ದಾಳಿಂಬೆಗೆ ರೋಗ: ಆತಂಕದಲ್ಲಿ ಬೆಳೆಗಾರ

| Published : Oct 19 2024, 12:26 AM IST

ಸಾರಾಂಶ

ಜಿಲ್ಲೆಯ ಚಿಕ್ಕಬಳ್ಳಾಪುರ,ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ ಪ್ರದೇಶದಲ್ಲಿ ಹೆಚ್ಚುದಾಳಿಂಬೆ ಬೆಳೆಯಲಾಗಿದೆ. ವಿಶೇಷವೆಂದರೆ ಉತ್ಕೃಷ್ಟ ದರ್ಜೆ ದಾಳಿಂಬೆ ಬೆಳೆಯುವ ಹೆಗ್ಗಳಿಕೆ ಜಿಲ್ಲೆಗಿದೆ. ಈ ಬಾರಿ ಒಟ್ಟು ಬೆಳೆಗಾರರ ಪೈಕಿ ಶೇ. 50ರಷ್ಟು ಬೆಳೆಗಾರರು ಹವಾಮಾನದ ವೈಪರೀತ್ಯದಿಂದಾಗಿ ಬೆಳೆಗೆ ರೋಗ ತಗುಲಿ ನಷ್ಟ ಅನುಭವಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ರೈತರು ಹೈರಣಾಗಿದ್ದಾರೆ. ಶ್ರೀಮಂತ ಬೆಳೆ ಎಂದೆ ಖ್ಯಾತಿಯಾಗಿದ್ದ ದಾಳಿಂಬೆಯನ್ನು ಸಕಾಲಕ್ಕೆ ಕಟಾವು ಮಾಡಲಾಗದೆ ತೋಟದಲ್ಲೆ ಕೊಳೆಯುತ್ತಿವೆ. ನಿರಂತರ ಮಳೆಯಿಂದ ದಾಳಿಂಬೆಗೆ ಬ್ಯಾಕ್ಟೀರಿಯಾದ ಕೊಳೆತ (ಎಣ್ಣೆ ಚುಕ್ಕೆ) ರೋಗದ ಆತಂಕ ದಾಳಿಂಬೆ ಬೆಳೆಗಾರರನ್ನು ಕಾಡುತ್ತಿದೆ. ಮೂರು ತಿಂಗಳಿಂದಲೂ ಖುಷಿಯಲ್ಲಿದ್ದ ದಾಳಿಂಬೆ ಬೆಳೆಗಾರರು ಈಗ ಕ್ರಮೇಣ ಮಾರುಕಟ್ಟೆಯಲ್ಲಿ ದಾಳಿಂಬೆ ದರ ಕುಸಿಯುತ್ತಿರುವ ಕಾರಣ ಆತಂಕದಲ್ಲಿದ್ದಾರೆ.

ದಾಳಿಂಬೆ ಬೆಳೆಗೆ ಮೊದಲ ಸೀಸನ್ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬರುತ್ತದೆ. ಸಾಮಾನ್ಯವಾಗಿ, ರಫ್ತು ಋತುವು ಪ್ರತಿ ವರ್ಷ ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್‌ನಲ್ಲಿ ಪೂರ್ಣಗೊಳ್ಳುತ್ತದೆ. ಈ ಭಾರಿಯ ಮೊದಲ ಸೀಸನ್ ನಲ್ಲಿ ಹೇರಳವಾಗಿ ಬೆಳೆ ಬಂದಿದ್ದರಿಂದ ಮೊದಲ ಮೂರು ತಿಂಗಳು ರೈತರಿಗೆ ಪ್ರತಿ ಕೆ.ಜಿಗೆ 160 ರಿಂದ 170 ರೂ. ಸಿಕ್ಕಿದ್ದು ಸಂತಸ ತಂದಿತ್ತು.

ಈಗ ಬೆಲೆ ದಿಢೀರ್‌ ಕುಸಿತವಾಗಿರುವುದು ಆತಂಕ ಸೃಷ್ಟಿಸಿದ ಬೆನ್ನಲ್ಲೆ ನಿರಂತರ ಮಳೆಯಿಂದಾಗಿ ದಾಳಿಂಬೆಯನ್ನು ವ್ಯಾಪಾರಸ್ಥರು ಖರೀದಿ ಮಾಡುತ್ತಿಲ್ಲ. ಇದರಿಂದಾಗಿ ದಾಳಿಂಬೆ ತೋಟದಲ್ಲೆ ಕೊಳೆಯುತ್ತಿದೆ. ಜೊತೆಗೆ ಫಸಲಿಗೆ ಬ್ಯಾಕ್ಟೀರಿಯಾದ ಕೊಳೆ (ಎಣ್ಣೆ ಚುಕ್ಕೆ) ರೋಗದ ಭೀತಿ ಕಾಡುತ್ತಿದೆ, ಎಣ್ಣೆ ಚುಕ್ಕೆ ರೋಗ ಬಂದರೆ ಶೇ 50ಕ್ಕಿಂತ ಇಳುವರಿ ಕುಸಿತವಾಗುತ್ತದೆ. ಜಿಲ್ಲೆಯ ಚಿಕ್ಕಬಳ್ಳಾಪುರ,ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ ಪ್ರದೇಶದಲ್ಲಿ ಹೆಚ್ಚುದಾಳಿಂಬೆ ಬೆಳೆಯಲಾಗಿದೆ. ವಿಶೇಷವೆಂದರೆ ಉತ್ಕೃಷ್ಟ ದರ್ಜೆ ದಾಳಿಂಬೆ ಬೆಳೆಯುವ ಹೆಗ್ಗಳಿಕೆ ಜಿಲ್ಲೆಗಿದೆ. ಈ ಬಾರಿ ಒಟ್ಟು ಬೆಳೆಗಾರರ ಪೈಕಿ ಶೇ. 50ರಷ್ಟು ಬೆಳೆಗಾರರು ಹವಾಮಾನದ ವೈಪರೀತ್ಯದಿಂದಾಗಿ ಬೆಳೆಗೆ ತಗುಲಿದ ದುಂಡಾಣು ಮಚ್ಚೆ ಮತ್ತು ಎಣ್ಣೆ ಚುಕ್ಕೆರೋಗದಿಂದಾಗಿ ಬೆಳೆನಷ್ಟ ಅನುಭವಿಸಲಿದ್ದಾರೆ.

ಒಂದು ಎಕರೆ ದಾಳಿಂಬೆ ಬೆಳೆಯಲು ಸುಮಾರು 5 ರಿಂದ 6 ಲಕ್ಷದವರೆಗೂ ಖರ್ಚಾಗುತ್ತದೆ. ನಾಲ್ಕರಿಂದ ಐದು ಟನ್ ದಾಳಿಂಬೆ ಬರುತ್ತದೆ. ಕಳೆದ ತಿಂಗಳು ಉತ್ತಮ ಬೆಲೆ ಇತ್ತು. ಆದರೆ ಈಗ ಬೆಲೆ ಕುಸಿತವಾಗಿದೆ. ಹೋದಷ್ಟು ಬೆಲೆಗೆ ಹೋಗಲಿ ಕೊಡೊಣವೆಂದರೆ ಕೊಳ್ಳುವವರೆ ಇಲ್ಲಾ ಎನ್ನುತ್ತಾರೆ ದಾಳಿಂಬೆ ಬೆಳೆಗಾರ ಆನಂದ್.

ಮೂರು ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದೇನೆ. ಸುಮಾರು 15 ಲಕ್ಷ ಖರ್ಚಾಗಿದೆ. ಸರ್ಕಾರ ಕೂಡಲೆ ದಾಳಿಂಬೆ ಬೆಳೆಗಾರರ ನೆರವಿಗೆ ಬರಬೇಕು ಎನ್ನುತ್ತಾರೆ ದಾಳಿಂಬೆ ಬೆಳೆಗಾರ ಗೋಪಾಲಾಚಾರ್.