ಕಾರ್ಕಳ - ಕಾಂಗ್ರೆಸ್ ನಿಂದ ಪರಿವರ್ತನಾ ಜಾಥಾದ ಮೂಲಕ ಮತಯಾಚನೆ

| Published : Apr 20 2024, 01:02 AM IST

ಕಾರ್ಕಳ - ಕಾಂಗ್ರೆಸ್ ನಿಂದ ಪರಿವರ್ತನಾ ಜಾಥಾದ ಮೂಲಕ ಮತಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪುಲ್ಕೇರಿ ಬೈಪಾಸ್‌ ವೃತ್ತದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್‌ ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಪರ ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಮತಯಾಚನೆಗೆ ಶುಕ್ರವಾರ ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ವತಿಯಿಂದ ಬೃಹತ್‌ ವಾಹನ ರ್‍ಯಾಲಿ ಪರಿವರ್ತನಾ ಜಾಥಾವನ್ನು ನಡೆಸಲಾಯಿತು.

ಇಲ್ಲಿನ ಪುಲ್ಕೇರಿ ಬೈಪಾಸ್‌ ವೃತ್ತದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್‌ ಅವರು ಕಾಂಗ್ರೆಸ್‌ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ, ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯಕುಮಾರ್‌ ಶೆಟ್ಟಿ ಸಹಿತ ಅನೇಕ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಹೆಗ್ಡೆ ಅವರು ತಾವು ಈ ಹಿಂದೆ ಮಾಡಿದ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತಿದ್ದೇನೆ, ಉಡುಪಿ ಮತ್ತು ಚಿಕ್ಕಮಗಳೂರಿನ ಸಮಸ್ಯೆಗಳ ಅರಿವಿದೆ, ಅವುಗಳ ಪರಿಹಾರಕ್ಕಾಗಿ ಮತ ಕೇಳುತ್ತೇನೆ, ನಾಯಕನ ಹೆಸರಿನಲ್ಲಿ ಮತ ಕೇಳಿದರೇ ಅವನ್ನೆಲ್ಲಾ ಮಾಡುವುದಕ್ಕಾಗುವುದಿಲ್ಲ, ಸಂಸತ್ತಿನಲ್ಲಿ ಜನರ ಪ್ರತಿನಿಧಿಯಾಗುವುದಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

ರ್ಯಾಲಿಯಲ್ಲಿ ದ್ವಿಚಕ್ರ, ಲಘು ವಾಹನ ಸಹಿತ ನೂರಾರು ವಾಹನಗಳಲ್ಲಿ ಅಪಾರ ಕಾರ್ಯಕರ್ತರು ನಗರದ ಮುಖ್ಯ ಪೇಟೆಯಲ್ಲಿ ಸಂಚರಿಸಿ ಕಾಂಗ್ರೆಸ್ ಪರ ಮತಯಾಚಿಸಿದರು. ನಂತರ ಹೆಬ್ರಿಯಲ್ಲಿ ಬಹಿರಂಗ ಸಭೆಯನ್ನೂ ನಡೆಸಲಾಯಿತು. ರ್ಯಾಲಿಯುದ್ದಕ್ಕೂ ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದರು. ಕಾಂಗ್ರೆಸ್ ನಾಯಕ ಶುಭದ ರಾವ್‌ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆಯವರು ಹೆಬ್ರಿಯ ಕಚ್ಚೂರು ಗ್ರಾಮದ ಬೆಳಂಜೆಯಲ್ಲಿರುವ ಲಕ್ಷ್ಮೀ ನರಸಿಂಹ ಆಗ್ರೋ ಇಂಡಸ್ಟ್ರೀಸ್ ನ ಸಿಬ್ಬಂದಿಗಳಲ್ಲಿ ಮತಯಾಚನೆ ಮಾಡಿದರು.

ಉದ್ಯಮ - ದೇವಳಗಳಿಗೆ ಭೇಟಿ: ಇದಕ್ಕೆ ಮೊದಲು ಜಯಪ್ರಕಾಶ್ ಹೆಗ್ಡೆಯವರು ಹೆಬ್ರಿಯ ಶ್ರೀ ಗಜಾನನ ಕ್ಯಾಷ್ಯೂ ಇಂಡಸ್ಟ್ರೀಸ್, ಶಿವಪುರದ ಮುಳ್ಳುಗುಡ್ಡೆಯಲ್ಲಿರುವ ಸೋನಾ ಹಪ್ಪಳ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಉದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿ ಮತಯಾಚಿಸಿದರು.

ಇದೇ ಸಂದರ್ಭದಲ್ಲಿ ಶಿವಪುರದ ಮುಳ್ಳುಗುಡ್ಡೆಯಲ್ಲಿರುವ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಮತ್ತು ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದೇವರ ದರುಶನ ಪಡೆದು ಪೂಜೆ ಸಲ್ಲಿಸಿದರು.