಗಳು ಆಶೀವರ್ದಿಸುತ್ತಾರೆ ಎಂದರು.

ಕುದರಿಮೋತಿಯ ಶ್ರೀವಿಜಯಮಹಾಂತ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಸತಿ, ಪತಿಗಳು ನಂಬಿಕೆಯಿಂದ ಬಾಳಬೇಕು. ಪರಸ್ಪರ ನಂಬಿಕೆ ಉಳಿಸಿಕೊಳ್ಳಬೇಕು. ನೈತಿಕ ಭಾವ ಇಲ್ಲದೆ ಭಕ್ತಿಯ ಭಾವ ಬಾರದು.ದೇವರು ಕೊಟ್ಟಿರುವ ಸಂಪತ್ತನ್ನು ಸತ್ಕಾರಕ್ಕೆ ಬಳಸಿಕೊಂಡು ಇನ್ನೊಬ್ಬರ ಬಾಳಿಕೆ ಬೆಳಕಾಗುವ ಕೆಲಸ ಮಾಡಬೇಕು ಎಂದರು.


ಯಲಬುರ್ಗಾ ಶ್ರೀಧರ ಮುರುಡಿ ಹಿರೇಮಠದ ಶ್ರೀ ಬಸವಲಿಂಗೇಶ್ವ ಶಿವಾಚಾರ್ಯರು ಮಾತನಾಡಿ, ಅತಿ ಆಸೆಯಿಂದ ಯಾರೂ ಹಾಳಾಗಬಾರದು. ಆಸೆಯೇ ದುಃಖಕ್ಕೆ ಮೂಲ ಎಂದರು.

ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ಗುದ್ನೇಶ್ವರ ಮಠದಲ್ಲಿ ಜಂಗಮ ಸಮಾಜದವರು ಇದ್ದು, ಈ ಜಂಗಮರು ಅನೇಕ ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದ್ದಾರೆ. ಆದರೆ ಇಲ್ಲಿಯ ಜಂಗಮರ ಮುಗ್ಧತೆಯ ದುರುಪಯೋಗ ಮಾಡಿಕೊಳ್ಳುವಂತ ಕಾರ್ಯ ನಮ್ಮವರೇ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಶ್ರೀಪ್ರಭುಲಿಂಗ ದೇವರು ಗಟ್ಟಿಯಾಗಿ ನಿಂತು ಗುದ್ನೇಶ್ವರ ಮಠ ಉಳಿಸಿಕೊಳ್ಳುತ್ತಿದ್ದಾರೆ ಎಂದರು.

ನೀಲಗುಂದ ಹಾಗೂ ಗುದ್ನೇಶ್ವರದ ಮಠದ ಶ್ರೀ ಪ್ರಭುಲಿಂಗ ದೇವರು ಮಾತನಾಡಿ,ಗುದ್ನೇಪ್ಪನಮಠದ ಜನರು ಒಗ್ಗಟ್ಟಾಗಿ ಪ್ರತಿ ವರ್ಷ ಮದುವೆ ಕಾರ್ಯ ಮಾಡುತ್ತಾರೆ.ಗುದ್ನೇಶ್ವರ ಮಹಿಮೆ ಅಪಾರ. ಇಲ್ಲಿಯ ಭಕ್ತರ ಸಹಕಾರ ಸಹ ಅನನ್ಯ ಎಂದರು.

ಹಿರೇಮಲ್ಲಮನಕೇರಿಯ ಶ್ರೀ ಚನ್ನಬಸವ ಸ್ವಾಮೀಜಿ, ಸಿದ್ಲಿಂಗಯಯ್ಯ ಹಿರೇಮಠ, ಸುರೇಶ ಬಳೂಟಗಿ, ಶಿವು ಕವಳಕೇರಿ, ಮುರುಘಯ್ಯ ಮಠದ, ಕೊಟ್ರಯ್ಯ ಕಟಗಿಮಠ, ಶರಣಯ್ಯ ಹುಣಸಿಮರದ, ಶಿವು ಗಲಬಿ, ಸಿದ್ಲಿಂಗಯ್ಯ ಬಂಡಿ, ರುದ್ರಯ್ಯ ಇನಾಮದಾರ, ವೀರಯ್ಯ ಬಂಡಿಮಠ, ಶರಣಯ್ಯ ಹಳೆಮನಿ, ರೇವಣಸಿದ್ದಯ್ಯ,ಅರುಣ ಪಾಟೀಲ, ಚನ್ನಬಸಯ್ಯ ಧೂಪದ ಇತರರಿದ್ದರು.