ಜೀವನದಿ ಕಾವೇರಿ ನೀರು ಮಾಲಿನ್ಯ ತಡೆಗೆ ಶಾಶ್ವತ ಮಾರ್ಗೋಪಾಯಗಳ ಕುರಿತು ತಾಂತ್ರಿಕ ಸಮಿತಿಯೊಂದು 2024ರ ಜುಲೈ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಇದುವರೆಗೂ ವರದಿಯಲ್ಲಿರುವ ಉಲ್ಲೇಖಿಸಿರುವ ಅಂಶಗಳ ಕುರಿತು ಕ್ರಮ ಕೈಗೊಳ್ಳದಿರುವುದು ಜೀವನದಿ ಕಾವೇರಿಯ ಮೂಲ ಅಸ್ತಿತ್ವಕ್ಕೆ ಧಕ್ಕೆ ತಂದೊಡ್ಡುತ್ತಿದೆ.

ಕುಶಾಲನಗರ: ಜೀವನದಿ ಕಾವೇರಿ ನೀರು ಮಾಲಿನ್ಯ ತಡೆಗೆ ಶಾಶ್ವತ ಮಾರ್ಗೋಪಾಯಗಳ ಕುರಿತು ತಾಂತ್ರಿಕ ಸಮಿತಿಯೊಂದು 2024ರ ಜುಲೈ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಇದುವರೆಗೂ ವರದಿಯಲ್ಲಿರುವ ಉಲ್ಲೇಖಿಸಿರುವ ಅಂಶಗಳ ಕುರಿತು ಕ್ರಮ ಕೈಗೊಳ್ಳದಿರುವುದು ಜೀವನದಿ ಕಾವೇರಿಯ ಮೂಲ ಅಸ್ತಿತ್ವಕ್ಕೆ ಧಕ್ಕೆ ತಂದೊಡ್ಡುತ್ತಿದೆ.

ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ನದಿಗೆ ಕೊಡಗಿನ ವಿವಿಧ ಭಾಗಗಳು ಹಾಗೂ ಮೈಸೂರು, ಮಂಡ್ಯ ಪಟ್ಟಣಗಳ ಕಾರ್ಖಾನೆಗಳ ಕೊಳಚೆ ನೀರನ್ನು ನೇರವಾಗಿ ಹರಿಸುತ್ತಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೈಗಾರಿಕಾ ಪ್ರದೇಶದಿಂದ ಶುದ್ಧೀಕರಿಸದ ರಾಸಾಯನಿಕ ಮಿಶ್ರಿತ ನೀರಿನಿಂದ ನೊರೆ ಸೃಷ್ಟಿಯಾಗಿ ಜಲಚರಗಳಿಗೆ ಮಾರಣಾಂತಿಕವಾಗಿ ಹಾನಿಯಾಗುತ್ತಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2023ರಲ್ಲಿ ನದಿಗಳ ಮಾಲಿನ್ಯದ ಬಗ್ಗೆ ವರದಿ ಬಿಡುಗಡೆ ಮಾಡಿತ್ತು.

ವರದಿ ಪ್ರಕಾರ ಕಾವೇರಿ ನದಿ ಪ್ರತಿ ಲೀಟರ್ ನೀರಿನಲ್ಲಿ ಕಲುಷಿತ ಅಂಶಗಳ ಪ್ರಮಾಣವೇ ಅಧಿಕವಾಗಿದ್ದು, ಇದರಿಂದ ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗಲಿದೆ ಎಂದು ತಿಳಿಸಲಾಗಿತ್ತು.

ಈ ನಿಟ್ಟಿನಲ್ಲಿ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚಿಸಿ ಕೈಗಾರಿಕಾ ಪ್ರದೇಶ ಯುಜಿಡಿ ಮತ್ತು ವಿವಿಧ ಪ್ರದೇಶಗಳಿಂದ ಬರುವ ಮಲಿನ ನೀರು ಕಾವೇರಿ ನದಿ ಸೇರಿದಂತೆ ವಿವಿಧ ಇಲಾಖೆಯ ತಾಂತ್ರಿಕ ಪರಿಣಿತರ ತನಿಖಾ ತಂಡ ರಚಿಸಿ ಅಧ್ಯಯನ ವರದಿ ಪಡೆದು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಅಲ್ಲದೆ ಹಿರಿಯ ಅಧಿಕಾರಿಗಳನ್ನು ಒಳಗೊಂಡಂತೆ ತಜ್ಞರ ಸಮಿತಿ ರಚಿಸಿ ಹಲವು ಸಭೆಗಳನ್ನು ನಡೆಸಿ ಕಾವೇರಿ ನದಿಯ ಪಾತ್ರಗಳಿಗೆ ಒಳಪಟ್ಟ ಜಿಲ್ಲೆಗಳ ಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಒಳಗೊಂಡ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.ಅಲ್ಲದೆ ಕಾವೇರಿ ನದಿ ಪಾತ್ರದಲ್ಲಿ ಬರುವ ಮಹಾನಗರ ಪಾಲಿಕೆ ನಗರಸಭೆ ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರಬರಾಜು ಮಾಡುತ್ತಿರುವ ನೀರಿನ ಸಾಮರ್ಥ್ಯ ನೀರು ಶುದ್ಧೀಕರಣ ಘಟಕಗಳ ವಿವರ ತ್ಯಾಜ್ಯ ಮತ್ತು ಕೊಳಚೆ ಶುದ್ಧೀಕರಣ ಘಟಕಗಳ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಲಾಗಿತ್ತು. ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ ಸುಮಾರು 123 ಹಳ್ಳಿಗಳಿದ್ದು ಇಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ಸಂಸ್ಕರಣ ಘಟಕ ಇರುವುದಿಲ್ಲ. ಗ್ರಾಮಗಳಿಂದ ಉತ್ಪತ್ತಿಯಾಗುವ ಕೊಳಚೆ ನೀರು, ನೇರವಾಗಿ ಕಾವೇರಿ ನದಿ ಸೇರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ನೀರು ಸಿ. ವರ್ಗಕ್ಕೆ: 2023 -24 ನೇ ಸಾಲಿನ ವಿಶ್ಲೇಷಣಾ ವರದಿಗಳ ಅನ್ವಯ ನದಿ ನೀರನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾಥಮಿಕ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ವರ್ಗೀಕರಿಸಲಾಗಿದ್ದು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನೀರಿನ ಗುಣಮಟ್ಟ ಜಿಲ್ಲಾ ವ್ಯಾಪ್ತಿಯಲ್ಲಿ ಬಿ ಮತ್ತು ಸಿ ವರ್ಗಕ್ಕೆ ವರ್ಗೀಕರಿಸಲಾಗಿದೆ. ರಾಜ್ಯ ಸರ್ಕಾರ ತಕ್ಷಣ ಈ ಬಗ್ಗೆ ಕಾಳಜಿ ವಹಿಸಿ ಜೀವನದಿ ಕಾವೇರಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಹಾಗೂ ಮಾಲಿನ್ಯ ತಡೆಗೆ ಮಾರ್ಗೋಪಾಯಗಳನ್ನು ಕಂಡುಹಿಡಿಯುವ ಯೋಜನೆಗಳನ್ನು ರೂಪಿಸಲು ತಕ್ಷಣ ಕಾರ್ಯೊನ್ಮುಖವಾಗಬೇಕಾಗಿದೆ.