ರಾಜಕಾರಣ ಸಾಹಿತ್ಯ ಒಂದಕ್ಕೊಂದು ಪೂರಕಃ ಹಿರಿಯ ರಾಜಕಾರಿಣಿ ಬಿ.ಎಲ್.ಶಂಕರ್

| Published : Mar 09 2025, 01:50 AM IST

ರಾಜಕಾರಣ ಸಾಹಿತ್ಯ ಒಂದಕ್ಕೊಂದು ಪೂರಕಃ ಹಿರಿಯ ರಾಜಕಾರಿಣಿ ಬಿ.ಎಲ್.ಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿರುತ್ತದೆ ಎಂದು ಚಿಕ್ಕಮಗಳೂರು ಹಿರಿಯ ರಾಜಕಾರಿಣಿ ಬಿ.ಎಲ್.ಶಂಕರ್ ಹೇಳಿದ್ದಾರೆ.

20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣ ಸಾಹಿತ್ಯ -ಗೋಷ್ಠಿ

ಕನ್ನಡಪ್ರಭ ವಾರ್ತೆ ತರೀಕೆರೆ, (ಶ್ರೀಮತಿ ಎಂ.ಕೆ.ಇಂದಿರಾ ವೇದಿಕೆ)

ರಾಜಕಾರಣ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿರುತ್ತದೆ ಎಂದು ಚಿಕ್ಕಮಗಳೂರು ಹಿರಿಯ ರಾಜಕಾರಿಣಿ ಬಿ.ಎಲ್.ಶಂಕರ್ ಹೇಳಿದ್ದಾರೆ.ಶನಿವಾರ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿರುವ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣ ಸಾಹಿತ್ಯ ಗೋಷ್ಠಿ-4ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪ್ರತಿನಿಧಿಗಳನ್ನು ತಿದ್ದುವ ಕಾರ್ಯವನ್ನು ಸಾಹಿತ್ಯ ಮಾಡಿದೆ. ರಾಜಕಾರಣ ಮತ್ತು ಸಾಹಿತ್ಯ, ಸಾಹಿತ್ಯ ವಲಯದ ಅಭಿವ್ಯಕ್ತಿಗಳು ಈ ದೇಶದ ರೂಪು ರೇಖೆಗಳನ್ನು ನಿರ್ವಹಿಸಿದೆ, ರಾಜಕಾರಣ ಎಂದರೆ ಪಕ್ಷಗಳಿಗೆ ಸೀಮಿತ ಅಲ್ಲ, ಜನಸಾಮಾನ್ಯರ ಬದುಕು ಹೇಗೆ ನಡೆಯಬೇಕು. ಅಸಮಾನತೆಗಳು ಹೋಗಬೇಕು, ಮನುಷ್ಯ ಮನುಷ್ಯನಾಗಿ ಬದುಕುತ್ತಾ ಎಲ್ಲರನ್ನೂ ವಿಶಾಲಾರ್ಥದಿಂದ ನೋಡಬೇಕು ಎಂದರು.

ಸ್ವಾತಂತ್ರ್ಯ ಪೂರ್ವ ಮತ್ತು ಅನಂತರ ಅನೇಕ ಚಳುವಳಿಗಳು ನಡೆದಿವೆ. ತ್ರಿದ.ರಾ.ಬೇಂದ್ರೆ ಅವರು ಒಂದೇ ಒಂದು ಕರ್ನಾಟಕ ಎಂದು ಹೇಳಿದ್ದಾರ. ಕುವೆಂಪು ಅವರು ನಿರ್ಣಾಯಕ ನಿಲುವು ತೆಗೆದುಕೊಳ್ಳುತ್ತಿದ್ದರು, ಸಾಮಾಜಿಕ ನ್ಯಾಯವನ್ನು ತಮ್ಮ ಕವಿತೆಗಳಲ್ಲಿ ಹೇಳಿರುವ ಕುವೆಂಪು ಅವರಿಗೆ ಸಾಹಿತ್ಯ ರಚನೆಯಲ್ಲಿ ಬದ್ಧತೆ ಇತ್ತು. ವಿಶ್ವಮಾನವತೆಯನ್ನು ಕುವೆಂಪು ಸಾರಿದ್ದರು.

ರಾಜಕಾರಣ ಮತ್ತು ಸಾಹಿತ್ಯ ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮೂಡಿಬಂತು, ವಿನೋಬಾ ಬಾವೆ 70 ಸಾವಿರ ಕಿ.ಮಿ. ಪಾದಯಾತ್ರೆ ಮಾಡಿದರೆ, ಮಾಜಿ ಪ್ರಧಾನ ಮಂತ್ರಿ ನೆಹರು ಶ್ರೇಷ್ಠ ಕೃತಿಗಳನ್ನು ರಚಿಸಿದರು, ವಾಜಪೇಯಿ ಅವರ ಕವಿ ಹೃದಯದವರು ಎಂದು ತಿಳಿದಿದರು.ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಎಲ್ಲರ ಸಹಕಾರದಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಡೆದಿದೆ, ಒಳ್ಳೆಯ ಕಾರ್ಯಕ್ರಮಗಳು ಸಂತೋಷ ತಂದಿದೆ. ರಾಜಕಾರಣ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧ ಹೊಂದಿದೆ. ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ 16ನೇ ಆಯವ್ಯಯ ಮಂಡಿಸುವ ಸಂದರ್ಭದಲ್ಲಿ ಅನೇಕ ವಚನಗಳನ್ನು ಪ್ರಸ್ತಾಪಿಸಿದ್ದಾರೆ. ಸಾಹಿತಿಗಳ ಜೊತೆ ಚರ್ಚಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮನ್ವಯತೆ ಸಾಧಿಸಿದೆ ಎಂದು ಹೇಳಿದರು.

ಚಿಕ್ಕಮಗಳೂರು ಸಂಸ್ಕೃತಿ ಚಿಂತಕ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಸಾಹಿತ್ಯ ಎಂದರೆ ಆಡುವ ಮಾತು, ರಾಗ ಇತ್ಯಾದಿಗಳು ಮನಸ್ಸಿಗೆ ಹಿತವಾಗುತ್ತದೆ ಅದೇ ಸಾಹಿತ್ಯ, ಮನಸ್ಸಿಗೆ ಮುದ ನೀಡುವ ಕಾರ್ಯವೇ ಸಾಹಿತ್ಯ ಎಂದು ಹೇಳಿದರು.

ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಕುಮಾರವ್ಯಾಸ ಭಾರತ-ಪ್ರಸ್ತುತ ರಾಜಕಾರಣ ವಿಷಯ ಕುರಿತು ಮಾತನಾಡಿ, ಸಾಹಿತ್ಯದ ಪಾಠವನ್ನು ರಾಜಕಾರಿಣಿಗಳಿಗೆ ಹೇಳಿಕೊಡಬೇಕಿತ್ತು. ಐವತ್ತು ವರ್ಷಗಳ ಹಿಂದೆಯೇ ನನಗೆ ಅಲೋಚನೆ ಬಂದಿತ್ತು. ಸಾಹಿತ್ಯ ರಾಜಕಾರಿಣಿಗೆ ಅವಶ್ಯಕ, ರಾಜಕಾರಿಣಿಗಳು ಸಾಹಿತ್ಯ ಓದಿಕೊಳ್ಳಬೇಕು, ಕವಿಹೃದಯದ ರಾಜ ಕಾರಿಣಿಗಳು ಅಗತ್ಯ. ಕುವೆಂಪು ಅವರು ಕವಿ ಕುಮಾರವ್ಯಾಸರನ್ನು ಅನೇಕ ಗ್ರಂಥಗಳಲ್ಲಿ ಉದಾಹರಿಸಿದ್ದಾರೆ. ಕುಮಾರ ವ್ಯಾಸರು ಈವತ್ತಿನ ರಾಜಕಾರಣಕ್ಕೂ ಪ್ರಸ್ತುತ. ಕುಮಾರವ್ಯಾಸ ಅದ್ಭುತ ಕವಿ. ಅವರು ಜನರ ಮಧ್ಯ ಇರುವ ಕವಿ ಎಂದು ಹೇಳಿದರು.

ಚಿತ್ರದುರ್ಗ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ , ಕಡೂರು ಬಂಡಾರಿ ಶ್ರೀನಿವಾಸ್, ಸಮ್ಮೇಳನಾಧ್ಯಕ್ಷ ಡಾ.ಎಚ್.ಎಂ.ಮರುಳಸಿದ್ದಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾ.ಕಸಾಪ ಅಧ್ಯಕ್ಷ ರವಿ ದಳವಾಯಿ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಪುರಸಭೆ ಸದಸ್ಯರಾದ ಟಿ.ಜಿ.ಶಶಾಂಕ, ಟಿ.ದಾದಾಪೀರ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ , ಇಮ್ರಾನ್ ಅಹಮದ್ ಬೇಗ್, ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

8ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ರಾಜಕಾರಣ ಸಾಹಿತ್ಯ ಗೋಷ್ಠಿ-4ರಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಂ.ಮರುಳಸಿದ್ದಯ್ಯ ಪಟೇಲ್, ಚಿಕ್ಕಮಗಳೂರು ಹಿರಿಯ ರಾಜಕಾರಿಣಿ ಬಿ.ಎಲ್.ಶಂಕರ್, ಶಾಸಕ ಜಿ.ಎಚ್.ಶ್ರೀನಿವಾಸ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು. ಫಾರೂಕ್ ಮತ್ತಿತರರು ಇದ್ದರು.