ಕಲುಷಿತ ನೀರು: ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಐತಿಹಾಸಿಕ ತಾವರೆಕೆರೆ

| Published : Mar 22 2024, 01:05 AM IST

ಕಲುಷಿತ ನೀರು: ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಐತಿಹಾಸಿಕ ತಾವರೆಕೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ಪುರಸಭೆ ವ್ಯಾಪ್ತಿಯ ಬೈಚನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿ ಅಸ್ತಿತ್ವದಲ್ಲಿರುವ ಸುಮಾರು 3.84 ಎಕರೆ ವಿಸ್ತೀರ್ಣದ ಕೆರೆ ಸಂಪೂರ್ಣ ಪೊದೆ ತುಂಬಿದ ಸ್ಥಿತಿಯಲ್ಲಿದೆ. ಕೆರೆಯಲ್ಲಿರುವ ನೀರು ಕಲುಷಿತಗೊಂಡು ಪಾಚಿ ಕಟ್ಟುತ್ತಿರುವ ಆತಂಕಕಾರಿ ಬೆಳವಣಿಗೆ ಗೋಚರಿಸಿದೆ.

ಕೀರ್ತನಾ

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ -ಮಡಿಕೇರಿ ರಸ್ತೆ ಅಂಚಿನಲ್ಲಿರುವ ಐತಿಹಾಸಿಕ ತಾವರೆಕೆರೆ ಇದೀಗ ಮೂಲ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ.

ಕುಶಾಲನಗರ ಪುರಸಭೆ ವ್ಯಾಪ್ತಿಯ ಬೈಚನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಒತ್ತಿನಲ್ಲಿ ಅಸ್ತಿತ್ವದಲ್ಲಿರುವ ಸುಮಾರು 3.84 ಎಕರೆ ವಿಸ್ತೀರ್ಣದ ಕೆರೆ ಸಂಪೂರ್ಣ ಪೊದೆ ತುಂಬಿದ ಸ್ಥಿತಿಯಲ್ಲಿದೆ. ಕೆರೆಯಲ್ಲಿರುವ ನೀರು ಕಲುಷಿತಗೊಂಡು ಪಾಚಿ ಕಟ್ಟುತ್ತಿರುವ ಆತಂಕಕಾರಿ ಬೆಳವಣಿಗೆ ಗೋಚರಿಸಿದೆ.

ಒಂದು ಕಾಲದಲ್ಲಿ ಕೆರೆ ತುಂಬಾ ಬಣ್ಣದ ತಾವರೆಗಳನ್ನೇ ಹೊಂದಿದ್ದು, ಈಗ ಪಾಚಿ ಕಟ್ಟಿ ನಿಂತಿರುವ ಕೆರೆ ದಾರಿಹೋಕರಿಗೆ ತನ್ನ ಗತ ಕಾಲದ ದರ್ಶನ ನೀಡಲು ಸಾಧ್ಯವೇ ಇಲ್ಲ ಎನ್ನುವಂತಹ ದುಃಸ್ಥಿತಿಗೆ ತಲುಪಿದೆ.

ಒತ್ತುವರಿ ಸರ್ವೇ:

ಈ ಹಿಂದೆ ಒತ್ತುವರಿಯಾಗಿದ್ದ ಕೆರೆಯನ್ನು ಸ್ಥಳೀಯ ಆಡಳಿತದಿಂದ ಹಲವು ಬಾರಿ ಸರ್ವೇ ಮಾಡಿಸುವ ಮೂಲಕ ಕೆರೆಯ ವ್ಯಾಪ್ತಿಯ ಮೂಲ ಕಂಡುಹಿಡಿಯುವ ನಿಟ್ಟಿನಲ್ಲಿ ಹೈಕೋರ್ಟ್ ಹಿರಿಯ ವಕೀಲ ಹಾಗೂ ಸಮಾಜ ಸೇವಕ ಎನ್‌.ಪಿ. ಅಮೃತೇಶ್ ಅವರು ಬಹುತೇಕ ಯಶಸ್ವಿಯಾಗಿದ್ದರು.

ಇನ್ನೊಂದೆಡೆ ಕೆರೆಯ ಹಿಂಭಾಗದಲ್ಲಿ ಕೆಲವು ಬಡಾವಣೆಯ ಮಾಲೀಕರು ಅಕ್ರಮವಾಗಿ ನೂರಾರು ಲೋಡುಗಳಷ್ಟು ಪ್ರಮಾಣದ ಮಣ್ಣು ತುಂಬಿ ಕೆರೆಯನ್ನು ಮುಚ್ಚಿ ನಿಯಮಬಾಹಿರ ರಸ್ತೆಯನ್ನಾಗಿ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಸ್ಥಳೀಯ ಪರಿಸರ ರಕ್ಷಣಾ ಬಳಗದ ಪ್ರಮುಖರು ಸಂಬಂಧಿಸಿದ ಇಲಾಖೆಗಳಿಗೆ ಎಷ್ಟು ದೂರು ನೀಡಿದರೂ ಕೆರೆ ಸಂರಕ್ಷಿಸುವ ನಿಟ್ಟಿನಲ್ಲಿ ಶಾಶ್ವತವಾದ ಯಾವುದೇ ಯೋಜನೆ ರೂಪಿಸದಿರುವುದು ಕಂಡುಬಂದಿದೆ.

ಗುಂಡೂರಾವ್ ಬಡಾವಣೆ ಸಮೀಪದಲ್ಲಿರುವ ಈ ಬೃಹತ್ ಕೆರೆ ಅಂಚಿನಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಮಣ್ಣು ತುಂಬಿ ಆಗಾಗ್ಗೆ ಕೆರೆಯ ಮೂಲ ಸ್ವರೂಪವನ್ನು ಬದಲಾಯಿಸುತ್ತಿರುವುದು ಪ್ರಸಕ್ತ ಬೆಳವಣಿಗೆಯಾಗಿದೆ.

2018 ಅವಧಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಶ್ರೀ ವಿದ್ಯಾ ಅವರು ಕೆರೆಯ ಒತ್ತುವರಿ ಯನ್ನು ಗಮನಿಸಿ ತಕ್ಷಣ ಸರ್ವೇ ಮಾಡುವ ಮೂಲಕ ಕೆರೆಗೆ ತುಂಬಿದ ಮಣ್ಣು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ಇತ್ತೀಚೆಗೆ ಮತ್ತೆ ಕೆರೆಗೆ ಅಕ್ರಮವಾಗಿ ಮಣ್ಣು ತುಂಬಿದ ಸಂದರ್ಭ ಸ್ಥಳೀಯ ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ಅವರ ಗಮನಕ್ಕೆ ತಂದ ಕೂಡಲೇ ಅಕ್ರಮವಾಗಿ ಕೆರೆಗೆ ತುಂಬಿದ ಮಣ್ಣನ್ನು ತೆರೆವುಗೊಳಿಸಲು ಕ್ರಮ ಕೈಗೊಂಡಿದ್ದರು.-----

ಕೆರೆಯ ಸಂರಕ್ಷಣೆ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೆರೆಗೆ ನೇರವಾಗಿ ಕಲುಷಿತ ನೀರು ಬರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮೀಪದಲ್ಲಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು.-ಕೃಷ್ಣಪ್ರಸಾದ್‌, ಪುರಸಭೆ ಮುಖ್ಯಾಧಿಕಾರಿ.--------ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಬಾರಿ ಸಭೆಗಳಲ್ಲಿ ಚರ್ಚೆಯಾಗಿದೆ. ಆದರೂ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ರೀತಿಯ ಕ್ರಿಯಾ ಯೋಜನೆಗಳನ್ನು ರೂಪಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತಾಳಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ.-ವೈಶಾಖ್‌, ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ.----------

ಕೆರೆಯನ್ನು ಸ್ವಚ್ಛಗೊಳಿಸಿ ಸುತ್ತಲೂ ಆವರಣ ಬೇಲಿ ನಿರ್ಮಿಸುವುದರೊಂದಿಗೆ ಕೆರೆಯ ಅಭಿವೃದ್ಧಿ ಕಾಮಗಾ ಕೂಡಲೇ ಮಾಡಬೇಕು. ಕೆರೆಯ ಸುತ್ತಲೂ ಕಲ್ಲು ಬೆಂಚುಗಳನ್ನು ಅಳವಡಿಸಿದಲ್ಲಿ ವಾಯು ವಿಹಾರ ತೆರಳುವ ನಾಗರಿಕರಿಗೆ ಅನುಕೂಲ.-ಡಿ.ಆರ್‌.ಸೋಮಶೇಖರ್‌, ಕಾವೇರಿ ಪರಿಸರ ರಕ್ಷಣಾ ಬಳಗದ ಪ್ರಮುಖ.