ಕಳೆದ 12 ವರ್ಷಗಳಿಂದ ಕುಶಾಲನಗರ ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಅಪೂರ್ಣಗೊಂಡು ಕಾವೇರಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯ ಸೇರುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಕರ್ನಾಟಕ ಲೋಕಾಯುಕ್ತ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದರು.

ಕುಶಾಲನಗರ: ಕಳೆದ 12 ವರ್ಷಗಳಿಂದ ಕುಶಾಲನಗರ ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಅಪೂರ್ಣಗೊಂಡು ಕಾವೇರಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯ ಸೇರುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಕರ್ನಾಟಕ ಲೋಕಾಯುಕ್ತ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದರು.

ಪ್ರಾಧಿಕಾರದ ಅಧಿಕಾರಿಗಳು ಕುಶಾಲನಗರದಲ್ಲಿ ಕುಂದು ಕೊರತೆಗಳ ಅಹವಾಲು ಸಭೆ ಏರ್ಪಡಿಸಿದ್ದ ಸಂದರ್ಭ ಸಮಿತಿ ನೇತೃತ್ವದಲ್ಲಿ ಕಾಮಗಾರಿಯ ಪತ್ರಿಕಾ ವರದಿಗಳು ಸೇರಿದಂತೆ ದಾಖಲೆ ಸಹಿತ ದೂರು ಸಲ್ಲಿಸಿದರು.

ಸ್ವಚ್ಛ ಕುಶಾಲನಗರ:

ಸ್ವಚ್ಛ ಕಾವೇರಿ ಗುರಿಯೊಂದಿಗೆ 2012ರಲ್ಲಿ ರಾಜ್ಯ ಸರ್ಕಾರ ಪಟ್ಟಣದ ಒಳಚರಂಡಿ ಯೋಜನೆಗೆ ಅನುಮೋದನೆ ನೀಡಿದ್ದು, 2014ರಲ್ಲಿ ಕಾಮಗಾರಿ ಆರಂಭಗೊಂಡಿದೆ.

ಸುಮಾರು 71 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, 12 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

ಇದರಿಂದ ಪಟ್ಟಣದ ಎಲ್ಲ ಕಲುಷಿತ ತ್ಯಾಜ್ಯಗಳು ನೇರವಾಗಿ ಚರಂಡಿ ಮೂಲಕ ನದಿ ಒಡಲು ಸೇರುತ್ತಿದೆ. ನದಿ ನೀರು ಗುಣಮಟ್ಟ ಕಳೆದುಕೊಂಡು ಬಳಕೆಗೆ ಯೋಗ್ಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಕರ್ನಾಟಕ ಒಳಚರಂಡಿ ಮಂಡಳಿಯ ಅಧಿಕಾರಿಗಳು ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮನವಿಯಲ್ಲಿ ಕೋರಲಾಗಿದೆ.

ಕೆಲವೆಡೆ ಅಕ್ರಮವಾಗಿ ಶೌಚಾಲಯದ ಸಂಪರ್ಕವನ್ನು ಅಪೂರ್ಣಗೊಂಡ ಕಾಮಗಾರಿಗಳ ಪೈಪ್‌ಗಳಿಗೆ ಅಳವಡಿಸಲಾಗಿದ್ದು, ಇದರಿಂದ ನದಿಗೆ ನೇರವಾಗಿ ಶೌಚ ತ್ಯಾಜ್ಯ ಹರಿಯುತ್ತಿದೆ.

ಹಲವು ವರ್ಷಗಳ ಹಿಂದೆ ಭೂಗತವಾಗಿ ಅಳವಡಿಸಿದ ಪೈಪ್ ಗಳು ಶಿಥಿಲಗೊಂಡಿದ್ದು, ನದಿ ಬದಿಯಲ್ಲಿರುವ ಡೂಮ್ ಗಳಿಂದ ಈಗಾಗಲೇ ಕಲುಷಿತ ನೀರು ಹೊರ ಬರುತ್ತಿದ್ದು, ಈ ಬಗ್ಗೆ ನಿರ್ವಹಣೆ ಕಾರ್ಯ ನಡೆಯಬೇಕು. ನದಿ ತೀರದಲ್ಲಿ ಪೈಪ್‌ಗಳನ್ನು ಅಳವಡಿಸಲಾಗಿದ್ದು, ತೆರವುಗೊಳಿಸಬೇಕು. ಮಳೆಗಾಲದಲ್ಲಿ ಪ್ರವಾಹ ಬಂದ ಸಂದರ್ಭ ಇವುಗಳ ನಿರ್ವಹಣೆಗೆ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ಕಾಮಗಾರಿ ನಡೆಯುವ ಸಂದರ್ಭ ಅಧಿಕಾರಿಗಳ ಗಮನಕ್ಕೆ ತಂದರೂ ಆ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಸ್ಪಂದಿಸದೆ ಅವೈಜ್ಞಾನಿಕವಾಗಿ ನದಿ ತಟದಲ್ಲಿ ಒಳಚರಂಡಿ ಕಾಮಗಾರಿಯ ಪೈಪ್ ಅಳವಡಿಸುವ ಕಾಮಗಾರಿ ನಡೆಸಿರುವುದು, ಇದರಿಂದ ನೇರವಾಗಿ ನದಿ ನೀರು ಕಲುಷಿತಗೊಳ್ಳುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2016ರಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಒಪ್ಪಂದವಾಗಿದ್ದರೂ, 10 ವರ್ಷ ಕಳೆದರೂ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸ್ವಚ್ಛ ಕಾವೇರಿ ಗುರಿ ಹೊಂದಿದ ಯೋಜನೆ ಪ್ರಸಕ್ತ ಸಂಪೂರ್ಣ ವಿಫಲವಾಗಿದೆ.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿ ಸಹಾಯಕ ಕಾರ್ಯ ಪಾಲಕ ಅಭಿಯಂತರ ಪ್ರಸನ್ನ ಕುಮಾರ್ ಅವರಲ್ಲಿ ಲೋಕಾಯುಕ್ತ ಡಿವೈಎಸ್ ಪಿ ದಿನಕರ ಶೆಟ್ಟಿ ಅವರು ಸ್ಪಷ್ಟನೆ ಬಯಸಿದಾಗ ಆದಷ್ಟು ಬೇಗನೆ ಪೂರ್ಣಗೊಳಿಸುವ ಭರವಸೆ ವ್ಯಕ್ತಪಡಿಸಿದರು.

ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್ ಅವರಿಗೆ ನದಿಗೆ ಯಾವುದೇ ಕಡೆ ನೇರವಾಗಿ ಕಲುಷಿತ ನೀರು ಅಥವಾ ತ್ಯಾಜ್ಯ ಸೇರದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.

ದೂರನ್ನು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಈ ಸಂಬಂಧ ಕಾಮಗಾರಿಯ ತಾಂತ್ರಿಕ ಗುಣಮಟ್ಟ ಪರಿಶೀಲನೆಗೆ ವಿಶೇಷ ತಂಡ ಒಂದನ್ನು ಕಳಿಸಲು ಚಿಂತನೆ ಹರಿಸಲಾಗುವುದು.

ಕಾಮಗಾರಿ ವಿಳಂಬಕ್ಕೆ ಹಾಗೂ ನದಿ ಕಲುಷಿತಗೊಳ್ಳಲು ಕಾರಣಕರ್ತರಾದ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ ತಿಳಿಸಿದರು.

ಕುಶಾಲನಗರ ಒಳಚರಂಡಿ ಯೋಜನೆ ಕಾಮಗಾರಿ ಬಗ್ಗೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಹಲವಷ್ಟು ಬಾರಿ ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ವಿಳಂಬ ಹಾಗೂ ನ್ಯೂನತೆ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ವಿಶೇಷ ವರದಿಗಳು ಪ್ರಕಟಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.