ಸಾರಾಂಶ
ಬೆಳಗಾವಿ : ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು, ರಾಜ್ಯದ ಜನತೆಯ ಗಮನ ಬೇರೆಡೆಗೆ ಸೆಳೆಯಲು ಯಡಿಯೂರಪ್ಪ ವಿರುದ್ಧ ದ್ವೇಷದ ರಾಜಕೀಯ ಮಾಡಲಾಗುತ್ತಿದೆ ಎಂದು ಬೆಳಗಾವಿ ನೂತನ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಬಿಜೆಪಿ ಹೋರಾಟ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನವರು ಹತಾಶೆಯಿಂದ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಯಡಿಯೂರಪ್ಪ ಅವರ ದೂರಿಗೆ ಸಂಬಂಧಿಸಿದಂತೆ ಸರ್ಕಾರದ ನಡೆ ಅನುಮಾನದಿಂದ ಕೂಡಿದೆ.
ಮಾರ್ಚ್ 14 ರಂದು ಪೋಕ್ಸೋ ದೂರು ದಾಖಲಾಯಿತು. ಆ ಮಹಿಳೆ ಆರೋಪ ಮಾಡಿದ್ದು ಫೆ.02 ರಂದು. ಈ ಪ್ರಕರಣ ಸಂಬಂಧ ಏ.12 ರಂದು ಯಡಿಯೂರಪ್ಪ ಸಿಐಡಿ ಮುಂದೆ ಹಾಜರಾಗಿ ವಿವರಣೆ ಕೊಟ್ಟಿದ್ದಾರೆ. ಆದರೆ, ಈಗ ಅವರ ವಿರುದ್ಧ ಅರೆಸ್ಟ್ ವಾರಂಟ್ ಕೊಟ್ಟಿದ್ದಾರೆ. ಈ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯ ದ್ವೇಷದಿಂದ ನೋಡುತ್ತಿದೆ ಎಂದು ದೂರಿದರು.
ಯಡಿಯೂರಪ್ಪ ವಿರುದ್ಧ ಪೋಕ್ಸೋ ದೂರು ನೀಡಿದ್ದ ಮಹಿಳೆ ಮೃತಪಟ್ಟಿದ್ದಾಳೆ. ಆದರೆ, ಎರಡು ದಿನದಲ್ಲೇ ಈ ಪ್ರಕರಣ ತೀವ್ರಗತಿ ಪಡೆದಿರುವುದನ್ನು ನೋಡಿದರೇ ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. 53 ಜನರ ವಿರುದ್ಧ ಆ ಮಹಿಳೆ ಇದೇ ಥರದ ದೂರು ಕೊಟ್ಟಿರುವ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಆಕೆ ಮಾನಸಿಕ ಅಸ್ವಸ್ಥೆ ಅಂತಿದ್ದಾರೆ ಅಂತ ಆರೋಪ ಮಾಡಿದ್ದರು. ಈ ಕೇಸ್‌ಗೆ ಮಹತ್ವ ಇಲ್ಲವೆಂದೂ ಹೇಳಿದ್ದರು. ಗೃಹ ಸಚಿವರ ಅಂದಿನ ಹೇಳಿಕೆಗೂ ಇಂದಿನ ಹೇಳಿಕೆಗೂ ವ್ಯತ್ಯಾಸ ಇದೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯ ಸರ್ಕಾರ ರಾಜಕೀಯ ಷಡ್ಯಂತ್ರ ಮಾಡುತ್ತಿದೆ. ಬಿ.ರಿಪೋರ್ಟ್ ಹಾಕುವ ಕೇಸ್‌ನಲ್ಲಿ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಸರ್ಕಾರದ ನಡೆ ಅನುಮಾನಕ್ಕೆ ಕಾರಣವಾಗಿದೆ. ಇದು ರಾಜಕೀಯ ಪ್ರೇರಿತವಾಗಿದೆ.
-ಜಗದೀಶ ಶೆಟ್ಟರ, ನೂತನ ಸಂಸದ.