ಸಂತೇಮರಳ್ಳಿ ಮೋಳೆ ಗ್ರಾಮದಲ್ಲಿ ಮತದಾನ ಬಹಿಷ್ಕರ

| Published : Apr 25 2024, 01:05 AM IST

ಸಂತೇಮರಳ್ಳಿ ಮೋಳೆ ಗ್ರಾಮದಲ್ಲಿ ಮತದಾನ ಬಹಿಷ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಪನಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಸಂತೆಮರಹಳ್ಳಿ ಮೋಳೆ ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನಂತಹ ಮೂಲ ಸೌಕರ್ಯಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಬೇಸತ್ತು ಹೋಗಿದ್ದು, ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದ ಮುಖ್ಯರಸ್ತೆ ಬಳಿ ಚುನಾವಣಾ ಬಹಿಷ್ಕಾರದ ಫ್ಲೆಕ್ಸ್ ಅಳವಡಿಸಿದ ಗ್ರಾಮಸ್ಥರು ಕೆಲಕಾಲ ಧರಣಿ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಕೆಂಪನಪುರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಸಂತೆಮರಹಳ್ಳಿ ಮೋಳೆ ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನಂತಹ ಮೂಲ ಸೌಕರ್ಯಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಬೇಸತ್ತು ಹೋಗಿದ್ದು, ಮತದಾನ ಬಹಿಷ್ಕರಿಸಿದ್ದಾರೆ. ಗ್ರಾಮದ ಮುಖ್ಯರಸ್ತೆ ಬಳಿ ಚುನಾವಣಾ ಬಹಿಷ್ಕಾರದ ಫ್ಲೆಕ್ಸ್ ಅಳವಡಿಸಿದ ಗ್ರಾಮಸ್ಥರು ಕೆಲಕಾಲ ಧರಣಿ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ 60 ಕುಟುಂಬಗಳು ವಾಸ ಮಾಡುತ್ತಿದ್ದು 300ಕ್ಕೂ ಹೆಚ್ಚು ಮತದಾರರನ್ನು ಒಳಗೊಂಡಿದೆ.

ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಓಡಾಡಲು ತೊಂದರೆಯಾಗುತ್ತದೆ. ಅಲ್ಲದೇ ಚರಂಡಿ ಇಲ್ಲದ ಪರಿಣಾಮ ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಜೊತೆಗೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲದೇ ಮಳೆಗಾಲದಲ್ಲಿ ಗ್ರಾಮವು ಸಂಪೂರ್ಣವಾಗಿ ನೀರಿನಲ್ಲಿ ಮುಳುಗುತ್ತದೆ. ಈ ವೇಳೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ ಎಂದು ದೂರಿದರು.

ಅಲ್ಲದೇ ಗ್ರಾಮಕ್ಕೆ ಸ್ಮಶಾನ ವ್ಯವಸ್ಥೆ ಇಲ್ಲ. ಇದರಿಂದ ಜಮೀನು ಇರುವ ಕುಟುಂಬಗಳು ತಮ್ಮ ಜಮೀನುಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಜಮೀನು ಇಲ್ಲದವರು ಬೇರೆ ಜಮೀನುಗಳನ್ನು ಆಶ್ರಯಿಸಬೇಕಿದೆ. ಮಳೆಗಾಲದಲ್ಲಂತೂ ಅಂತ್ಯಸಂಸ್ಕಾರಕ್ಕೆ ತೊಂದರೆಯಾಗುತ್ತದೆ ಎಂದರು.

ಸಂತೇಮರಹಳ್ಳಿಮೋಳೆ ಗ್ರಾಮವು ಹೋಬಳಿ ಕೇಂದ್ರವಾಗಿರುವ ಸಂತೆಮರಹಳ್ಳಿಗೆ ಹತ್ತಿರದಲ್ಲಿದೆ. ಕಳೆದ 15 ವರ್ಷಗಳ ಹಿಂದೆ ಸಂತೆಮರಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿದ್ದ ಈ ಗ್ರಾಮವನ್ನು ಈಗ ಕೆಂಪನಪುರ ಗ್ರಾಪಂಗೆ ಸೇರಿಸಿದ್ದು ಗ್ರಾಮಕ್ಕೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ಈ ಹಿಂದೆ ಇದ್ದಂತೆ ಗ್ರಾಮವನ್ನು ಸಂತೆಮರಹಳ್ಳಿ ಗ್ರಾಮಪಂಚಾಯಿತಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.