ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ತೆಮ್ಮಿನಾಳ ಗ್ರಾಮದ ಮುದಿಯಪ್ಪ ದೇವಪ್ಪ ಅವರು 2.22 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆದು ₹4 ಲಕ್ಷ ಆದಾಯ ಗಳಿಸಿದ್ದಾರೆ.
ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ಬರದ ಬೇಗೆ, ಮಳೆ ಕೊರತೆಯಿಂದ ಒಣ ಬೇಸಾಯದ ಬೆಳೆಗಳು ಕೈಕೊಡುತ್ತಿರುವ ನಡುವೆಯೇ ಇಲ್ಲಿಯ ರೈತರೊಬ್ಬರಿಗೆ ದಾಳಿಂಬೆ ತೋಟ ಕೈಹಿಡಿದಿದೆ.ತೋಟಗಾರಿಕೆ ಇಲಾಖೆಯ ಯೋಜನೆ ಹಾಗೂ ಅಧಿಕಾರಿಗಳ ಮಾರ್ಗದರ್ಶನ ಪಡೆದು ದಾಳಿಂಬೆ ಬೆಳೆಸಿ ಸುಮಾರು ₹4 ಲಕ್ಷ ಆದಾಯ ಗಳಿಸಿದ್ದಾರೆ.
ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ತೆಮ್ಮಿನಾಳ ಗ್ರಾಮದ ಮುದಿಯಪ್ಪ ದೇವಪ್ಪ ಅವರ ಯಶೋಗಾಥೆ ಇದು. ಈ ಹಿಂದೆ ತಮ್ಮ ಜಮೀನಿನಲ್ಲಿ ತೊಗರಿ, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ವಿವಿಧ ಮಳೆ ಆಧಾರಿತ ಒಣ ಬೇಸಾಯದ ಬೆಳೆಗಳನ್ನು ಬೆಳೆಯುತ್ತಿದ್ದರು. ಮಳೆ ಕೊರತೆಯಿಂದ ಇಳುವರಿ ಹಾಗೂ ಆದಾಯ ಸೀಮಿತವಾಗಿದ್ದು, ವರ್ಷಕ್ಕೆ ₹40–50 ಸಾವಿರದಷ್ಟೇ ಆದಾಯ ದೊರೆಯುತ್ತಿತ್ತು.₹40 ಸಾವಿರದಿಂದ ₹4 ಲಕ್ಷದತ್ತ: ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ಮುದಿಯಪ್ಪ ಅವರು 2024-25ನೇ ಸಾಲಿನಲ್ಲಿ 2.22 ಎಕರೆ ಜಮೀನಿನಲ್ಲಿ ದಾಳಿಂಬೆ ತೋಟ ನಿರ್ಮಿಸಿದರು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಹಾಗೂ ಹಿರಿಯ ಸಹಾಯಕ ನಿರ್ದೇಶಕ ಶಿವಯೋಗಪ್ಪ ಅವರ ಮಾರ್ಗದರ್ಶನದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ನೆರವು ಪಡೆದು ತೋಟ ಅಭಿವೃದ್ಧಿಪಡಿಸಿದರು.
2025-26ನೇ ಸಾಲಿನಲ್ಲಿ ಯೋಜನೆಯಡಿ ₹43,200 ಸಹಾಯಧನ ದೊರೆತಿದ್ದು, ತೋಟ ಅಭಿವೃದ್ಧಿಗೆ ಆರ್ಥಿಕ ನೆರವಾಯಿತು. ಇಲಾಖೆಯ ಮಾರ್ಗದರ್ಶನದಂತೆ ವೈಜ್ಞಾನಿಕ ಬೆಳೆ ನಿರ್ವಹಣೆ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ಪರಿಣಾಮ ಉತ್ತಮ ಗುಣಮಟ್ಟದ ದಾಳಿಂಬೆ ಇಳುವರಿ ದೊರೆತಿದೆ. ಇದರಿಂದ ಸುಮಾರು ₹4 ಲಕ್ಷ ಆದಾಯ ಗಳಿಸಿದ್ದಾರೆ.ಸಹಕಾರಿ: ಈ ಹಿಂದೆ ಮಳೆ ಆಧಾರಿತ ಒಣ ಬೇಸಾಯದ ಬೆಳೆಗಳನ್ನು ಬೆಳೆಯುತ್ತಿದ್ದೆ. ಹೆಚ್ಚಿನ ಆದಾಯ ಸಿಗುತ್ತಿರಲಿಲ್ಲ. ಇಲಾಖೆಯ ಸಹಾಯಧನ ಹಾಗೂ ಅಧಿಕಾರಿಗಳ ಮಾರ್ಗದರ್ಶನದಿಂದ ದಾಳಿಂಬೆ ತೋಟ ಬೆಳೆಸಲು ಅನುಕೂಲವಾಯಿತು. ಉತ್ತಮ ಇಳುವರಿ ಪಡೆದು ₹4 ಲಕ್ಷ ಆದಾಯ ಗಳಿಸಿದ್ದೇನೆ. ಇಲಾಖೆಯ ಯೋಜನೆ ಆರ್ಥಿಕವಾಗಿ ತುಂಬಾ ಸಹಕಾರಿಯಾಗಿದೆ ಎಂದು ರೈತ ಮುದಿಯಪ್ಪ ತೆಮ್ಮಿನಾಳದ ಹೇಳಿದರು.ಉತ್ತಮ ಇಳುವರಿ: ತೋಟಗಾರಿಕೆ ಇಲಾಖೆಯ ಯೋಜನೆಗಳ ಸದುಪಯೋಗ ಪಡೆದು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ರೈತರು ಉತ್ತಮ ಇಳುವರಿ ಹಾಗೂ ಹೆಚ್ಚಿನ ಆದಾಯ ಗಳಿಸಬಹುದು. ಮುದಿಯಪ್ಪ ಅವರ ದಾಳಿಂಬೆ ತೋಟ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಿವಯೋಗಪ್ಪ ಹೇಳಿದರು.