ಸಾರಾಂಶ
ಐಕಳದ ಪೊಂಪೈ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಾದಕ ವಸ್ತುಗಳು ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೀವನದ ಉದ್ದಕ್ಕೂ ಧೂಮಪಾನ ಮಾಡುವುದರಿಂದ ವಿವಿಧ ರೀತಿಯ ಕ್ಯಾನ್ಸರ್ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದ ವ್ಯಕ್ತಿಯು ತನ್ನ ಮೇಲಿನ ಸ್ವಯಂ ನಿಯಂತ್ರಣವನ್ನು ಕಳೆದುಕೊಂಡು ಅನುಚಿತವಾಗಿ ವರ್ತಿಸಿ ಸಮಾಜದಲ್ಲಿ ಕೆಟ್ಟವನಾಗಿ ಗುರುತಿಸಲ್ಪಡುತ್ತಾನೆ ಎಂದು ಕೆಎಂಸಿ ಆಸ್ಪತ್ರೆ ಮಂಗಳೂರಿನ ಸಹಾಯಕ ಪ್ರಾಧ್ಯಾಪಕ ಡಾ.ಅಜಯ್ ಮಲ್ಯ ಹೇಳಿದರು.ಐಕಳದ ಪೊಂಪೈ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಮಾದಕ ವಸ್ತುಗಳ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕೆಎಂಸಿ ಆಸ್ಪತ್ರೆ ಮಂಗಳೂರಿನ ವೈದ್ಯರಾದ ಡಾ.ರೇಷ್ಮಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ತಂಬಾಕು ರಹಿತ ದಿನದ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಾದಕ ವಸ್ತು ನಿಗ್ರಹ ಸಮಿತಿಯ ಮಾರ್ಗದರ್ಶಕ ಮಿಥೇಶ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡೆಸ್ಮಂಡ್ ಡಿಮೆಲ್ಲೊ ಸ್ವಾಗತಿಸಿದರು.ದೈಹಿಕ ಶಿಕ್ಷಣ ಉಪನ್ಯಾಸಕ ಆಲ್ವಿನ್ ಮಿರಾಂದ ಪ್ರಸ್ತಾವನೆಗೈದರು. ಕನ್ನಡ ಉಪನ್ಯಾಸಕ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಆಲಿವಿನ್ ಗೋಮ್ಸ್ ವಂದಿಸಿದರು.