ಸಾರಾಂಶ
ತೀರ್ಥಹಳ್ಳಿ: ರಾಜಕಾರಣಿಯಾದವನು ಯಾವುದೇ ಫಲಾಪೇಕ್ಷೆ ಇಲ್ಲದೆ ಜನಪರವಾಗಿ ಜನಸೇವೆ ಮಾಡುವ ಬದ್ಧತೆಯನ್ನು ಹೊಂದಿರಬೇಕು. ಈ ರಾಜ್ಯ ಕಂಡಿರುವ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರು ಇಂದಿನ ರಾಜಕಾರಣಿಗಳಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಹಿರಿಯ ರಾಜಕಾರಣಿ, ಮಾಜಿ ಶಾಸಕ ಡಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತುಂಗಾ ಮಹಾವಿದ್ಯಾಲಯ ಮತ್ತು ಹಾರೋಗುಳಿಗೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗಾಂಧಿ ತತ್ವ ಪ್ರಣೀತ ರಾಜ್ಯ ಮಟ್ಟದ ಯುವಜನ ಶಿಬಿರ ಮತ್ತು ಮಾಜಿ ಮುಖ್ಯಮಂತ್ರಿ ದಿ.ಕಡಿದಾಳು ಮಂಜಪ್ಪ ಸಂಸ್ಮರಣೆಯ ಅಂಗವಾಗಿ ತಾಲೂಕಿನ ಹಾರೋಗುಳಿಗೆಯಲ್ಲಿರುವ ಕಡಿದಾಳು ಮಂಜಪ್ಪ ಸಭಾಭವನದಲ್ಲಿ ಭಾನುವಾರ ಸಂಜೆ ಆರಂಭಗೊಂಡ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕುರ್ಚಿಯ ಸಲುವಾಗಿ ದೇಶದ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಅತ್ಯಂತ ಆತಂಕಕಾರಿಯಾಗಿದೆ. ಶುದ್ಧ ರಾಜಕಾರಣದ ದೃಷ್ಟಿಯಿಂದ ಮತದಾರರು ಪಕ್ಷ, ಪಾರ್ಟಿ ಎಣಿಸದೇ ಶುದ್ಧ ಹಸ್ತರನ್ನು ಚುನಾಯಿಸುವ ಅನಿವಾರ್ಯತೆ ಇದೆ ಎಂದರು.
ಕಡಿದಾಳು ಮಂಜಪ್ಪನವರು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ಪಡೆಯಬಹುದಾಗಿದ್ದ ಒಂದು ಎಕರೆ ಭೂಮಿಯನ್ನು ತಿರಸ್ಕರಿಸಿದವರು. ಇಂತಹಾ ಮೌಲ್ಯಾಧಾರಿತ ವ್ಯಕ್ತಿಗಳ ಹಾದಿಯಲ್ಲಿ ಯುವ ಜನತೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕಿದೆ ಎಂದು ಹೇಳಿದರು.ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ವಿದ್ಯಾವಂತರಿಂದಾಗಿಯೇ ಇಂದಿನ ಸಮಾಜ ಕಲುಷಿತಗೊಳ್ಳುತ್ತಿದ್ದು, ಶಿಕ್ಷಣ ಪಡೆದವರಿಗಿಂತ ಅನಕ್ಷರಸ್ಥರೇ ಮೇಲು ಎಂದ ಅವರು, ಕಡಿದಾಳರು ಈ ನಾಡಿನ ಆಸ್ತಿಯಂತಿದ್ದು, ಅವರ ತ್ಯಾಗದಲ್ಲಿ ಮನಸ್ಸನ್ನು ಬದಲಿಸುವ ಶಕ್ತಿಯೂ ಇದೆ ಎಂದರು.ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮನುಕುಲ ಇರುವವರೆಗೂ ಮಹಾತ್ಮಗಾಂಧಿ ಪ್ರಸ್ತುತರಾಗಿರುತ್ತಾರೆ. ಶ್ರಮಜೀವಿಗಳನ್ನು ತಮ್ಮ ಹೃದಯದಿಂದ ನೋಡುತ್ತಿದ್ದ ಕಡಿದಾಳರು ಕೂಡಾ ಜೀತದಾಳುಗಳು, ಭೂ ಮಾಲೀಕರಾಗಬೇಕೆಂಬ ಕನಸು ಕಂಡವರಲ್ಲಿ ಮೊದಲಿಗರಾಗಿದ್ದರು. ಅಂತವರ ಸ್ಮರಣೆಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಯುವ ಜನತೆ ಅದೃಷ್ಟವಂತರಾಗಿದ್ದು, ದೇಶ ಕಟ್ಟುವ ಕಾಯಕದಲ್ಲಿ ಸ್ಫೂರ್ತಿಯಿಂದ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.ವೇದಿಕೆಯಲ್ಲಿ ನಾಡೋಜ ಡಾ.ವೂಡೇ ಪಿ ಕೃಷ್ಣ, ಪ್ರೊ.ಜೆ.ಎಲ್ ಪದ್ಮನಾಭ, ಪ್ರೊ.ಜಿ.ಬಿ.ಶಿವರಾಜ್, ಡಾ.ಆರ್.ಕುಮಾರಸ್ವಾಮಿ, ಪಿ.ವಿ.ಮಹಾಬಲೇಶ್, ಹಾರೋಗುಳಿಗೆ ಗ್ರಾಪಂ ಅಧ್ಯಕ್ಷೆ ಭಾರತಿ ಮೌನೇಶ್, ಕಡಿದಾಳು ಮಂಜಪ್ಪ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.