ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಹಾಗೂ ನೂತನ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರ ಅಧಿಕಾರ ಪದಗ್ರಹಣ ಶುಕ್ರವಾರ ಪುರಸಭೆ ಕಾರ್ಯಾಲಯದಲ್ಲಿ ಜರುಗಿತು.ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಆಶೀರ್ವಾದ ಹಾಗೂ ಪಟ್ಟಣದ ಬಹುತೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸ್ನೇಹಿತರು ಸಂಪೂರ್ಣ ಸಹಕಾರ ನೀಡಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದಗಳು ಎಂದರು.
ಚುನಾವಣೆಯಲ್ಲಿ ಅವರವರ ಪಕ್ಷ ಮತ್ತು ಸ್ವಾಭಿಮಾನಕ್ಕಾಗಿ ಅಧಿಕಾರದ ಗದ್ದುಗೆ ಹಿಡಿಯುವ ಪ್ರಯತ್ನದಲ್ಲಿ ಸದಸ್ಯರು ಬೇರೆಬೇರೆಯಾಗಿ ರಾಜಕಾರಣ ಮಾಡುವುದು ಸ್ವಾಭಾವಿಕ. ಇನ್ನು ಮುಂದೆ ನಾವೆಲ್ಲರೂ ಒಂದೇ ಎಂದು ತಿಳಿದು ವೈಮನಸುಗಳನ್ನು ಮರೆತು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಪಟ್ಟಣದ ಅಭಿವೃದ್ಧಿಗಾಗಿ, ಸಮಸ್ಯೆಗಳ ನಿವಾರಣೆಗೆ ಕೆಲಸ ಮಾಡೋಣ. ಇದಕ್ಕೆ ಎಲ್ಲರ ಸಹಕಾರ ನೀಡುವಂತೆ ಕೋರಿದರು.ಈ ವೇಳೆ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು. ಒಂದೂವರೆ ವರ್ಷದಿಂದ ಪುರಸಭೆಗೆ ಅಧಿಕಾರವಿಲ್ಲದೇ ಅಭಿವೃದ್ಧಿ ಕುಂಠಿತವಾಗಿತ್ತು. ಕಳೆದ 20 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದ ರಸೂಲ ದೇಸಾಯಿ ಅಧ್ಯಕ್ಷರಾಗಿದ್ದರು. ಅದಾದ ಬಳಿಕ, ಮುಸ್ಲಿಂ ಸಮಾಜದವರು ಅಧ್ಯಕ್ಷರಾಗಿರಲಿಲ್ಲ. ಸದ್ಯ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇದ್ದರೂ ಸ್ಥಳೀಯ ಶಾಸಕರುಮೈಬೂಬ ಗೊಳಸಂಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಮುದಾಯಕ್ಕೆ ಗೌರವ ನೀಡಿದ್ದಾರೆ. ಅವರ ಜನಪರ ಕಾಳಜಿ ಹಾಗೂ ಸಲಹೆ ಸೂಚನೆ ಮೇರೆಗೆ ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ನಾಡಗೌಡ ಹೆಸರಿಗೆ ಕಳಂಕ ಬರದಂತೆ ಕೆಲಸ ಮಾಡುವಂತೆ ಸಲಹೆ ನೀಡಿದರು.
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಮೈಬೂಬ ಗೊಳಸಂಗಿ ಅವರು ಬೇರೆ ಪಕ್ಷದಲ್ಲಿದ್ದರೂ ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಯಾವತ್ತಿಗೂ ವಿರೋಧಿಸಿಲ್ಲ. ಒಗ್ಗಟ್ಟಾಗಿ ನಮ್ಮ ನಮ್ಮ ವಾರ್ಡುಗಳ ಸುರಕ್ಷತೆ, ಸ್ವಚ್ಚತೆ, ಮೂಲಭೂತ ಸೌಲಭ್ಯಗಳಿಗೆ ತೊಂದರೆಯಾಗದಂತೆ ಶ್ರಮಿಸುತ್ತಿದ್ದೇವೆ. ಆಡಳಿತದಲ್ಲಿ ಅವರಿಗೆ ಸಹಕಾರ ನೀಡುತ್ತೇವೆ ಎಂದರು.ಈ ಸಂದರ್ಭದಲ್ಲಿ ಪ್ರತಿಭಾ ಅಂಗಡಗೇರಿ, ಭಾರತಿ ಪಾಟೀಲ, ಸಂಗಮ್ಮ ದೇವರಳ್ಳಿ, ಚನ್ನಪ್ಪ ಕಂಠಿ, ವಿರೇಶ ಹಡಲಗೇರಿ, ಹಣಮಂತ ಭೋವಿ, ಯಲ್ಲಪ್ಪ ನಾಯಕಮಕ್ಕಳ, ಅಶೋಕ ವನಹಳ್ಳಿ, ಸಹನಾ ಬಡಿಗೇರ, ಶಾಹಾಜಾದಬಿ ಹುಣಸಗಿ, ಸದಾಶಿವ ಮಾಗಿ, ಮುಖಂಡರಾದ ಸಿ.ಬಿ.ಅಸ್ಕಿ, ರುದ್ರುಗೌಡ ಅಂಗಡಗೇರಿ ಕಾಮರಾಜ ಬಿರಾದಾರ, ವಾಯ್ ಎಚ್ ವಿಜಯಕರ, ಸಂಗಪ್ಪ ಮೇಲಿನಮನಿ, ಸದಾಶಿವ ಮಠ, ಬಾಪ್ ಢವಳಗಿ, ಮುನ್ನಾ ಮಕಾಂದಾರ, ಹರೀಶ ಬೇವೂರ,ನೀಲಮ್ಮ ಬೋರಾವತ್ ಇತರರಿದ್ದರು.--------------
ಬಾಕ್ಸ್ಕುಡಿಯುವ ನೀರು ಯೋಜನೆಗೆ ಟೆಂಡರ್
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪಟ್ಟಣದ ಮುಖ್ಯ ಬಜಾರದಲ್ಲಿನ ಮೆಘಾ ಮಾರ್ಕೆಟ್ ನಿರ್ಮಾಣಕ್ಕೆ ಈಗಾಗಲೇ ₹ 15 ಕೋಟಿ ಅಂದಾಜು ವೆಚ್ಚ ತಯಾರಿದ್ದು, ಪ್ರಥಮ ಹಂತದ ಕಾಮಗಾರಿಗೆ ₹5 ಕೋಟಿಗಳ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ದಿನದ 24 ಗಂಟೆಗಳ ನೀರು ಪೂರೈಕೆಗೆ ₹17.34 ಕೋಟಿ ವಿಶೇಷ ಅನುದಾನದಲ್ಲಿ ಕಾಮಗಾರಿ ನಡೆಸಲು ಕರ್ನಾಟಕ ನಗರ ನೀರು ಸರಬರಾಜ ಹಾಗೂ ಒಳಚರಂಡಿ ಮಂಡಳಿಯಿಂದ ಟೆಂಡರ್ ಕರೆಯಲಾಗಿದೆ. ಪಟ್ಟಣದ ಒಳಚರಂಡಿ ಯೋಜನೆಯೂ ಸಂಪೂರ್ಣ ಮುಗಿಸಲು ಕೆಯುಐಡಿಎಫ್‌ಸಿನಿಂದ ₹34.40 ಕೋಟಿಗೆ ಸರ್ಕಾರ ಮಂಜೂರಾತಿ ನೀಡಿದೆ. ಅದು ಕೂಡ ಟೆಂಡರ್ ಪ್ರಕ್ರಿಯೆಯಲ್ಲಿದೆ. ಶಾಸಕರ ಮಾರ್ಗದರ್ಶದಲ್ಲಿ ಎಲ್ಲ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸೇರಿ ಸದಸ್ಯರ ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.