ಅರಸೀಕೆರೆಯ ರಸ್ತೆ ಮೇಲೆ ಹರಿಯುತ್ತಿರುವ ಚರಂಡಿಯ ಕಲುಷಿತ ನೀರು

| Published : Jul 25 2024, 01:16 AM IST

ಸಾರಾಂಶ

ಅರಸೀಕೆರೆಯ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯಲ್ಲಿ ಚರಂಡಿ ಕುಸಿದು, ಕಲುಷಿತ ನೀರು ಸರಾಗವಾಗಿ ಸಾಗದೆ ರಸ್ತೆ ಮೇಲೆ ಹರಿಯುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನತೆಯನ್ನು ಕಾಡುತ್ತಿದೆ.

ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನತೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆಯಲ್ಲಿ ಚರಂಡಿ ಕುಸಿದು, ಕಲುಷಿತ ನೀರು ಸರಾಗವಾಗಿ ಸಾಗದೆ ರಸ್ತೆ ಮೇಲೆ ಹರಿಯುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನತೆಯನ್ನು ಕಾಡುತ್ತಿದೆ.

ವರ್ಷಾನುಗಟ್ಟಲೆಗಳಿಂದ ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗಿದೆ ಈಗ ಬಸ್‌ಗಳ ಓಡಾಟದಿಂದ ಚರಂಡಿಗಳ ಮೇಲೆ ಸ್ಲ್ಯಾಬ್ ಕುಸಿದಿದ್ದು ಕಲುಷಿತ ನೀರು ಮುಂದೆ ಸಾಗಲು ಅವಕಾಶವಿಲ್ಲದೆ ರಸ್ತೆಯ ಮೇಲೆ ಹರಿಯುತ್ತಿದ್ದು, ಪ್ರತಿ ದಿನವೂ ಸಾವಿರಾರು ಮಂದಿ ಈ ನೀರಿನ ಮೇಲೆ ನಡೆದುಕೊಂಡು ಹೋಗಬೇಕಾಗಿದೆ. ಅಲ್ಲದೆ ಬಸ್‌ಗಳು ಸೇರಿದಂತೆ ಇತರೆ ವಾಹನಗಳು ಓಡಾಡುವಾಗ ಚಿಮ್ಮುವ ಕೊಳಚೆ ನೀರು ಪಾದಚಾರಿಗಳಿಗೆ ಚಿಮ್ಮುವ ಮೂಲಕ ಅಸ್ಸಯ್ಯಕರ ವಾತಾವರಣವನ್ನು ಸೃಷ್ಠಿ ಮಾಡಿದೆ. ಇಂತಹ ಸಂದರ್ಭಗಳಲ್ಲಿ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಂಡು ನಾಗರಿಕರಿಗೆ ಅನುಕೂಲ ಕಲ್ಪಿಸಬೇಕಾದ ನಗರಸಭೆ ಆಡಳಿತ ಕಣ್ಣಮುಚ್ಚಿ ಕುಳಿತಿರುವುದು ವಿಪರ್ಯಾಸ.

ಈ ಹಿಂದೆ ಇಲ್ಲಿ ಕಲ್ಲು ಬಂಡೆಗಳನ್ನು ಹಾಕಲಾಗಿತ್ತು. ಅದನ್ನು ತೆಗೆದು ನಗರಸಭೆ ಸ್ಲಾ ಬ್‌ಗಳನ್ನು ಹಾಕಲಾಗಿತ್ತಾದರೂ ವಾಹನಗಳ ಓಡಾಟದಿಂದ ಅವುಗಳು ಕುಸಿಯುತ್ತಿದ್ದು ಚರಂಡಿ ಒಳಭಾಗದಲ್ಲಿ ಕಲುಷಿತ ಮಣ್ಣು ಶೇಖರಣೆಯಾಗಿರುವುದರಿಂದ ನೀರು ಮುಂದೆ ಹರಿಯಲು ಸಾಧ್ಯವಾಗದೆ ಚರಂಡಿಯ ಮೇಲೆ ಕೊಳಚೆ ನೀರು ರಸ್ತೆ ಮೇಲೆ ಹರಿದ್ದು ದುರ‍್ನಾಥ ಬೀರುತ್ತಿದೆ, ಇದರಿಂದ ನಾಗರಿಕರಿಗೆ ಅಸಹ್ಯಕರ ವಾತಾವರಣವನ್ನು ಸೃಷ್ಠಿಸಿದೆ.

ಇದೇ ರಸ್ತೆಯಲ್ಲಿ ರತ್ನ ಚಿತ್ರ ಮಂದಿರವಿದ್ದು ಎಲ್ಲಾ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಈ ಮಾರ್ಗದಲ್ಲಿಯೇ ಸಾಗಬೇಕಿದ್ದು, ಈ ದುರ್ನಾತವನ್ನು ಸೇವಿಸಿಯೇ ಹೋಗಬೇಕಾಗಿರುವುದು ದುರ್ದೈವದ ಸಂಗತಿ. ಇಷ್ಟಾದರೂ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಚರಂಡಿಗಳನ್ನು ಸ್ವಚ್ಛಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ. ಇನ್ನಾದರೂ ಸ್ವಚ್ಛತೆಗೆ ನಗರಸಭೆ ಆಡಳಿತ ಕ್ರಮಕೈಗೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ಹರಡದ ರೀತಿ ಮುಂಜಾಗೃತೆ ಕ್ರಮ ಕೈಗೊಳ್ಳಲಿ ಎಂಬುದು ಜನತೆಯ ಒತ್ತಾಯವಾಗಿದೆ.

ನಗರಸಭೆಯ ನಿರ್ಲಕ್ಷ್ಯದಿಂದ ಚರಂಡಿ ಕುಸಿದ್ದು ಕಲುಷಿತ ನೀರು ಸರಾಗವಾಗಿ ಸಾಗದೆ ರಸ್ತೆ ಮೇಲೆ ಹರಿಯುತ್ತಿದ್ದು ಈ ಕಲುಷಿತ ನೀರು ಬೀರುವ ದುರ್ವಾಸನೆಯನ್ನ ಸಹಿಸಿಕೊಂಡೇ ನಗರದ ಜನತೆ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟವರು ಕ್ರಮಕೈಗೊಳ್ಳಲಿ.ರೇಖಾ, ಶಿಕ್ಷಕಿ ನಗರದ ಮಧ್ಯಭಾಗದಲ್ಲೇ ಸಾವಿರಾರು ಮಂದಿ ಓಡಾಡುತ್ತಾರೆ. ಇಂತಹ ಜಾಗದಲ್ಲಿ ಚರಂಡಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ ಎಂದರೆ ಇದು ನಾಚಿಕೆಗೇಡಿನ ಸಂಗತಿ. ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕು.

ಬಸವರಾಜ್, ನಗರವಾಸಿ