ವಿದ್ಯಾರ್ಥಿಯ ಸಾವಿಗೆ ಉಪನ್ಯಾಸಕರು ಕರೆದು ಬೈದು ಬುದ್ಧಿವಾದ ಹೇಳಿದ್ದೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಬಳ್ಳಾರಿ: ಇಲ್ಲಿನ ಸಂಜಯಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಯೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತನನ್ನು ಬಳ್ಳಾರಿಯ ಗುಗ್ಗರಹಟ್ಟಿ ಪ್ರದೇಶದ ಅರವಿಂದ್ (17) ಎಂದು ತಿಳಿದುಬಂದಿದೆ. ವಿದ್ಯಾರ್ಥಿಯ ಸಾವಿಗೆ ಉಪನ್ಯಾಸಕರು ಕರೆದು ಬೈದು ಬುದ್ಧಿವಾದ ಹೇಳಿದ್ದೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.ಮಂಗಳವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ಅರವಿಂದ ಅವರ ಪೋಷಕರನ್ನು ಕರೆಸಿದ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಅಂಬರೀಶ, ನಿಮ್ಮ ಮಗ ಹೀಗೆ ಗಲಾಟೆ ಮಾಡಿದರೆ ಕಾಲೇಜಿನಲ್ಲಿರಿಸಿಕೊಳ್ಳಲು ಸಾಧ್ಯವಿಲ್ಲ. ಇದೇ ಕೊನೆ. ಮತ್ತೊಮ್ಮೆ ಗಲಾಟೆ ಮಾಡಿದರೆ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿ ಅರವಿಂದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತ ಅರವಿಂದ್ ತಂದೆ ಹನುಮಂತ ರೆಡ್ಡಿ ಅವರು ಎಪಿಎಂಸಿ ಯಾರ್ಡ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಕಾಲೇಜಿನಲ್ಲಿ ಬುಧವಾರ ಜರುಗಿದ ಅರವಿಂದ ಶ್ರದ್ಧಾಂಜಲಿ ಸಭೆಯ ಬಳಿಕ ರೊಚ್ಚಿಗೆದ್ದ ವಿದ್ಯಾರ್ಥಿಗಳು, ವಿದ್ಯಾರ್ಥಿಯ ಸಾವಿಗೆ ಉಪನ್ಯಾಸಕರು ಹಾಗೂ ಕಾಲೇಜು ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿ ಕಾಲೇಜಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಆಡಳಿತ ಮಂಡಳಿಯವರು ಸ್ಥಳಕ್ಕೆ ಆಗಮಿಸಬೇಕು. ವಿದ್ಯಾರ್ಥಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.ಈ ಹಿಂದೆ ವಿದ್ಯಾರ್ಥಿ ಅರವಿಂದ ಕಾಲೇಜಿನಲ್ಲಿ ಗಲಾಟೆ ಮಾಡಿಕೊಂಡಿದ್ದ. ಪೋಷಕರನ್ನು ಕರೆಸಿ ವಾರ್ನಿಂಗ್ ಕೊಟ್ಟು ಕಳುಹಿಸಲಾಗಿತ್ತು. ಇದು ಎರಡನೇ ಬಾರಿಗೆ ಮತ್ತೆ ಜಗಳ ಮಾಡಿಕೊಂಡಿದ್ದರಿಂದ ಶಾಲೆಯ ಉಪನ್ಯಾಸಕರು ಬೈದು ಬುದ್ಧಿವಾದ ಹೇಳಿದ್ದರು ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿ ಸಾವಿಗೆ ಕಾಲೇಜು ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.