ಒಳಮೀಸಲಾತಿ ಜಾರಿ ವಿಷಯದಲ್ಲಿ ರಾಜಕಾರಣ: ನಾಗರಾಜ ಮೇಲಿನಮನಿ

| Published : Dec 15 2024, 02:02 AM IST

ಸಾರಾಂಶ

ನ್ಯಾ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ವತಿಯಿಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತದಿಂದ ಶಾಸಕರ ಕಾರ್ಯಾಲಯದವರೆಗೆ ತಮಟೆ ಚಳವಳಿ ನಡೆಸಿ ಶಾಸಕ ದೊಡ್ಡನಗೌಡ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.

ಮಾದಿಗ ಸಮಾಜದ ತಾಲೂಕಾಧ್ಯಕ್ಷ ಆರೋಪ

ಕನ್ನಡಪ್ರಭ ವಾರ್ತೆ ಕುಷ್ಟಗಿ

ನ್ಯಾ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ವತಿಯಿಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತದಿಂದ ಶಾಸಕರ ಕಾರ್ಯಾಲಯದವರೆಗೆ ತಮಟೆ ಚಳವಳಿ ನಡೆಸಿ ಶಾಸಕ ದೊಡ್ಡನಗೌಡ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.

ಮಾದಿಗ ಸಮಾಜದ ತಾಲೂಕಾಧ್ಯಕ್ಷ ನಾಗರಾಜ ಮೇಲಿನಮನಿ ಮಾತನಾಡಿ, ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ನಮಗೆ ದ್ರೋಹ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟಿನ ತೀರ್ಪು ಬಂದು ಸುಮಾರು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಒಳಮೀಸಲಾತಿ ಜಾರಿಯ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವ ಸರ್ಕಾರದ ವಿರುದ್ಧ ಡಿ. 16ರಂದು ಬೆಳಗಾವಿಯಲ್ಲಿ ಸಮಾವೇಶ ನಡೆಸಲಾಗುವುದು ಎಂದರು.

ಸಮಾಜದ ಮುಖಂಡ ಶುಕರಾಜ ತಾಳಕೇರಿ ಮಾತನಾಡಿ, ಇನ್ನೊಬ್ಬರ ಮೀಸಲಾತಿ ಕಿತ್ತಿಕೊಡಿ ಎಂದು ನಾವು ಹೇಳುತ್ತಿಲ್ಲ. ನಮ್ಮ ಪಾಲನ್ನು ಮಾತ್ರ ನಾವು ಕೇಳುತ್ತಿದ್ದೇವೆ. ಎಲ್ಲಾ ಸರ್ಕಾರಗಳು ಕೈ ಚೆಲ್ಲುತ್ತಾ ಮುಂದಕ್ಕೆ ಸಾಗಿಸುತ್ತಾ ಬಂದಿವೆ. ಇದು ನಮ್ಮ ಕೊನೆಯ ಹೋರಾಟವಾಗಿದ್ದು, ಮುಂದಿನ ದಿನಗಳಲ್ಲಿ ಅತ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಮನವಿಯನುಸಾರ ಅಧಿವೇಶನದಲ್ಲಿ ಚರ್ಚೆ ಮಾಡಲಾಗುವುದು. ಈ ಕುರಿತು ಸರಕಾರಕ್ಕೆ ಆಗ್ರಹಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಟೆಂಗುಂಟಿ, ಬಾಳಪ್ಪ ಬೇವಿನಕಟ್ಟಿ, ಕಾಶೀಮಪ್ಪ ಪೂಜಾರ, ನಾಗರಾಜ ಹೊಸಮನಿ, ಯಮನೂರಪ್ಪ ಮನ್ನೆರಾಳ, ಛತ್ರಪ್ಪ ಮೇಗೂರು ಸೇರಿದಂತೆ ಅನೇಕರು ಇದ್ದರು.