ಸಾರಾಂಶ
ಅಂಜನಾದ್ರಿ ಅಭಿವೃದ್ಧಿ ಕುರಿತು ಶಾಸಕ ಗಾಲಿ ಜನಾರ್ದನ ರೆಡ್ಡಿ ಏನು ಹೇಳಿದ್ದಾರೆಂದು ನನಗೆ ಮಾಹಿತಿ ಇಲ್ಲ. ಹೀಗಾಗಿ ಅದಕ್ಕೆ ಉತ್ತರಿಸಲ್ಲ. ಆದರೆ, ಅಂಜನಾದ್ರಿ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ. ಕೇಬಲ್ ಕಾರ್ ಅಳವಡಿಸುವುದು ಸೇರಿದಂತೆ ವಿವಿಧ ಯೋಜನೆ ಒಳಗೊಂಡಿದ್ದು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಜಾರಿಗೊಳಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಕೊಪ್ಪಳ:
ಧರ್ಮಸ್ಥಳದ ಬಗ್ಗೆ ನಡೆದಿರುವ ಷಡ್ಯಂತ್ರದ ವಿರುದ್ಧ ಧರ್ಮಸ್ಥಳದಲ್ಲಿಯೇ ಬಿಜೆಪಿ ಮತ್ತು ಜೆಡಿಎಸ್ ಸಮಾವೇಶ ಮಾಡಿರುವುದಕ್ಕೆ ಸಚಿವ ಎಚ್.ಕೆ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಮಾಡುವುದು ಪಾಪದ ಕೆಲಸ ಎಂದು ಕುಟುಕಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಂದಿಗೂ ಇಂಥ ಪಾಪದ ಕೆಲಸ ಮಾಡುವುದಿಲ್ಲ. ಎಸ್‌ಐಟಿ ರಚಿಸಿದ್ದು ಧರ್ಮಸ್ಥಳದ ವಿರುದ್ಧ ಎಂದವರು ಮೊದಲು ಸ್ವಾಗತಿಸಿದ್ದು ಏಕೆ ? ಎಂದು ಪ್ರಶ್ನಿಸಿದರು.
ಧರ್ಮಸ್ಥಳದ ಬಗ್ಗೆ ಆರೋಪಿಸಿದ್ದು ಯಾರು ಎಂದು ಪ್ರಶ್ನಿಸಿದ ಅವರು, ಈ ಮೂಲವನ್ನು ನೀವ್ಯಾಕೆ ಕೆದಕುವುದಿಲ್ಲ ಎಂದು ಮಾಧ್ಯಮಗಳಿಗೆ ಮರು ಪ್ರಶ್ನಿಸಿದರು. ಆಗ ಯಾರು ಎಂದು ಸುದ್ದಿಗಾರರು ಪ್ರಶ್ನಿಸಿದರೆ ನಿಮಗೆ ಗೊತ್ತಿಲ್ಲವೇ ಎಂದು ಮರುಪ್ರಶ್ನಿಸುತ್ತಲೇ, ಗಿರೀಶ ಮಟ್ಟಣವರ ಹೆಸರು ಹೇಳದೆಯೇ ಕಟುವಾಗಿ ಟೀಕಿಸಿದರು. ಇವರು ಯಾವ ಪಕ್ಷದಲ್ಲಿದ್ದರು ಎಂದರು.ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಕರೆಸಿರುವ ಪ್ರಶ್ನೆಗೆ, ಈ ಹಿಂದೆ ಅಲ್ಪಸಂಖ್ಯಾತರನ್ನು ಉದ್ಘಾಟನೆಗೆ ಕರೆಸಿಲ್ಲವೇ? ಈಗೇಕೆ ಈ ಪ್ರಶ್ನೆ ಬಂದಿದೆ ಎಂದ ಅವರು, ಈ ಹಿಂದೇ ರಾಜರೇ ಮಿರ್ಜಾ ಇಸ್ಮಾಯಿಲ್ ಅವರನ್ನು ಕರೆಸಿದ್ದು ಗೊತ್ತಿಲ್ಲವೇ? ಜನರ ಭಾವನೆಯೊಂದಿಗೆ ಆಟವಾಡಿ, ಸಮಾಜದ ಶಾಂತಿ ಕದಡುವ ಕಾರ್ಯ ಮಾಡಬಾರದು. ಮೈಸೂರು ದಸರಾ ಸಾಂಸ್ಕೃತಿಕ ಉತ್ಸವ. ನಾಡ ಉತ್ಸವವಾಗಿದೆ. ಹೀಗಿರುವಾಗ ಅದನ್ನು ತಪ್ಪಾಗಿ ಅರ್ಥೈಸುವ ಕಾರ್ಯ ಮಾಡಬಾರದು ಎಂದರು.
ಅಂಜನಾದ್ರಿ ಅಭಿವೃದ್ಧಿ ಕುರಿತು ಶಾಸಕ ಗಾಲಿ ಜನಾರ್ದನ ರೆಡ್ಡಿ ಏನು ಹೇಳಿದ್ದಾರೆಂದು ನನಗೆ ಮಾಹಿತಿ ಇಲ್ಲ. ಹೀಗಾಗಿ ಅದಕ್ಕೆ ಉತ್ತರಿಸಲ್ಲ. ಆದರೆ, ಅಂಜನಾದ್ರಿ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದೆ. ಕೇಬಲ್ ಕಾರ್ ಅಳವಡಿಸುವುದು ಸೇರಿದಂತೆ ವಿವಿಧ ಯೋಜನೆ ಒಳಗೊಂಡಿದ್ದು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.