ಸಾರಾಂಶ
ಹರಿಹರದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಅಧಿಕಾರಿಗಳು ಗಣಪತಿ ಮಾರಾಟಗಾರರನ್ನು ಭೇಟಿ ಮಾಡಿ ಪಿಒಪಿ ಮೂರ್ತಿ ತಯಾರಿಸಿದಂತೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಹರಿಹರ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಾವಣಗೆರೆ ಜಿಲ್ಲಾ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿ ಗಣಪತಿ ಮಾರಾಟಗಾರರನ್ನು ಭೇಟಿ ಮಾಡಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣಪತಿ ತಯಾರಿಸಿದಂತೆ ಸೂಚನೆ ನೀಡಿ, ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದರು.ಜಿಲ್ಲಾ ನಿಯಂತ್ರಣ ಮಂಡಳಿ ಆರ್.ಎಸ್. ಪುರಾಣಿಕ್ ಮತ್ತು ವಿನಯ್ ರವರು ಪೌರಾಯುಕ್ತ ಪಿ.ಸುಬ್ರಹ್ಮಣ್ಯ ಶ್ರೇಷ್ಠಿ ಜೊತೆ ನಗರಸಭಾ ಸಿಬ್ಬಂದಿಯೊಂದಿಗೆ ಶುಕ್ರವಾರ ನಗರದ ಮುಖ್ಯ ರಸ್ತೆ, ಶಿವಮೊಗ್ಗ ರಸ್ತೆ ಹಾಗೂ ಕುಂಬಾರ ಓಣಿ ಮುಂತಾದ ಕಡೆ ಸಂಚರಿಸಿ ಗಣಪತಿ ತಯಾರಕರು ಹಾಗೂ ಮಾರಾಟಗಾರರನ್ನು ಭೇಟಿಯಾಗಿ 500ಕ್ಕೂ ಹೆಚ್ಚು ಗಣಪತಿ ಮೂರ್ತಿ ಪರಿಶೀಲಿಸಿ ಪಿಒಪಿಯಿಂದ ತಯಾರಿಸದಂತೆ ಹಾಗೂ ಮಾರಾಟ ಮಾಡದಂತೆ ರಾಸಾಯನಿಕ ಉಳ್ಳ ಬಣ್ಣಗಳ ಲೇಪನ ಮಾಡದಂತೆ ಕೇವಲ ಪರಿಸರ ಸ್ನೇಹಿ ಬಣ್ಣ ಲೇಪಿಸುವಂತೆ ತಾಕೀತು ಮಾಡಿದರು.
ಏಕ ಬಳಕೆ ಪ್ಲಾಸ್ಟಿಕ್ ಮಾರುತ್ತಿದ್ದ ಕೆಲವು ಮಳಿಗೆಗಳಿಗೆ ಭೇಟಿ ನೀಡಿ, ತಲಾ ಎರಡು ಅಂಗಡಿಗೆ ₹5000 ಒಟ್ಟು ₹10,000 ದಂಡ ವಿಧಿಸಿದರು. ನಗರಸಭೆಯಿಂದ ಗಣೇಶ ವಿಸರ್ಜನೆಗಾಗಿ ಎರಡು ಕಡೆ ಸ್ಥಳ ನಿಗದಿ ಪಡಿಸಿದ್ದು, ಸಾರ್ವಜನಿಕ ದೊಡ್ಡ ಗಣಪತಿಗಳನ್ನು ಎಸ್.ಎಸ್.ಕೆ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಮೆಟ್ಟಲುಹೊಳೆಯಲ್ಲಿ ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಚಿಕ್ಕಪುಟ್ಟ ಗಣೇಶ ಮೂರ್ತಿಗಳನ್ನು ಶ್ರೀ ರಾಘವೇಂದ್ರ ಮಠದ ಬಳಿ ವಿಸರ್ಜನೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸರತಿಯಂತೆ ತಮ್ಮ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದರು.ಈ ಬಾರಿ ತುಂಗಭದ್ರಾ ನದಿಯು ತುಂಬಿ ಹರಿಯುತ್ತಿದ್ದು, ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಗಣಪತಿಗಳನ್ನು ವಿಸರ್ಜಿಸಬೇಕು. ಯಾವುದೇ ರೀತಿ ಮದ್ಯಪಾನ, ಇತರೆ ಮಾದಕ ವಸ್ತು ಸೇವಿ ಸೇವನೆ ಮಾಡಿ ವಿಸರ್ಜನೆಗೆ ಭಾಗವಹಿಸಬಾರದು ಇದರಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.
ನಗರ ಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರವಿಪ್ರಕಾಶ್, ಎ.ಸಂತೋಷ್ ಕುಮಾರ್ ಜೊತೆಗೆ ಸಿಬ್ಬಂದಿ ದಾಳಿ ವೇಳೆ ಭಾಗವಹಿಸಿದ್ದರು.