ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇಂದಿನ ರಾಜಕಾರಣಿಗಳು ತಮ್ಮ ಸುತ್ತ ಬೆಂಬಲಿಗರು, ಕಂಟ್ರಾಕ್ಟರ್‌ಗಳನ್ನು ಸ್ನೇಹಿತರನ್ನಾಗಿಸಿಕೊಂಡು ಓಡಾಡುವ ಬದಲು ಸಾಹಿತಿಗಳನ್ನು ಸ್ನೇಹಿತರನ್ನಾಗಿಸಿಕೊಳ್ಳುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್.ಎಲ್.ಮುಕುಂದರಾಜ್ ಸಲಹೆ ನೀಡಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾಡಳಿತ, ಕೆ.ವಿ.ಶಂಕರಗೌಡ ಅಧ್ಯಯನ ಪೀಠ, ಕರ್ನಾಟಕ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕೆ.ವಿ.ಶಂಕರಗೌಡ-೧೦೯ ಒಂದು ದಿನದ ನೆನಪು ವಿಚಾರ ಸಂಕಿರಣ ಹಾಗೂ ಮತ್ತೆ ಮತ್ತೆ ಕೆ.ವಿ.ಶಂಕರಗೌಡ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜಕಾರಣಿ ಸತ್ತ ಮೇಲೆ ಈಗ ನಿಮ್ಮ ಸುತ್ತ ಸುತ್ತಾಡುತ್ತಿರುವವರು ಯಾರೂ ಬರುವುದಿಲ್ಲ. ಸತ್ತ ಮೇಲೂ ರಾಜಕಾರಣಿಯನ್ನು ಜೀವಂತವಾಗಿಡುವವನು ಸಾಹಿತಿ ಮಾತ್ರ. ಅದಕ್ಕಾಗಿ ಸಾಹಿತಿಗಳ ಸ್ನೇಹ-ಸಂಪರ್ಕದಲ್ಲಿರಬೇಕು. ಪಂಪನ ಗೆಳೆತನದಲ್ಲಿದ್ದ ಕಾರಣದಿಂದಲೇ ಅರಿಕೇಸರಿ ಹೆಸರು ಇಂದಿಗೂ ಜೀವಂತವಾಗಿದೆ. ಕಾಳಿದಾಸನ ಸ್ನೇಹದಿಂದ ಭೋಜರಾಜನ ಹೆಸರು ಇತಿಹಾಸ ಸೇರಿತು. ರನ್ನನ ಗೆಳೆತನದಿಂದ ಅತ್ತಿಮಬ್ಬೆ ನೀಡಿದ ಕೊಡುಗೆ, ಆಕೆ ಹೆಸರು ಉಳಿಯಿತು. ಅದಕ್ಕಾಗಿ ರಾಜಕಾರಣಿಗಳಿಗೆ ಸಾಹಿತಿಗಳಾದವರ ಸಂಪರ್ಕ ಅವಶ್ಯ ಎಂದರು.ಕೆ.ವಿ.ಶಂಕರಗೌಡ ರಾಜಕಾರಣಿಯಾಗಿದ್ದರ ಜೊತೆಗೆ ಸಾಹಿತಿ, ರಂಗಕರ್ಮಿಯಾಗಿ ಸಾಂಸ್ಕೃತಿಕ ಚಹರೆ, ವ್ಯಕ್ತಿತ್ವವನ್ನು ಹೊಂದಿದ್ದರು. ರಾಜಕಾರಣಿಗಳಿಗೆ ಸಾಂಸ್ಕೃತಿಕ ಚಹರೆಯನ್ನು ತುಂಬಲು ಕೆ.ವಿ.ಶಂಕರಗೌಡರು ಮಾದರಿಯಾಗಿದ್ದಾರೆ. ಶಾಂತವೇರಿ ಗೋಪಾಲಗೌಡರು ಹೋರಾಟಗಾರರಾಗಿದ್ದರೂ ಸಹ ಅನೇಕ ಲೇಖಕರು ಅವರ ಮೇಲೆ ಕತೆ, ಕಾದಂಬರಿ, ಕವಿತೆಯನ್ನು ಬರೆದಿದ್ದಾರೆ ಎಂದು ನುಡಿದರು.
ಇಂದಿನ ರಾಜಕಾರಣಿಗಳಲ್ಲಿ ಸಾಂಸ್ಕೃತಿಕ ವ್ಯಕ್ತಿತ್ವವಿರುವವರ ಸಂಖ್ಯೆ ವಿರಳಾತಿವಿರಳವಾಗಿದೆ. ಸಾಂಸ್ಕೃತಿಕ ಚಹರೆ ಅವರಲ್ಲಿ ಮೂಡಬೇಕಾದರೆ ಸಾಹಿತಿಗಳು, ಕವಿಗಳು, ಲೇಖಕರು, ಕಾದಂಬರಿಕಾರರ ಸ್ನೇಹ ಅವಶ್ಯವಾಗಿದೆ. ಇದರಿಂದ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ರಾಜಕಾರಣಿಗಳಿಗೆ ಆಸಕ್ತಿ ಬೆಳೆಯಲು, ಆ ಕ್ಷೇತ್ರಕ್ಕೆ ಏನಾದರೊಂದು ಕೊಡುಗೆ ನೀಡುವುದಕ್ಕೆ ಸಾಧ್ಯವಾಗಲಿದೆ ಎಂದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕೆ.ವಿ.ಶಂಕರಗೌಡರು ಆಧುನಿಕ ಮಂಡ್ಯದ ಶಿಲ್ಪಿ ಮತ್ತು ಮಂಡ್ಯದ ಮಾಣಿಕ್ಯ ಎಂದರೆ ತಪ್ಪಾಗಲಾರದು. ರಾಜಕಾರಣಿಯಾಗಿದ್ದರೂ ನಿಸ್ವಾರ್ಥ ಸೇವಕ, ಸಾಮಾಜಿಕ ಚಿಂತಕರಾಗಿದ್ದರು. ಅವರನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಅವರಂತೆಯೇ ಕೆಲಸ ಮಾಡುವುದಕ್ಕೆ ಇತರರನ್ನು ಪ್ರೇರೇಪಿಸಬೇಕು ಎಂದರು.
ರೈತರ ಮಗನಾಗಿ ಹುಟ್ಟಿ ರೈತಾಪಿ ವರ್ಗದವರಿಗೆ ಅನೇಕ ಕಾರ್ಯಕ್ರಮಗಳನ್ನು ತಂದು ರೈತರ ದನಿಯಾಗಿ ನಿಂತವರು. ಜೊತೆಗೆ ಕಲೆಯ ಬಗ್ಗೆ ಅಪಾರವಾದ ಪ್ರೇಮವನ್ನು ಇಟ್ಟುಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿದವರು. ಈಗಿನ ಮಕ್ಕಳಿಗೆ, ಯುವಕರಿಗೆ ಶಂಕರಗೌಡರ ಜೀವನಚರಿತ್ರೆ, ಸಾಧನೆಗಳನ್ನು ತಿಳಿಸಿಕೊಡುವ ಅಗತ್ಯವಿದೆ. ಶಂಕರಗೌಡರ ಕನಸುಗಳು, ಚಿಂತನೆಗಳನ್ನು ಯುವ ಮನಸ್ಸುಗಳಲ್ಲಿ ಹುಟ್ಟಿಹಾಕಿ ಅವುಗಳು ಸಾಕಾರಗೊಳ್ಳುವುದಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ನಾಡು ಕಂಡ ಅಪರೂಪದ ರಾಜಕಾರಣಿ, ನಿತ್ಯ ಸಚಿವ ಎಂದೇ ಕುವೆಂಪು ಅವರಿಂದ ಕರೆಸಿಕೊಂಡ ಕೆ.ವಿ.ಶಂಕರಗೌಡರು ಎಲ್ಲರಿಗೂ ಆದರ್ಶಪ್ರಾಯರಾಗಿ ಉಳಿದಿದ್ದಾರೆ ಎಂದು ಬಣ್ಣಿಸಿದರು.ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಕೆ.ವಿ.ಶಂಕರಗೌಡರು ಸಾಂಸ್ಕೃತಿಕ, ರಾಜಕೀಯ, ಅಭಿವೃದ್ಧಿ ದೃಷ್ಟಿಯಿಂದಲೂ ಮಾರ್ಗದರ್ಶನ ನೀಡಿದ್ದಾರೆ. ಅವರ ಹಾದಿಯಲ್ಲೇ ಎಲ್ಲರೂ ಸಾಗಿದಾಗ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಶ್ರೀಮಂತಗೊಳಿಸಬಹುದು. ಅಭಿವೃದ್ಧಿಗೆ ಹೊಸ ರೂಪ ನೀಡಬಹುದು ಎಂದು ಹೇಳಿದರು.
ಸಾಹಿತ ಡಾ.ರಾ.ಗೌ ಆಶಯ ನುಡಿಗಳನ್ನಾಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಎಚ್.ಆರ್.ಸುಜಾತ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಇತರರಿದ್ದರು.