ದಕ್ಷಿಣ ಭಾರತದ ಜೀವನದಿಯಾದ ಕಾವೇರಿ ನದಿಯು ತೀವ್ರ ಮಟ್ಟದ ಮಾಲಿನ್ಯಕ್ಕೆ ತುತ್ತಾಗಿದ್ದು, ಹಲವು ಭಾಗಗಳಲ್ಲಿ ಇದರ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ. ಆದರೂ ಕೂಡ ಕಾವೇರಿ ನದಿ ಮಲಿನಕ್ಕೆ ಯಾವುದೇ ಕಟ್ಟುನಿಟ್ಟಿನ ಕ್ರಮ ಈ ವರೆಗೂ ಜಾರಿಯಾಗಿಲ್ಲ. ಕಾವೇರಿ ನದಿ ಉಗಮಿಸುವ ಕೊಡಗು ಜಿಲ್ಲೆಯಲ್ಲೇ ನದಿ ಕಲುಷಿತಗೊಳ್ಳುತ್ತಿರುವುದು ತೀವ್ರ ಆತಂಕ ಉಂಟು ಮಾಡಿದೆ. ಸರ್ಕಾರ ಕಾವೇರಿ ನದಿಯ ಸಂರಕ್ಷಣೆ ಮರೆತಂತೆ ಕಾಣುತ್ತಿದೆ.
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ : ದಕ್ಷಿಣ ಭಾರತದ ಜೀವನದಿಯಾದ ಕಾವೇರಿ ನದಿಯು ತೀವ್ರ ಮಟ್ಟದ ಮಾಲಿನ್ಯಕ್ಕೆ ತುತ್ತಾಗಿದ್ದು, ಹಲವು ಭಾಗಗಳಲ್ಲಿ ಇದರ ನೀರು ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ. ಆದರೂ ಕೂಡ ಕಾವೇರಿ ನದಿ ಮಲಿನಕ್ಕೆ ಯಾವುದೇ ಕಟ್ಟುನಿಟ್ಟಿನ ಕ್ರಮ ಈ ವರೆಗೂ ಜಾರಿಯಾಗಿಲ್ಲ. ಕಾವೇರಿ ನದಿ ಉಗಮಿಸುವ ಕೊಡಗು ಜಿಲ್ಲೆಯಲ್ಲೇ ನದಿ ಕಲುಷಿತಗೊಳ್ಳುತ್ತಿರುವುದು ತೀವ್ರ ಆತಂಕ ಉಂಟು ಮಾಡಿದೆ. ಸರ್ಕಾರ ಕಾವೇರಿ ನದಿಯ ಸಂರಕ್ಷಣೆ ಮರೆತಂತೆ ಕಾಣುತ್ತಿದೆ. ನದಿ ಪಾತ್ರದ ನಗರ ಮತ್ತು ಪಟ್ಟಣಗಳ ಜಿಲ್ಲೆಯ ಭಾಗಮಂಡಲದಿಂದ ಹಿಡಿದು, ಕುಶಾಲನಗರದ ವರೆಗೂ ಕಾವೇರಿ ನದಿ ಹರಿದು ಹೋಗುತ್ತಿದ್ದು, ಹಲವು ಕಡೆ ನದಿಗೆ ತ್ಯಾಜ್ಯಗಳನ್ನು ಹರಿಯಬಿಡುತ್ತಿದ್ದರೂ ಯಾವುದೇ ಕ್ರಮವಾಗಿಲ್ಲ. ಗೃಹಬಳಕೆಯ ಕೊಳಚೆ ನೀರು ನೇರವಾಗಿ ನದಿಯನ್ನು ಸೇರುತ್ತಿದೆ. ಕುಶಾಲನಗರದ ಭಾಗದಿಂದ ಕಾಫಿ ಹಾಗೂ ಶುಂಠಿ ಸೇರಿದಂತೆ ಇತರೆ ಕೈಗಾರಿಕಾ ತ್ಯಾಜ್ಯ, ಕಾರ್ಖಾನೆಗಳಿಂದ ಹೊರಬರುವ ವಿಷಕಾರಿ ರಾಸಾಯನಿಕಗಳು ನದಿಯ ನೀರನ್ನು ಕಲುಷಿತಗೊಳಿಸುತ್ತಿವೆ. ತೋಟಗಳು ಮತ್ತು ಗದ್ದೆಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು ಮಳೆನೀರಿನೊಂದಿಗೆ ಕೊಚ್ಚಿಕೊಂಡು ನದಿಗೆ ಸೇರುತ್ತಿವೆ. ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಪ್ಲಾಸ್ಟಿಕ್, ಬಟ್ಟೆ, ಹೂವು ಮತ್ತು ಇತರ ಕಸವನ್ನು ನೇರವಾಗಿ ನದಿಗೆ ಎಸೆಯಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆ. ನದಿಯ ಒಡಲಿನಿಂದ ಮರಳನ್ನು ತೆಗೆಯುವುದರಿಂದ ನೀರು ನೈಸರ್ಗಿಕವಾಗಿ ಶುದ್ಧೀಕರಣಗೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಕಾವೇರಿ ನದಿಯ ಮಣ್ಣು ಮತ್ತು ಮೀನುಗಳಲ್ಲಿ ಸೀಸ, ಪಾದರಸ ಮತ್ತು ತಾಮ್ರದಂತಹ ಅಪಾಯಕಾರಿ ಭಾರಲೋಹಗಳು ನಿಗದಿತ ಮಿತಿಗಿಂತ ಹೆಚ್ಚಾಗಿವೆ.ಬೇಸಗೆಯಲ್ಲಿ ಹರಿವು ನಿಲ್ಲಿಸುವ ಕಾವೇರಿ: ಕಳೆದ ಕೆಲವು ವರ್ಷಗಳ ಹಿಂದೆ ಕಾವೇರಿ ನದಿ ಬೇಸಗೆಯಲ್ಲಿ ಕೂಡ ಸಮೃದ್ಧವಾಗಿ ಹರಿಯುವ ಮೂಲಕ ಜನ, ಜಾನುವಾರು ಅಲ್ಲದೆ ಅಪಾರ ಜಲಚರಗಳ ಜೀವಕ್ಕೆ ಸಹಕಾರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಸಕಾಲಕ್ಕೆ ಮಳೆಗುತ್ತಿಲ್ಲ. ಇದರಿಂದ ಕಾವೇರಿ ನದಿ ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುತ್ತದೆ. ಬೇಸಗೆಯ ಅವಧಿಯಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಕಾಫಿ ತೋಟಕ್ಕೆ ಕಾವೇರಿ ನದಿಯ ಮೂಲಕ ನೀರು ಸಿಂಪಡಣೆ ಮಾಡಲಾಗುತ್ತದೆ. ಇದರಿಂದ ಬೇಸಗೆಯಲ್ಲಿ ಕಾವೇರಿ ನದಿ ತನ್ನ ಹರಿವನ್ನೇ ನಿಲ್ಲಿಸುವ ಮೂಲಕ ನೀರಿನ ಸಮಸ್ಯೆ ತಾರಕಕ್ಕೆ ಏರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಕಾವೇರಿ ನದಿ ಉಕ್ಕಿ ಹರಿಯುವುದರಿಂದ ಕೊಳಚೆ ಅಷ್ಟಾಗಿ ಕಲುಷಿತ ಕಾಣುವುದಿಲ್ಲ. ಆದರೆ ಬೇಸಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಇರುತ್ತದೆ. ಇದರಿಂದ ಬಟ್ಟೆ ಒಗೆಯುವುದು, ತ್ಯಾಜ್ಯ ಎಸೆಯುವುದು, ಕಾರ್ಖಾನೆಗಳ ತ್ಯಾಜ್ಯಗಳು ವಿವಿಧ ಕಾರಣಗಳಿಂದ ಕಾವೇರಿ ನೀರು ಮಲೀನಗೊಳ್ಳುವ ಮೂಲಕ ಅಪಾಯ ಉಂಟಾಗುತ್ತಿದೆ. ಜಿಲ್ಲಾಡಳಿತ ಏನು ಮಾಡುತ್ತಿದೆ?
ಪ್ರತಿನಿತ್ಯ ಕೂಡ ಕಾವೇರಿ ನದಿ ಮಲೀನಗೊಳ್ಳುತ್ತಿದ್ದರೂ ಕೂಡ ಜಿಲ್ಲಾಡಳಿತ ಈ ವರೆಗೂ ಕಟ್ಟುನಿಟ್ಟಿನ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಮಾತ್ರ ಸತ್ಯ. ಕೊಳಚೆ ನೀರನ್ನು ಸಂಪೂರ್ಣವಾಗಿ ಶುದ್ಧೀಕರಿಸಿದ ನಂತರವೇ ನದಿಗೆ ಬಿಡುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕುಶಾಲನಗರದ ಸೇರಿದಂತೆ ವಿವಿಧ ಭಾಗದ ಕೈಗಾರಿಕೆಗಳ ಮೇಲೆ ನಿಗಾ ವಹಿಸಬೇಕಾಗಿದೆ. ರಾಸಾಯನಿಕ ತ್ಯಾಜ್ಯಗಳನ್ನು ನದಿಗೆ ಬಿಡುವ ಕಾರ್ಖಾನೆಗಳ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮ ಕೈಗೊಳ್ಳಬೇಕು. ಸಾವಯವ ಕೃಷಿಗೆ ಉತ್ತೇಜನ, ನದಿ ಪಾತ್ರದ ರೈತರು ರಾಸಾಯನಿಕ ಗೊಬ್ಬರಗಳ ಬದಲು ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಸಾರ್ವಜನಿಕ ಜಾಗೃತಿ. ಪ್ರವಾಸಿಗರು ಮತ್ತು ಸ್ಥಳೀಯರು ನದಿಗೆ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಎಸೆಯದಂತೆ ದಂಡ ವಿಧಿಸುವುದು ಮತ್ತು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ.ಕಾವೇರಿ ಸಂರಕ್ಷಣೆ ಮರೆತ ಸರ್ಕಾರ!ಕಾವೇರಿ ಸಂರಕ್ಷಣೆಗಾಗಿ ಜಿಲ್ಲೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳು ಕೆಲಸ ಮಾಡುತ್ತಿದೆ. ಕಾವೇರಿ ಸಂರಕ್ಷಣೆಗೆ ಆಗಾಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದೆ. ಆದರೆ ಯಾವುದೇ ಸರ್ಕಾರಗಳು ಈ ವರೆಗೂ ಕಾವೇರಿ ನದಿ ಸಂರಕ್ಷಣೆಗೆ ಯಾವುದೇ ವಿಶೇಷ ಯೋಜನೆ ರೂಪಿಸಿಲ್ಲ. ನದಿಯಲ್ಲಿ ನೀರಿಲ್ಲದ ಸಂದರ್ಭ ಮಾತ್ರ ಕಾವೇರಿ, ಕೊಡಗು ಜಿಲ್ಲೆಯನ್ನು ನೆನಪಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿರುವುದು ಮಾತ್ರ ವಿಪರ್ಯಾಸ. ಮಹಶೀರ್ ಮತ್ಸ್ಯ ಸಂತತಿಗೆ ಕುತ್ತು!
ಕಾವೇರಿ ನದಿ ಮಾನವರಿಗೆ ಮಾತ್ರವಲ್ಲದೆ ಅಪಾರ ಜೀವರಾಶಿಯ ತಾಣವಾಗಿದೆ. ಕರ್ನಾಟಕದ ಕಾವೇರಿ ನದಿಯಲ್ಲಿ ಮಾತ್ರ ವಿಶೇಷವಾಗಿ ಮಹಶೀರ್ ಮತ್ಸ್ಯ ಸಂತತಿ ಇದೆ. ಆದರೆ ಕಾವೇರಿ ನದಿ ದಿನೇ ದಿನೇ ಮಲೀಣಗೊಳ್ಳುತ್ತಿರುವ ಪರಿಣಾಮ ಈ ಜಲ ಜೀವಕ್ಕೂ ಸಮಸ್ಯೆ ಉಂಟಾಗಿದೆ. ಇದರ ಸಂತತಿ ಕೂಡ ಕ್ಷೀಣಿಸುತ್ತಿದೆ. ಹಂಪ್ಬ್ಯಾಕ್ ಮಹಶೀರ್ ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಕಂಡುಬರುವ ಈ ವಿಶಿಷ್ಟ ಮೀನನ್ನು ಕಾವೇರಿಯ ಹುಲಿ ಎನ್ನುತ್ತಾರೆ. ನದಿಯ ಕಲುಷಿತ, ಮಾಲಿನ್ಯ ಮತ್ತು ಅಕ್ರಮ ಮೀನುಗಾರಿಕೆಯಿಂದಾಗಿ ಮಹಶೀರ್ ಪ್ರಭೇದಗಳು ಅಪಾಯದ ಅಂಚಿನಲ್ಲಿವೆ. ಇವುಗಳನ್ನು ಹಿಡಿಯುವುದು ಅಥವಾ ತಿನ್ನುವುದು ಕಾನೂನುಬಾಹಿರವಾಗಿದ್ದು, ಮೈಸೂರು ಮತ್ತು ಕೊಡಗು ಭಾಗದ ಜಲಾಶಯಗಳಲ್ಲಿ ಇವುಗಳ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಕಾವೇರಿ ನದಿ ಇತ್ತೀಚೆಗೆ ನಾನಾ ಕಾರಣದಿಂದ ಕಲುಷಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಕಾವೇರಿ ಕಾಲಿಂಗ್ ಎಂಬ ಪರಿಕಲ್ಪನೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಕೊಡಗಿನಲ್ಲಿ ಪ್ಲಾಸ್ಟಿಕ್ ಬಳಸದಂತೆ ನಿರ್ಬಂಧ ಹಾಕಿದರೆ ಸಾಲದು, ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲೇ ಪ್ಲಾಸ್ಟಿಕ್ ಬಳಸದಂತೆ ಪರಿಶೀಲನೆ ಮಾಡಿ ಎಚ್ಚರಿಕೆ ನೀಡಬೇಕು. ಕಾವೇರಿ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಗೀತ ರಚನೆ ಮಾಡಿ ಶೀಘ್ರದಲ್ಲೇ ಹೊರ ಬಿಡಲಾಗುವುದು. ಶರಣ್ ಪೂಣಚ್ಚ, ಸಮಾಜ ಸೇವಕರು ಮೂರ್ನಾಡು ಕಳೆದ ನಾಲ್ಕು ವರ್ಷಗಳಿಂದ ಕಾವೇರಿ ನದಿ ನೀರು ಕಲುಷಿತ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ. ಈ ಸಂದರ್ಭ ನಮಗೆ ನದಿ ಪಾತ್ರದಲ್ಲಿ ಆಹಾರ, ಪ್ಲಾಸ್ಟಿಕ್ ತ್ಯಾಜ್ಯಗಳು, ಪೂಜಾ ಸಾಮಗ್ರಿ, ಬಟ್ಟೆಗಳನ್ನು ಹೊಳೆಯಲ್ಲಿ ಬಿಡುತ್ತಿರುವುದು, ದೇವರ ಫೋಟೋಗಳು ಇರುವುದು ಕಂಡುಬಂದಿದೆ. ಯುವಕರು ಮೋಜು ಮಸ್ತಿ ಮಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಶಾಸಕರು, ಸಂಸದರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ಕೂಡ ಮನವಿ ಸಲ್ಲಿಸಿದ್ದೇವೆ.-ಶ್ರೀಶಾ ಎ.ಎಸ್, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಜವಹರ್ ನವೋದಯ ವಿದ್ಯಾಲಯ ಗಾಳಿಬೀಡು ಮಡಿಕೇರಿ